

ನವದೆಹಲಿ: ಭಾರತೀಯ ನೌಕಾಪಡೆಗೆ ಮತ್ತೊಂದು ವಿಧ್ವಂಸಕ ಯುದ್ಧ ನೌಕೆ ಸೇರ್ಪಡೆಯಾಗಿದ್ದು, ಭಾರತೀಯ ನೌಕಾಪಡೆಯು ತನ್ನ ಹೊಸ ತಲೆಮಾರಿನ ಪ್ರಾಜೆಕ್ಟ್ 17A ಯೋಜನೆಯ ಆರನೇ ಸ್ಟೆಲ್ತ್ ಫ್ರಿಗೇಟ್ ಐಎನ್‌ಎಸ್ ಮಹೇಂದ್ರಗಿರಿ ನೌಕೆಯನ್ನು ಶನಿವಾರ ವಿಶಾಖಪಟ್ಟಣದಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.
ಇದು ಕಳೆದ 18 ತಿಂಗಳ ಅವಧಿಯಲ್ಲಿ ನೌಕಾಪಡೆಗೆ ಸೇರ್ಪಡೆಯಾದ 6ನೇ ಅತ್ಯಾಧುನಿಕ ಯುದ್ಧನೌಕೆಯಾಗಿದೆ. ಸುಮಾರು 6,670 ಟನ್ ತೂಕದ ಈ ಯುದ್ಧನೌಕೆಯನ್ನು ಕೇವಲ 31 ತಿಂಗಳಲ್ಲಿ ನಿರ್ಮಿಸಿ ಹಸ್ತಾಂತರಿಸಲಾಗಿದೆ.
ಈ ಹಿಂದೆ ಇದೇ ಮಾದರಿಯ ಫ್ರಿಗೇಟ್‌ಗಳ ನಿರ್ಮಾಣಕ್ಕೆ ಸುಮಾರು 63 ತಿಂಗಳು ಬೇಕಾಗುತ್ತಿತ್ತು. ಇದು ಭಾರತದ ಯುದ್ಧನೌಕೆ ನಿರ್ಮಾಣ ಸಾಮರ್ಥ್ಯ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ಸೂಚಿಸುತ್ತದೆ.
ಯುದ್ಧನೌಕೆ ಸೇರ್ಪಡೆ ಸಮಾರಂಭದಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಐಎನ್‌ಎಸ್ ಮಹೇಂದ್ರಗಿರಿ ಭಾರತದ ಸಮುದ್ರ ಹಿತಾಸಕ್ತಿಗಳನ್ನು ಕರಾವಳಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ಆಳ ಸಮುದ್ರಗಳಲ್ಲಿಯೂ ರಕ್ಷಿಸಲಿದೆ ಎಂದು ಹೇಳಿದರು.
ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅಳವಡಿಕೆ
ಐಎನ್‌ಎಸ್ ಮಹೇಂದ್ರಗಿರಿಯಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳು, ಮಧ್ಯಮ ವ್ಯಾಪ್ತಿಯ ಮೇಲ್ಮೈ-ದಿಂದ-ವಾಯು ಕ್ಷಿಪಣಿಗಳು, ಬಹುಕಾರ್ಯ ರಾಡಾರ್‌ಗಳು, ಟಾರ್ಪಿಡೊ ಟ್ಯೂಬ್‌ಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್‌ಗಳು, ಎಲೆಕ್ಟ್ರಾನಿಕ್ ವಾರ್‌ಫೇರ್ ವ್ಯವಸ್ಥೆ ಹಾಗೂ ಬಹುಉದ್ದೇಶದ ಹೆಲಿಕಾಪ್ಟರ್‌ಗಳನ್ನು ಅಳವಡಿಸಲಾಗಿದೆ.
ಗಂಟೆಗೆ ಸುಮಾರು 28 ನಾಟಿಕಲ್ ವೇಗದಲ್ಲಿ ಸಂಚರಿಸಬಲ್ಲ ಈ ಯುದ್ಧನೌಕೆಯಲ್ಲಿ 75 ಪ್ರತಿಶತಕ್ಕೂ ಅಧಿಕ ಸ್ವದೇಶಿ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಲಾಗಿದೆ. ಈ ಯುದ್ಧನೌಕೆಯನ್ನು ಭಾರತೀಯ ನೌಕಾಪಡೆಯ ವಾರ್‌ಶಿಪ್ ಡಿಸೈನ್ ಬ್ಯೂರೋ ವಿನ್ಯಾಸಗೊಳಿಸಿದ್ದು, ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ನಿರ್ಮಿಸಿದೆ.
'ನೀಲಗಿರಿ' ವರ್ಗದ ಆರನೇ ಫ್ರಿಗೇಟ್ ನೌಕೆ
ಐಎನ್‌ಎಸ್ ಮಹೇಂದ್ರಗಿರಿ, 'ನೀಲಗಿರಿ' ವರ್ಗದ ಏಳು ಫ್ರಿಗೇಟ್‌ಗಳ ಪೈಕಿ ಆರನೆಯ ನೌಕೆಯಾಗಿದೆ. ಈ ಸರಣಿಯಲ್ಲಿ ಈಗಾಗಲೇ ನೀಲಗಿರಿ, ಉದಯಗಿರಿ, ಹಿಮಗಿರಿ, ತರಗಿರಿ ಮತ್ತು ದುನಗಿರಿ ನೌಕೆಗಳು ಸೇವೆಗೆ ಸೇರ್ಪಡೆಯಾಗಿವೆ. ಏಳನೇ ಹಾಗೂ ಕೊನೆಯ ಫ್ರಿಗೇಟ್ ವಿಂಧ್ಯಗಿರಿ ಸೇರ್ಪಡೆಯಾದ ಬಳಿಕ ಸುಮಾರು ₹45,000 ಕೋಟಿ ವೆಚ್ಚದ ಪ್ರಾಜೆಕ್ಟ್ 17A ಯೋಜನೆ ಪೂರ್ಣಗೊಳ್ಳಲಿದೆ.
ನಿರ್ಮಾಣ ಅವಧಿಯಲ್ಲಿ ಗಮನಾರ್ಹ ಇಳಿಕೆ
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಮಾತನಾಡಿ, ಈ ವರ್ಗದ ಯುದ್ಧನೌಕೆಗಳ ನಿರ್ಮಾಣ ಅವಧಿಯನ್ನು 95 ತಿಂಗಳಿಂದ 75 ತಿಂಗಳಿಗೆ ಇಳಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಅಲ್ಲದೆ, ಐಎನ್‌ಎಸ್ ಮಹೇಂದ್ರಗಿರಿ ಸಾಮಾನ್ಯವಾಗಿ ಐದರಿಂದ ಏಳು ಸಮುದ್ರ ಪರೀಕ್ಷೆಗಳಲ್ಲಿ ಪೂರ್ಣಗೊಳ್ಳುವ ತಾಂತ್ರಿಕ ಮೌಲ್ಯಮಾಪನವನ್ನು ಒಂದೇ ಸಮುದ್ರ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದರು.
ಇನ್ನೂ ನಾಲ್ಕು ಯುದ್ಧನೌಕೆಗಳು ಶೀಘ್ರ ಸೇರ್ಪಡೆ
ರಕ್ಷಣಾ ಮತ್ತು ಭದ್ರತಾ ಮೂಲಗಳ ಪ್ರಕಾರ, ಐಎನ್ಎಸ್ ಮಹೇಂದ್ರಗಿರಿ ಅಲ್ಲದೆ ಮುಂದಿನ ಎರಡು ತಿಂಗಳಲ್ಲಿ ಇನ್ನೂ ನಾಲ್ಕು ನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ. 2026ರೊಳಗೆ ಪ್ರಾಜೆಕ್ಟ್ 17Aಯ ಕೊನೆಯ ಫ್ರಿಗೇಟ್, ಜಲಾಂತರ್ಗಾಮಿ ವಿರೋಧಿ ಅಲ್ಪ ಆಳದ ಯುದ್ಧನೌಕೆಗಳು (ASW-SWC), ಡೈವಿಂಗ್ ಸಪೋರ್ಟ್ ವೆಸೆಲ್ 'ನಿಪುಣ್' ಸೇರಿದಂತೆ ಕನಿಷ್ಠ 18 ನೌಕೆಗಳನ್ನು ಸೇವೆಗೆ ಸೇರಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಸವಾಲಿನ ನಡುವೆ ಭಾರತಕ್ಕೆ ಬಲ
ವಿಶ್ವದಲ್ಲೇ ಅತಿದೊಡ್ಡ ನೌಕಾಪಡೆ ಹೊಂದಿರುವ ಚೀನಾ ಈಗಾಗಲೇ 370ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ಹೊಂದಿದ್ದು, ನಿರಂತರವಾಗಿ ಹೊಸ ನೌಕೆಗಳನ್ನು ಸೇರ್ಪಡೆಗೊಳಿಸುತ್ತಿದೆ. ಜೊತೆಗೆ ತನ್ನ ಸಂಶೋಧನಾ ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ನೌಕಾಪಡೆಯ ಸಾಮರ್ಥ್ಯವನ್ನು ವೇಗವಾಗಿ ವೃದ್ಧಿಸಲಾಗುತ್ತಿದೆ ಎಂದು ರಕ್ಷಣಾ ವಲಯದ ಮೂಲಗಳು ತಿಳಿಸಿವೆ.
'ಭವಿಷ್ಯದ ಯುದ್ಧಗಳಲ್ಲಿ ಎಐ ಪ್ರಮುಖ ಪಾತ್ರ ವಹಿಸಬಹುದು'
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ (AI), ಸೈಬರ್ ತಂತ್ರಜ್ಞಾನ ಹಾಗೂ ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು ಯುದ್ಧದ ಸ್ವರೂಪವನ್ನು ಬದಲಾಯಿಸುತ್ತಿದ್ದರೂ, ಸಾಂಪ್ರದಾಯಿಕ ಸೇನಾ ಸಾಮರ್ಥ್ಯವೇ ದೇಶದ ರಕ್ಷಣೆಯ ಮೂಲಾಧಾರವಾಗಿದೆ ಎಂದು ಹೇಳಿದರು.
"ಭವಿಷ್ಯದ ಯುದ್ಧಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸಬಹುದು. ಆದರೆ ಅಂತಿಮ ಗೆಲುವು ರಾಷ್ಟ್ರೀಯ ಸಂಕಲ್ಪ, ಉತ್ತಮ ತರಬೇತಿ ಪಡೆದ ಸೈನಿಕರು ಮತ್ತು ವಿಶ್ವಾಸಾರ್ಹ ಸೇನಾ ಶಕ್ತಿಯಿಂದಲೇ ಸಾಧ್ಯ," ಎಂದು ಅವರು ಹೇಳಿದರು. 'ಆಪರೇಷನ್ ಸಿಂಧೂರ್' ಉದಾಹರಿಸಿದ ಅವರು, ತಂತ್ರಜ್ಞಾನ ಮತ್ತು ಸೈನಿಕರ ಸಾಮರ್ಥ್ಯ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.
'ಆಪರೇಷನ್ ಊರ್ಜಾ ಸುರಕ್ಷಾ' ಪ್ರಸ್ತಾಪ
ಪಶ್ಚಿಮ ಏಷ್ಯಾದ ಸಂಘರ್ಷದ ಸಂದರ್ಭದಲ್ಲಿ 'ಆಪರೇಷನ್ ಊರ್ಜಾ ಸುರಕ್ಷಾ' ಅಡಿಯಲ್ಲಿ ₹9,000 ಕೋಟಿಗೂ ಅಧಿಕ ಮೌಲ್ಯದ ಸರಕು ಸಾಗಿಸುತ್ತಿದ್ದ 18 ವಾಣಿಜ್ಯ ಹಡಗುಗಳಿಗೆ ಭಾರತೀಯ ನೌಕಾಪಡೆ ಭದ್ರತೆ ಒದಗಿಸಿತ್ತು.
ಇದರಿಂದ ಭಾರತ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ 'ಮೊದಲ ಪ್ರತಿಕ್ರಿಯೆ ನೀಡುವ ರಾಷ್ಟ್ರ' ಹಾಗೂ 'ಆದ್ಯತೆಯ ಭದ್ರತಾ ಪಾಲುದಾರ' ಎಂಬ ತನ್ನ ಪಾತ್ರವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಈ ಹಿಂದಿನ ದಿನ ವಿಶಾಖಪಟ್ಟಣದಲ್ಲಿ ನಡೆದ 'ಬರಾಖಾನಾ' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, "ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಾರತವೇ ಪ್ರಮುಖ ಭದ್ರತಾ ಭರವಸೆ. ಭಾರತದ ಶೇ.90ಕ್ಕೂ ಅಧಿಕ ವ್ಯಾಪಾರ ಇದೇ ಸಾಗರ ಮಾರ್ಗದ ಮೂಲಕ ನಡೆಯುತ್ತದೆ. ಈ ಪ್ರದೇಶ ನಮ್ಮ ಅಂಗಳವಾಗಿದ್ದು, ಅದರ ಭದ್ರತೆ ನಮ್ಮ ಹೊಣೆಗಾರಿಕೆ" ಎಂದು ಹೇಳಿದ್ದರು.
ಭವಿಷ್ಯದಲ್ಲಿ ಯಾವುದೇ ಅಧಿಕೃತ ಯುದ್ಧ ಘೋಷಣೆಯಿಲ್ಲದೆ ಸಂಘರ್ಷಗಳು ಆರಂಭವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ ಅವರು, ಸಶಸ್ತ್ರ ಪಡೆಗಳಿಗೆ ವಿಶ್ವದ ಅತ್ಯುತ್ತಮ ಶಸ್ತ್ರಾಸ್ತ್ರಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಆದರೆ, "ಯುದ್ಧಗಳನ್ನು ಗೆಲ್ಲುವುದು ಕೇವಲ ಶಸ್ತ್ರಾಸ್ತ್ರಗಳಲ್ಲ; ಅವುಗಳನ್ನು ಬಳಸುವ ಸೈನಿಕರ ಧೈರ್ಯ, ತರಬೇತಿ ಮತ್ತು ಸಂಕಲ್ಪವೇ ನಿಜವಾದ ಗೆಲುವು ತಂದುಕೊಡುತ್ತದೆ" ಎಂದು ರಾಜನಾಥ್ ಸಿಂಗ್ ಹೇಳಿದರು.