

ನೋಯ್ಡಾ: ಡೆಲಿವರಿ ಏಜೆಂಟ್ ತಪ್ಪಾಗಿ ಬೇರೆ ಮನೆಯೊಂದರ ಕಾಲಿಂಗ್ ಬೆಲ್ ಒತ್ತಿದ್ದರಿಂದ ಜಗಳ ಶುರುವಾಗಿ ದೊಡ್ಡ ಹೊಡೆದಾಟವೇ ನಡೆದು ಹೋಗಿದೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದ ನಿಂಬಸ್ ಸೊಸೈಟಿಯಲ್ಲಿ ಶನಿವಾರ ಈ ಘಟನೆ ನಡೆದಿದೆ.
ತಡರಾತ್ರಿ ಬಂದ ಡೆಲಿವರಿ ಏಜೆಂಟ್ ಆಹಾರವನ್ನು ತಲುಪಿಸಲು ತಪ್ಪಾಗಿ ಮನೆಯೊಂದರ ಡೋರ್‌ಬೆಲ್ ಒತ್ತಿದ್ದಾನೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಮತ್ತು ಡೆಲಿವರಿ ಏಜೆಂಟ್ ನಡುವೆ ಮಾತಿನ ಚಕಮಕಿ ನಡೆದದ್ದು, ಮನೆ ಮಾಲೀಕ ಸೆಕ್ಯೂರಿಟಿ ಗಾರ್ಡ್ ಗಳನ್ನು ಕರೆದಿದ್ದಾನೆ.
ಬಳಿಕ ಸೆಕ್ಯೂರಿಟಿ ಗಾರ್ಡ್ ಗಳು ಹಾಗೂ ಡೆಲಿವರಿ ಏಜೆಂಟ್ ನಡುವೆ ವಾಗ್ವಾದ ನಡೆದಿದೆ.
ಬಳಿಕ ಡೆಲಿವರಿ ಏಜೆಂಟ್ ತನ್ನ ಕಡೆಯವರನ್ನು ಫೋನ್ ಮಾಡಿ ಕರೆದಿದ್ದು, ಎರಡು ಕಡೆಯವರು ಕೋಲು ಮತ್ತು ಕಬ್ಬಿಣದ ರಾಡ್‌ಗಳಿಂದ ಹೊಡೆದಾಡಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜಗಳವಾದ ಸ್ವಲ್ಪ ಸಮಯದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬೈಕ್ ನಲ್ಲಿ ಬಂದವರು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಡೆಲಿವರಿ ಏಜೆಂಟ್ ಕಡೆಯ ನಾಲ್ವರು ಹಾಗೂ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Advertisement