

ಎರ್ನಾಕುಲಂ: ಚಲಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ ಜಿಗಿದ ಇಬ್ಬರು ನರ್ಸ್ ಗಳು ಹೃದಯಾಘಾತದಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ನರಳಾಡುತ್ತಿದ್ದ ವ್ಯಕ್ತಿಯೊಬ್ಬನ ಜೀವ ಕಾಪಾಡಿರುವ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರಿನ ನರ್ಸಿಂಗ್ ವಿದ್ಯಾರ್ಥಿನಿ ಆರ್ದ್ರಾ ರಾಜ್ ಮತ್ತು ಅಂಗಮಾಲಿಯ ಎಲ್‌ಎಫ್ ಆಸ್ಪತ್ರೆಯ ಸ್ಟಾಫ್ ನರ್ಸ್ ಅಂಜಲಿ ಬೈಜು ಅವರು ಬಸ್ ನಿಂದ ಜಿಗಿದು ಸಿಪಿಆರ್ ಮಾಡುವ ಮೂಲಕ 43 ವರ್ಷದ ವ್ಯಕ್ತಿಯ ಪ್ರಾಣವನ್ನು ರಕ್ಷಿಸಿದ್ದಾರೆ.
ಬುಧವಾರ ಬೆಳಿಗ್ಗೆ ಕಾಲಡಿ ಸೇತುವೆಯ ಬಳಿಯ ಎಂಸಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಒಕ್ಕಲ್ ಬಳಿಯ ತನ್ನಿಪುಳದಲ್ಲಿ ಲಾಟರಿ ಅಂಗಡಿ ನಡೆಸುತ್ತಿರುವ ಸಿನೋಜ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಾನೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಕಾರಿನ ಒಳಗಡೆ ಕುಸಿದು ಬಿದಿದ್ದಾರೆ. ಇದನ್ನು ನೋಡಿದ ಬಸ್ ನಲ್ಲಿದ್ದ ನರ್ಸ್ ಗಳು, ಕೂಡಲೇ ಜಿಗಿದು ಕಾರಿನ ಬಳಿ ಧಾವಿಸಿ CPR ಮಾಡಿದ್ದಾರೆ.
ಸಿನೋಜ್ ಅಂಗಮಾಲಿಯ ಆಸ್ಪತ್ರೆಗೆ ತಲುಪುವವರೆಗೂ ಇಬ್ಬರೂ ಕಾರಿನೊಳಗೆ ಸಿಪಿಆರ್ ಮುಂದುವರೆಸಿದ್ದಾರೆ. ಹೀಗಾಗಿ ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಚೇತರಿಸಿಕೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ. ಪರೀಕ್ಷೆಯ ನಂತರ ಅಪಧಮನಿ (coronary artery) ಬ್ಲಾಕ್ ಆಗಿರುವುದು ಕಂಡುಬಂದಿತು. ಕೂಡಲೇ ಅವರಿಗೆಆಂಜಿಯೋಪ್ಲ್ಯಾಸ್ಟಿ ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವ ನಿರೀಕ್ಷೆಯಿದೆ.
ಸ್ಥಳೀಯ ನಿವಾಸಿಗಳಿಂದಲೂ ರಕ್ಷಣೆ ಸಾಧ್ಯವಾಯಿತು. ಸಿನೋಜ್ ಎದೆ ನೋವಿನಿಂದ ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ ಎಂದು ತಿಳಿದ ನಂತರ ಪ್ರಯಾಣಿಕರೊಬ್ಬರು ಕಾರನ್ನು ಚಲಾಯಿಸಿದ್ದರೆ ಇತರರು ಆಂಬ್ಯುಲೆನ್ಸ್ ವ್ಯವಸ್ಥೆಗೆ ನೆರವಾಗಿದ್ದಾರೆ.
ನರ್ಸ್ ಗಳ ಸಕಾಲಿಕ ನೆರವು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ವ್ಯಕ್ತಿಯ ಪ್ರಾಣ ಉಳಿಸಿದ್ದಕ್ಕಾಗಿ ಅವರ ತ್ವರಿತ ಪ್ರತಿಕ್ರಿಯೆಯನ್ನು ಅನೇಕರು ಶ್ಲಾಘಿಸಿದ್ದಾರೆ.