ಜಾರ್ಖಂಡ್ ಕಾಂಗ್ರೆಸ್'ನಲ್ಲಿ ಭುಗಿಲೆದ್ದ ಅಸಮಾಧಾನ: ಸಚಿವರ ವಿರುದ್ಧ ತಿರುಗಿಬಿದ್ದ ಶಾಸಕರು, ಹೈಕಮಾಂಡ್'ಗೆ ದೂರು

ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿರುವ ಬಂಡಾಯ ಶಾಸಕರು, ಸಚಿವರು ಪಕ್ಷ ಹಾಗೂ ಶಾಸಕರ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ
Updated on

ರಾಂಚಿ: ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಒಳಗಿರುವ ಅಸಮಾಧಾನ ಬಹಿರಂಗವಾಗಿದೆ. ಸಚಿವರ ವಿರುದ್ಧ ಬಂಡಾಯ ಶಾಸಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿರುವ ಬಂಡಾಯ ಶಾಸಕರು, ಸಚಿವರು ಪಕ್ಷ ಹಾಗೂ ಶಾಸಕರ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಚಿವರು ಶಾಸಕರ ಸಮಸ್ಯೆಗಳಿಗೆ ಸೂಕ್ತ ಆದ್ಯತೆ ನೀಡುತ್ತಿಲ್ಲ ಮತ್ತು ಕ್ಷೇತ್ರಗಳ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್, ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವ ಮಹಾತೋ ಕಮ್ಲೇಶ್ ಹಾಗೂ ಸಚಿವರನ್ನು ದೆಹಲಿಗೆ ಕರೆಸಿ ಸಭೆ ನಡೆಸಿದೆ ಎಂದು ತಿಳಿದುಬಂದಿದೆ.

ಖರ್ಗೆ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ
ಬಡವರು ತಮ್ಮ ಹಕ್ಕುಗಳಿಗಾಗಿ ಹೋರಾಡದಿದ್ದರೆ ಹಿಟ್ಲರ್- ಮುಸೊಲಿನಿಯಂತವರು ದೇಶ ಆಳುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಸಭೆಯಲ್ಲಿ ಜಾರ್ಖಂಡ್‌ನ ಇತ್ತೀಚಿನ ರಾಜಕೀಯ ಸ್ಥಿತಿ, ಪಕ್ಷದ ಸಂಘಟನಾ ಸ್ಥಿತಿ ಹಾಗೂ ಮುಂದಿನ ಚುನಾವಣಾ ತಂತ್ರಗಳ ಕುರಿತು ಚರ್ಚಿಸಲಾಗಿದೆ. ಜೊತೆಗೆ ಶಾಸಕರು ಎತ್ತಿದ ಅಸಮಾಧಾನಗಳ ಬಗ್ಗೆಯೂ ಸಚಿವರನ್ನು ಪ್ರಶ್ನಿಸಲಾಗಿದೆ. ವಿಶೇಷವಾಗಿ, ಶಾಸಕರೊಂದಿಗೆ ಸಮನ್ವಯ ಕೊರತೆ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸದಿರುವ ಕುರಿತು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ರಾಜ್ಯ ಉಸ್ತುವಾರಿ ಕೆ. ರಾಜು ಅವರಿಗೆ ಈ ವಿಷಯವನ್ನು ಪರಿಶೀಲಿಸಲು ಮತ್ತು ಸಂಬಂಧಪಟ್ಟ ನಾಯಕರೊಂದಿಗೆ ಚರ್ಚೆ ನಡೆಸಿ ವರದಿ ಸಲ್ಲಿಸುವಂತೆಯೂ ಸೂಚಿಸಿದೆ ಎಂದು ತಿಳಿದುಬಂದಿದೆ.

ಏತನ್ಮಧ್ಯೆ ಜಾರ್ಖಂಡ್ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಈ ಒಳಭೇದಗಳು ಪಕ್ಷದ ಸಂಘಟನೆ ಮತ್ತು ಸರ್ಕಾರದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com