

ಅಸ್ಸಾಂ: ಮಿಯಾ ಮುಸ್ಲಿಮರ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೀಡಿರುವ ಹೇಳಿಕೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಬಿಜೆಪಿ ನಾಯಕ ಶರ್ಮಾ ವಿರುದ್ಧ ಪ್ರತಿಪಕ್ಷಗಳು ಸೇರಿದಂತೆ ಮುಸ್ಲಿಂ ನಾಯಕರು ಮುಗಿಬಿದಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.
ಹಿಮಂತ ಬಿಸ್ವಾ ಶರ್ಮಾ ಕೇವಲ ಮಿಯಾಗಳನ್ನು ಗುರಿಯಾಗಿಸಿಕೊಂಡಿಲ್ಲ. ಎಲ್ಲಾ ಬಡವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಕೆಲವು ಮುಸ್ಲಿಂ ಮುಖಂಡರು ಹೇಳಿದರೆ, ಮತ್ತೊಬ್ಬ ಶಾಸಕ ಮಿಯಾ ಮುಸ್ಲಿಮರು ಮುಂದಿನ 15 ವರ್ಷಗಳಲ್ಲಿ "ಅಸ್ಸಾಂ ಮಾತ್ರವಲ್ಲದೆ ಜಗತ್ತನೇ ಆಳ್ತಾರೆ ಎಂದಿದ್ದಾರೆ.
ಮಿಯಾ ಎಂಬ ಪದವನ್ನು ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಈ ಹಿಂದೆ ದೂಷಣೆಯಾಗಿ ಬಳಸಲಾಗುತ್ತಿತ್ತು. ಈಗ ಅದನ್ನು ಒಂದು ಸಮುದಾಯವೇ ಆಕ್ರಮಿಸಿಕೊಂಡಿದೆ.
ಅಸ್ಸಾಂ ಬಿಜೆಪಿ ಮತ್ತು ಹಿಮಂತ ಬಿಸ್ವಾ ಶರ್ಮಾ ರಾಜ್ಯದ ಮುಸ್ಲಿಂ ಸಮುದಾಯಗಳ ನಡುವೆ ವ್ಯತ್ಯಾಸವನ್ನು ತೋರಿಸುತ್ತಿದ್ದಾರೆ. ಹಿಮಂತ ಅವರು ಬೆಂಗಾಲಿ ಮಾತನಾಡುವ 'ಮಿಯಾ' ಸಮುದಾಯದ ಮೇಲೆ ದಾಳಿ ಮಾಡುತ್ತಿದ್ದಾರೆ, ಆದರೆ ಅಸ್ಸಾಂನ ಸ್ಥಳೀಯ ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಷ್ಟಕ್ಕೂ ಏನಿದು ವಿವಾದ?
ಆಟೋ ರಿಕ್ಷಾದ ಮಿಯಾಸ್ ಮುಸ್ಲಿಂರು 5 ರೂ. ಕೇಳಿದ್ರೆ 4 ರೂ. ಕೊಡಿ. ಅವರಿಗೆ ತೀವ್ರ ರೀತಿಯ ತೊಂದರೆ ಎದುರಾದರೆ ಮಾತ್ರ ಅಸ್ಸಾಂ ತೊರೆಯುತ್ತಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಈ ವಾರದ ಆರಂಭದಲ್ಲಿ ಹೇಳಿದ್ದರು. ಅಲ್ಲದೇ, ಅಸ್ಸಾಂನಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR)ನಡೆದಾಗ 4 ರಿಂದ ಐದು ಲಕ್ಷ ಮಿಯಾ ಮುಸ್ಲಿಂ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಶರ್ಮಾ ಹೇಳಿದ್ದರು. ಈ ವರ್ಷವೇ ಅಸ್ಸಾಂನಲ್ಲಿ ಚುನಾವಣೆ ನಡೆಯಲಿದೆ.
ಅಸ್ಸಾಂನಲ್ಲಿ ಬಾಂಗ್ಲಾ ವಲಸಿಗರ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂಷಿಸಿದ ಹಿಮಾಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ನನ್ನನ್ನು ಎಷ್ಟು ಬೇಕಾದರೂ ನಿಂದಿಸಲಿ, ಮಿಯಾ ಜನರನ್ನು ಸಂಕಷ್ಟಕ್ಕೆ ದೂಡುವುದೇ ನನ್ನ ಕೆಲಸ ಎಂಬ ಹೇಳಿಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಖ್ಯಮಂತ್ರಿಗಳ ಹೇಳಿಕೆ ಭಾರೀ ಕೋಲಾಹಲವನ್ನು ಸೃಷ್ಟಿಸಿದೆ.
"ಇದೊಂದು ದೊಡ್ಡ ದೌರ್ಭಾಗ್ಯ. ಹಿಮಂತ ಬಿಸ್ವಾ ಶರ್ಮಾ, ದಯವಿಟ್ಟು ನಿಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳಿ. ಇಲ್ಲದಿದ್ದರೆ ಈ ಬಾರಿ ಅಸ್ಸಾಂನ ಮಿಯಾ ಜನರು ನಿಮ್ಮನ್ನು ಸೋಲಿಸುತ್ತಾರೆ." ಎಂದು ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರಲ್ಲಿ ದೊಡ್ಡ ಬೆಂಬಲವನ್ನು ಹೊಂದಿರುವ AIUDF ನ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿದರು.
ಮಿಯಾ ಜನರು ಯಾರಿಗೂ ಹೆದರುವುದಿಲ್ಲ. ಇಂದು ನೀವು ಅಧಿಕಾರಕ್ಕಾಗಿ, ನೀವು ಮಿಯಾ ಮುಸ್ಲಿಮರನ್ನು ಅವಮಾನಿಸುತ್ತಿದ್ದೀರಿ, ಯಾವುದೇ ಸಮುದಾಯವನ್ನು ಈ ರೀತಿ ಅವಮಾನಿಸಬೇಡಿ. ಹಿಮಂತ ಬಿಸ್ವಾ ಶರ್ಮಾ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿಜೆಪಿ ಸೋಲುತ್ತದೆ. ಇದನ್ನು ನೆನಪಿಟ್ಟುಕೊಳ್ಳಿ ಎಂದು ಅಜ್ಮಲ್ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ ಹಿಮಂತ ಅವರ ಹೇಳಿಕೆ ಬಡವರ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಮಿಯಾ ರಿಕ್ಷಾದವರಿಗೆ 5 ರೂಪಾಯಿ ಬದಲು 4 ರೂಪಾಯಿ ಕೊಡಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಯಾವುದೇ ಸಮುದಾಯವನ್ನು ಅವಮಾನಿಸಿಲ್ಲ, ಬದುಕಲು ರಿಕ್ಷಾ ಓಡಿಸುವ ಬಡವರು ಮತ್ತು ಸಂಕಷ್ಟದಲ್ಲಿರುವವರನ್ನು ಅವಮಾನಿಸಿದ್ದಾರೆ ಎಂದು ಅಸ್ಸಾಂನ ಕಾಂಗ್ರೆಸ್ ವಕ್ತಾರ ಜೆಹೆರುಲ್ ಇಸ್ಲಾಂ ಹೇಳಿದ್ದಾರೆ. ದಿನಗೂಲಿ ಕಾರ್ಮಿಕರನ್ನು ಗುರಿಯಾಗಿಸುವುದು ಮತ್ತು ಅವರ ಶ್ರಮವನ್ನು ಶೋಷಿಸುವುದು ಖಂಡನೀಯ ಎಂದಿದ್ದಾರೆ.
Advertisement