

ಮುಂಬೈ: ಬಾರಾಮತಿಯಲ್ಲಿ ನಡೆ ವಿಮಾನ ಪತನದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನಿಧನರಾದ ಹಿನ್ನೆಲೆಯಲ್ಲಿ ಎನ್ ಸಿಪಿ ಮುಂದಿನ ಸಾರಥಿ ಯಾರು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಈ ದುರಂತವು ಅವರ ಎನ್‌ಸಿಪಿ ಪಕ್ಷಕ್ಕೂ ಮತ್ತು ಮಹಾರಾಷ್ಟ್ರದ ರಾಜಕೀಯಕ್ಕೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಜಿತ್ ಪವಾರ್ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್ ಅವರು ಈಗ ಎನ್‌ಸಿಪಿ ಮತ್ತು ಮಹಾರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಅಜಿತ್ ಪವಾರ್ ಅವರು ನಿಧನರಾಗಿರುವುದರಿಂದ ಸುನೇತ್ರಾ ಅವರ ಪುತ್ರ ಪಾರ್ಥ್ ಪವಾರ್ ಅಥವಾ ಸೋದರಸಂಬಂಧಿ ರೋಹಿತ್ ಪವಾರ್ ಅವರು ನಾಯಕತ್ವದ ಸ್ಥಾನಗಳನ್ನು ಬಯಸಬಹುದು. ಆದರೆ, ಸುನೇತ್ರಾ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ತಮ್ಮದೇ ಆದ ಸಂಪರ್ಕಗಳನ್ನು ಬೆಳೆಸಿಕೊಂಡಿದ್ದಾರೆ.
ಪ್ರಸ್ತುತ, ಈ ಸಹಾನುಭೂತಿಯ ಅಂಶವು ಅವರ ಪುತ್ರ ಅಥವಾ ಸೋದರಸಂಬಂಧಿಗಳಿಗಿಂತ ಸುನೇತ್ರಾ ಅವರಿಗೆ ಹೆಚ್ಚಾಗಿರುತ್ತದೆ. ಸುನೇತ್ರಾ ಪವಾರ್ ಅವರು ಎನ್‌ಸಿಪಿಯ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಬ್ಬರಾಗಬಹುದು. ತಮ್ಮ ಪತಿಯ ಸ್ಥಾನವನ್ನು, ಅಂದರೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಅವರು ಪಡೆಯುತ್ತಾರೆಯೇ? ಮಹಾರಾಷ್ಟ್ರ ರಾಜಕೀಯದ ದಿಕ್ಕನ್ನು ನೋಡಿದರೆ ಯಾವ ಅಂಶವನ್ನು ತಳ್ಳಿಹಾಕಲಾಗದು.
ಸುನೇತ್ರಾ ಅವರು ಕೃಷಿ-ರಾಜಕೀಯ ಕುಟುಂಬದಿಂದ ಬಂದವರು. ಅವರು ರಾಜಕಾರಣಿ ಮಾತ್ರವಲ್ಲದೆ, ಸಮಾಜ ಸೇವಕಿ, ಉದ್ಯಮಿ ಮತ್ತು ಶೈಕ್ಷಣಿಕ ನಿರ್ವಾಹಕಿ ಕೂಡ. ಆರು ಬಾರಿ ಉಪ ಮುಖ್ಯಮಂತ್ರಿಯಾಗಿ ಮತ್ತು ಪವಾರ್ ಕುಟುಂಬದ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಅಜಿತ್ ಪವಾರ್ ಅವರ ಪತ್ನಿಯಾಗಿದ್ದರೂ, ಸುನೇತ್ರಾ ಅವರು ಎಂದಿಗೂ ಅವರ ನೆರಳಿನಲ್ಲಿ ಉಳಿದವರಲ್ಲ.
ಸುನೇತ್ರಾ ತಮ್ಮದೇ ಆದ ರಾಜಕೀಯ ಮತ್ತು ಸಾಮಾಜಿಕ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅಜಿತ್ ಪವಾರ್ ಸಾವಿನ ಬೆನ್ನಲ್ಲೇ ಎನ್ ಸಿಪಿಯಲ್ಲಿ ಪವರ್ ಶಿಫ್ಟ್ ಬಗ್ಗೆ ಮಾತುಕತೆಗಳು ತೆರೆಮರೆಯಲ್ಲಿ ಆರಂಭವಾಗಿವೆ.
ಗಣ್ಯ ರಾಜಕೀಯ ವ್ಯಕ್ತಿ ಅಸುನೀಗಿದರೆ ಅವರ ಪತ್ನಿ ಅಥವಾ ಕುಟುಂಬದ ಯಾವುದೇ ಸದಸ್ಯರಿಗೆ ಮುಂದಿನ ನಾಯಕತ್ವಕ್ಕಾಗಿ ಮಣೆ ಹಾಕುವ ಸಂಪ್ರದಾಯವಿದೆ. ಅದೇ ಕಾರಣಕ್ಕಾಗಿ ಅಜಿತ್ ಪವಾರ್ ಪತ್ನಿಯವರಿಗೆ ಎನ್ ಸಿಪಿಯಲ್ಲಿ ಮುಂದೆ ದೊಡ್ಡ ಸ್ಥಾನ ಸಿಗಬಹುದೇ ಎಂದು ಅಂದಾಜಿಸಲಾಗಿದೆ.
ಮೂಲತಃ ಮರಾಠವಾಡ ಪ್ರದೇಶದ ಧರಾಶಿವ್‌ನಿಂದ ಬಂದ ಅವರು ರಾಜಕೀಯವಾಗಿ ಪ್ರಭಾವಶಾಲಿ ಕುಟುಂಬದಿಂದ ಬಂದವರು ಮತ್ತು ಮಾಜಿ ರಾಜ್ಯ ಸಚಿವ ಮತ್ತು ಲೋಕಸಭಾ ಸಂಸದ ಪದಮ್‌ಸಿಂಹ ಪಾಟೀಲ್ ಅವರ ಸಹೋದರಿ.
1985 ರಲ್ಲಿ ಅಜಿತ್ ಪವಾರ್ ಅವರನ್ನು ವಿವಾಹವಾದ ಸುನೇತ್ರಾ ಅವರನ್ನು ಪವಾರ್ ಕುಟುಂಬದ ಸೊಸೆ "ಪವಾರ್ ಬಹು" ಎಂದು ಬಹಳ ಹಿಂದಿನಿಂದಲೂ ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಶರದ್ ಪವಾರ್ ಅವರ ಮಗಳು ಹಾಗೂ ಸುನೇತ್ರಾ ಅವರ ನಾದಿನಿ ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿದ್ದರು. ಅಲ್ಲಿಯವರೆಗೂ ಅವರು ತಮ್ಮ ಜೀವನದ ಬಹುಪಾಲು ಕಾಲ ಸಾರ್ವಜನಿಕವಾಗಿ ಹೆಚ್ಚಾಗಿ ಗುರುತಿಸಿಕೊಂಡಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ವಿರುದ್ಧ ಸೋಲನುಭವಿಸಿದರು, ಆದಾದ ನಂತರ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.
Advertisement