

ಕೋಲ್ಕತ್ತಾ: ಪಶ್ಚಿಮ ಬಂಗಾಳ ಪೊಲೀಸರು(WBP) ಶುಕ್ರವಾರ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್(AITC) ಬಣದ 12 ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಗುರುವಾರ, ಟಿಎಂಸಿ ತನ್ನ ಇತರ ಮೂರು ಸ್ಥಗಿತಗೊಂಡ ಬ್ಯಾಂಕ್ ಖಾತೆಗಳಿಂದ ಹಣವನ್ನು ದೈನಂದಿನ ಆಡಳಿತ ಮತ್ತು ಕಾನೂನು ವೆಚ್ಚಗಳಿಗಾಗಿ ಬಳಸಲು ಅನುಮತಿಸಿದ ಒಂದು ದಿನದ ನಂತರ, ಬಂಗಾಳ ಪೊಲೀಸರು, ಇಂದು ವಿವಿಧ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳಲ್ಲಿರು ಟಿಎಂಸಿಯ 12 ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ.
ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ಅವರ ಬಣಕ್ಕೆ ಸೇರಿದ AITCಯ 12 ಖಾತೆಗಳನ್ನು ಸ್ಥಗಿತಗೊಳಿಸಲು ಪೊಲೀಸರು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಿಂದೆ ಸ್ಥಗಿತಗೊಂಡ ಮೂರು ಖಾತೆಗಳು ಸೇರಿದಂತೆ 15 ಬ್ಯಾಂಕ್ ಖಾತೆಗಳಲ್ಲಿ ಸುಮಾರು 1,000 ಕೋಟಿ ರೂ. ಇದೆ.
ಭಿನ್ನಮತೀಯ ಶಾಸಕರ ಆರೋಪದ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು, ಋತಬ್ರತ ಮತ್ತು ಸಂದೀಪನ್ ಸೇರಿದಂತೆ ಏಳು ಬಂಡಾಯ ಶಾಸಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ರಿತಬ್ರತ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಂಡಾಯ ಬಣದ ಶಾಸಕ ವಿಶ್ವನಾಥ್ ದಾಸ್ ಹಣ ದುರುಪಯೋಗದ ಬಗ್ಗೆ ಬಿಧಾನ್ ನಗರ ಪೊಲೀಸರಿಗೆ ದೂರು ನೀಡಿದ ಬಳಿಕ, ಜೂನ್ 19ರಂದು ಮೂರು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಟಿಎಂಸಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳನ್ನು ಕೇವಲ ದೈನಂದಿನ ವೆಚ್ಚಗಳಿಗಾಗಿ ಬಳಸಲು ಅನುಮತಿ ನೀಡಿದೆ.