

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ 'ದರ್ಪೋಕ್' (ಹೇಡಿ) ಮತ್ತು ಅಸುರಕ್ಷಿತ ರಾಜಕಾರಣಿ ಎಂದು ಕರೆದ ಕೆಲವು ದಿನಗಳ ನಂತರ ತಮಗೆ ಜೀವ ಬೆದರಿಕೆ ಬರುತ್ತಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಶಕೀಲ್ ಅಹ್ಮದ್ ಸೋಮವಾರ ಹೇಳಿದ್ದಾರೆ.
ಬಿಹಾರದ ಮೂರು ಬಾರಿ ಶಾಸಕ ಮತ್ತು ಎರಡು ಬಾರಿ ಸಂಸದರಾಗಿರುವ ಅಹ್ಮದ್, ಪ್ರತಿಕೃತಿ ದಹನದ ನೆಪದಲ್ಲಿ ಪಾಟ್ನಾ ಮತ್ತು ಮಧುಬನಿಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸುವಂತೆ ರಾಹುಲ್ ಗಾಂಧಿ ಆದೇಶ ಹೊರಡಿಸಿರುವುದಾಗಿ ಕಾಂಗ್ರೆಸ್ ಸಹೋದ್ಯೋಗಿಗಳಿಂದಲೇ ಮಾಹಿತಿ ತಿಳಿದುಬಂದಿರುವುದಾಗಿ ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, "ಇದು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ" ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪ್ರತ್ಯೇಕ ಪೋಸ್ಟ್ ನಲ್ಲಿ ಅವರು ವಾಟ್ಸಾಪ್ ಗ್ರೂಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಕ್ಕಾಗಿ ಅಹ್ಮದ್ ಅವರ ಪ್ರತಿಕೃತಿಯನ್ನು ಸುಡುವಂತೆ ವ್ಯಕ್ತಿಯೊಬ್ಬರು ಇತರ ಗುಂಪಿನ ಸದಸ್ಯರನ್ನು ಕೇಳಿದ್ದಾರೆ.
ಈ ಮಧ್ಯೆ ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿದ ಅಹ್ಮದ್, ಕಾಂಗ್ರೆಸ್ ನಲ್ಲಿ ಹಲವು ಸ್ನೇಹಿತರಿಂದಲೇ ಪದೇ ಪದೇ ಕರೆಗಳು ಬರುತ್ತಿವೆ. ಅವರ ಮನೆ ಮೇಲೆ ದಾಳಿ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂಬುದು ತಿಳಿದುಬಂದಿದೆ.
ನನ್ನ ಅಭಿಪ್ರಾಯ ತಪ್ಪಾಗಿರಬಹುದು ಆದರೆ, ಅದನ್ನು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ ಎಂದಿದ್ದಾರೆ. ರಾಹುಲ್ ಗಾಂಧಿಯೇ ಇಂತಹ ಆದೇಶ ಹೊರಡಿಸಿರುವುದು ಖಂಡನೀಯ ಎಂದಿದ್ದಾರೆ.
Advertisement