

ಮುಂಬೈ: ಅಯೋಧ್ಯೆ ರಾಮ ಮಂದಿರ ದೇಣಿಗೆ "ಲೂಟಿ" ಖಂಡಿಸಿ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ಜುಲೈ 5 ರಿಂದ 'ರಾಮ ರಕ್ಷಾ' ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ದೇಣಿಗೆ ದುರುಪಯೋಗಕ್ಕೆ ಭಾರತೀಯ ಜನತಾ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಲು ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.
ಭಾನುವಾರ(ಜುಲೈ 5) ಮಧ್ಯ ಮುಂಬೈನ ದಾದರ್ ನಲ್ಲಿರುವ ಹನುಮಾನ್ ದೇವಾಲಯದಲ್ಲಿ ಸಭೆ ಸೇರಿ, ಹನುಮಾನ್ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಿಸುವ ಮೂಲಕ ಪ್ರತಿಭಟನೆ ಆರಂಭಿಸುತ್ತೇವೆ. ಅಯೋಧ್ಯೆಯ ರಾಮ ಮಂದಿರದ ದೇಣಿಗೆ 'ಲೂಟಿ' ಹೊಣೆ ಹೊತ್ತುಕೊಳ್ಳುವಂತೆ ಬಿಜೆಪಿ ಮೇಲೆ ಒತ್ತಡ ಹೇರುತ್ತೇವೆ ಎಂದು ಠಾಕ್ರೆ ಹೇಳಿದರು.
"ರಾಮ ದೇವಾಲಯದಲ್ಲಿ ದೊಡ್ಡ ಪ್ರಮಾಣದ ಲೂಟಿ ನಡೆದಿದೆ ಎಂದು ಆರೋಪಿಸಿದ ಠಾಕ್ರೆ, ಎಲ್ಲರೂ ನಮ್ಮೊಂದಿಗೆ ಸೇರಿ ಬಿಜೆಪಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದರು.
ದೇಶಾದ್ಯಂತ ಜನರು ಹಲವು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರದಲ್ಲಿ ಮತ್ತು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮತ್ತು 'ಉದಾಸೀನತೆ' ಪ್ರದರ್ಶಿಸುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಅವಿಭಜಿತ ಶಿವಸೇನೆಯ ಸದಸ್ಯರು ಸೇರಿದಂತೆ ಅನೇಕ ಹಿಂದೂಗಳು ರಾಮ ಮಂದಿರ ಚಳವಳಿಯಲ್ಲಿ ಭಾಗವಹಿಸಿದ್ದರು ಮತ್ತು ಕರಸೇವಕರ ಮೇಲಿನ ದೌರ್ಜನ್ಯ, ಗೋಧ್ರಾ ರೈಲು ದುರಂತ, ಅಹಮದಾಬಾದ್ ಗಲಭೆ ಮತ್ತು ಮುಂಬೈ ಸರಣಿ ಬಾಂಬ್ ಸ್ಫೋಟಗಳು ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಆದರೆ ಬಿಜೆಪಿ ಈ ಘಟನೆಗಳನ್ನು ರಾಜಕೀಯ ಬಂಡವಾಳ ಮಾಡಿಕೊಂಡು ಈಗ 'ಅನಿಯಂತ್ರಿತ ಅಧಿಕಾರ'ವನ್ನು ಅನುಭವಿಸುತ್ತಿದೆ ಎಂದು ಆರೋಪಿಸಿದರು.