

ನವದೆಹಲಿ: ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆ ಮತ್ತು ಸುಧಾರಣೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಬದಲು, ಮೋದಿ ಸರ್ಕಾರ "ಹೇಡಿತನ ಮತ್ತು ಅಮಾನವೀಯ ಕ್ರೌರ್ಯ" ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳನ್ನು "ದೇಶದ ಭವಿಷ್ಯದ ವಾರಸುದಾರರು" ಎಂದು ಕಾಣಬೇಕಾದ ಸರ್ಕಾರ, ಅವರನ್ನು "ರಾಷ್ಟ್ರದ ಶತ್ರುಗಳಂತೆ" ನಡೆಸಿಕೊಳ್ಳುತ್ತಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಸುಧಾರಣೆಗಳಿಗೆ ಆಗ್ರಹಿಸಿದ್ದಾರೆ.
ಮೋದಿ ಸರ್ಕಾರ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದ್ದು, ದೇಶದ ವಿದ್ಯಾರ್ಥಿಗಳು ಈ ಸರ್ಕಾರದ ನಿಜವಾದ ಮುಖವನ್ನು ಬಯಲಿಗೆಳೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ನಿಲ್ಲುವುದು ಮತ್ತು ಅವರ ಭವಿಷ್ಯವನ್ನು ರಕ್ಷಿಸುವುದು ನೈತಿಕ, ರಾಜಕೀಯ ಹಾಗೂ ಸಾಂವಿಧಾನಿಕ ಕರ್ತವ್ಯ ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.
'ಶಿಕ್ಷಣ ವ್ಯವಸ್ಥೆಯ ಕುಸಿತ, ಯುವ ಭಾರತದ ಆಘಾತ' (An education system's collapse, young India's trauma) ಶೀರ್ಷಿಕೆಯಡಿ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಅವರು, "ಇಂದಿನ ನಿರಾಶಾದಾಯಕ ಶಿಕ್ಷಣ ವ್ಯವಸ್ಥೆ ಹಾಗೂ ಹೊಣೆಗಾರಿಕೆ ವಹಿಸಲು ಅಥವಾ ರಚನಾತ್ಮಕವಾಗಿ ಸ್ಪಂದಿಸಲು ಮೋದಿ ಸರ್ಕಾರ ತೋರಿಸುತ್ತಿರುವ ಅಹಂಕಾರ ಮತ್ತು ನಿರಾಸಕ್ತಿ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಕಾರಣವಾಗಿದೆ" ಎಂದು ಬರೆದಿದ್ದಾರೆ.
ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಕೇಂದ್ರ ಗೃಹ ಸಚಿವರ ನೇರ ನಿಯಂತ್ರಣದಲ್ಲಿರುವ ಪೊಲೀಸ್ ಸಿಬ್ಬಂದಿ ನಡೆಸಿರುವ "ದೌರ್ಜನ್ಯ" ಈ ಸರ್ಕಾರಕ್ಕೆ ಹೊಸದೇನಲ್ಲ ಎಂದು ಅವರು ಆರೋಪಿಸಿದ್ದಾರೆ.
"2020ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ–ರಾಷ್ಟ್ರೀಯ ನಾಗರಿಕರ ನೋಂದಣಿ (CAA–NRC) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಸಶಸ್ತ್ರ ಪೊಲೀಸರು ಮತ್ತು ಅರೆಸೇನಾ ಪಡೆಗಳು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಿಗೆ ನುಗ್ಗಿ ನಡೆಸಿದ ದಾಳಿಯನ್ನು ನಾವು ಇನ್ನೂ ಮರೆತಿಲ್ಲ. ಭಾರತದ ಮಹಿಳಾ ಕುಸ್ತಿಪಟುಗಳ ವಿರುದ್ಧ ನಡೆದ ಅತಿರೇಕಗಳೂ ನಮ್ಮ ನೆನಪಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿರುವುದಷ್ಟೇ ಅಲ್ಲ, "ಸಂಪೂರ್ಣ ದಂಡಮುಕ್ತತೆ, ಆತ್ಮಭ್ರಮೆ ಮತ್ತು ಸಂವೇದನಾಶೂನ್ಯತೆ"ಯಿಂದ ವರ್ತಿಸುವುದನ್ನು ಅಭ್ಯಾಸವನ್ನಾಗಿಸಿಕೊಂಡಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ಕುಸಿತದ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಗಳು ಇತ್ತೀಚಿನ ವಾರಗಳಲ್ಲಿ ತೀವ್ರಗೊಂಡಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗಳು ಸರಳವಾಗಿವೆ — ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆ ಮತ್ತು ಶಿಕ್ಷಣ ಸುಧಾರಣೆ. ಆದರೆ ಮೋದಿ ಸರ್ಕಾರ ಅವರ ಧೈರ್ಯಕ್ಕೆ ಪ್ರತಿಯಾಗಿ ಹೇಡಿತನ ಮತ್ತು ಅಮಾನವೀಯ ಕ್ರೌರ್ಯ ತೋರಿದೆ. ಅವರನ್ನು ದೇಶದ ಭವಿಷ್ಯದ ವಾರಸುದಾರರಂತೆ ಅಲ್ಲ, ರಾಷ್ಟ್ರದ ಶತ್ರುಗಳಂತೆ ನಡೆಸಿಕೊಂಡಿದೆ ಎಂದು ಹೇಳಿದ್ದಾರೆ.
ಅಪಖ್ಯಾತಿ ದಿನ
ಜುಲೈ 20ನ್ನು "ಅಪಖ್ಯಾತಿಯ ದಿನ" ಎಂದು ಬಣ್ಣಿಸಿದ ಸೋನಿಯಾ ಗಾಂಧಿ, ಅಂದು ದೆಹಲಿ ಪೊಲೀಸರು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPF) ಲಾಠಿ ಪ್ರಹಾರ ಮತ್ತು ಆಶ್ರುವಾಯು ಪ್ರಯೋಗದ ಮೂಲಕ ವಿದ್ಯಾರ್ಥಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದವು ಎಂದು ಆರೋಪಿಸಿದ್ದಾರೆ.
ಅನೇಕ ಶಾಂತಿಯುತ ಪ್ರತಿಭಟನಾಕಾರರು ಗಾಯಗೊಂಡಿದ್ದು, ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೂ ಪೊಲೀಸರು ಮನಬಂದಂತೆ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
"ಪೆಲೆಟ್‌ಗಳಿಂದ ಗಾಯಗೊಂಡಿರುವ ಯುವಕರ ದೃಶ್ಯಗಳು ದೇಶವನ್ನು ಬೆಚ್ಚಿಬೀಳಿಸಿವೆ. ಇಂತಹ ಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅನುಮೋದನೆ ಇದ್ದಿರಬೇಕು ಎಂಬುದರಲ್ಲಿ ಸಂದೇಹವಿಲ್ಲ," ಎಂದು ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.
"ಆ ದಿನದ ದೃಶ್ಯಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿವೆ. ಅವು ನಮ್ಮ ಸಮೂಹ ಅಂತಃಕರಣವನ್ನು ಕದಡಿವೆ. ಆದರೆ ಸರ್ಕಾರ ಮತ್ತು ಅದರ ಪರವಾಗಿರುವ ಮಾಧ್ಯಮಗಳು ಮಾತ್ರ ಈ ಸ್ವಯಂಸ್ಫೂರ್ತ ಪ್ರತಿಭಟನೆಯ ಬಗ್ಗೆ ಸುಳ್ಳು ಕಥೆಗಳನ್ನು ಹೆಣೆಯುತ್ತಿವೆ. ಇವರು ನಮ್ಮ ಮಕ್ಕಳು, ನಮ್ಮ ಯುವಕರು ಎಂಬುದನ್ನು ಸರ್ಕಾರ ನೆನಪಿಸಿಕೊಳ್ಳಬೇಕಾದ ಸಮಯ ಬಂದಿದೆ," ಎಂದು ಹೇಳಿದ್ದಾರೆ.
ರೈತರಿಂದ ಹಿಡಿದು ಸಾಮಾಜಿಕ ಹೋರಾಟಗಾರರವರೆಗೆ ಎಲ್ಲರೊಂದಿಗೂ ಮೋದಿ ಸರ್ಕಾರ ಸಂವಾದದ ಬದಲು ಹಿಂಸೆಯನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.
"ಈ ವಾರ ಸರ್ಕಾರ ಮತ್ತೊಂದು ಕೆಳಮಟ್ಟಕ್ಕೆ ಇಳಿದಿದೆ. ದೇಶದ ಭವಿಷ್ಯದ ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರು, ನಾಗರಿಕ ಸೇವಕರು, ಉದ್ಯಮಿಗಳು ಹಾಗೂ ರಾಷ್ಟ್ರ ನಿರ್ಮಾತೃಗಳೊಂದಿಗೆ ಸಹಾನುಭೂತಿಯಿಂದ ಮಾತನಾಡುವ ಬದಲು, ಅವರ ಮೇಲೆ ರಾಜ್ಯದ ದಮನಕಾರಿ ಶಕ್ತಿಯನ್ನು ಬಳಸಿದೆ. ಇದನ್ನು ಕ್ಷಮಿಸಲು ಅಥವಾ ಮರೆಯಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.