'ವಿದ್ಯಾರ್ಥಿಗಳ ಮೇಲಿನ ಕ್ರೌರ್ಯಕ್ಕೆ ಹೊಣೆ ಯಾರು?' ಅಮಿತ್ ಶಾಗೆ ರಾಹುಲ್ ಗಾಂಧಿ ಪತ್ರ; ಪೊಲೀಸ್ ದೌರ್ಜನ್ಯಕ್ಕೆ ಉತ್ತರಿಸುವಂತೆ ಆಗ್ರಹ

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿಗಳ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮಹಿಳಾ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಗುರಿಯಾಗಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಅತ್ಯಂತ ಗಂಭೀರವಾಗಿವೆ.
Rahul gandhi
ರಾಹುಲ್ ಗಾಂಧಿ
Updated on

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಕ್ರಮವನ್ನು "ಅಮಾನವೀಯ ಮತ್ತು ಕ್ರೂರ ದಾಳಿ" ಎಂದು ಬಣ್ಣಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು ಈ ಪ್ರಕರಣಕ್ಕೆ ಹೊಣೆಗಾರಿಕೆ ನಿಗದಿಪಡಿಸುವಂತೆ ಆಗ್ರಹಿಸಿದ್ದಾರೆ.

ಜುಲೈ 25ರಂದು ಬರೆದ ಪತ್ರದಲ್ಲಿ, "ಜುಲೈ 20ರಂದು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಅಮಾನವೀಯ ದಾಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ನಾನು ಆಗ್ರಹಿಸುತ್ತೇನೆ.

ವಿದ್ಯಾರ್ಥಿಗಳು ನ್ಯಾಯಸಮ್ಮತ ಹಾಗೂ ಉತ್ತರದಾಯಿತ್ವ ಹೊಂದಿದ ಶಿಕ್ಷಣ ವ್ಯವಸ್ಥೆಯನ್ನು ಮಾತ್ರ ಕೇಳುತ್ತಿದ್ದರು. ಆದರೆ, ಅವರ ಮಾತು ಕೇಳುವ ಬದಲು ಭದ್ರತಾ ಪಡೆಗಳು ಅಶ್ರುವಾಯು ಮತ್ತು ಮಾರಕ ಶಸ್ತ್ರಾಸ್ತ್ರಗಳನ್ನೂ ಒಳಗೊಂಡಂತೆ ಅತಿಯಾದ ಬಲಪ್ರಯೋಗ ನಡೆಸಿವೆ.

ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿಗಳ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಮಹಿಳಾ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಗುರಿಯಾಗಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಅತ್ಯಂತ ಗಂಭೀರವಾಗಿವೆ ಎಂದು ಹೇಳಿದ್ದಾರೆ.

ಇದೇ ವೇಳೆ ಪೊಲೀಸರು ಪೆಲೆಟ್ ಗನ್‌ಗಳನ್ನು ಬಳಸಿರುವ ವರದಿಗಳ ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ.

ಮಾರಕ ಪೆಲೆಟ್ ಗನ್‌ಗಳ ಬಳಕೆ ಅತ್ಯಂತ ಆಘಾತಕಾರಿ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಪತ್ರಕರ್ತ ಸೇರಿ ಹಲವರು ಗಂಭೀರವಾಗಿ ಗಾಯಗೊಂಡಿರುವುದು ಕಂಡುಬಂದಿದೆ.

Rahul gandhi
ಪ್ರಧಾನ್ ರಾಜೀನಾಮೆ ಸಾಲದು; ಪಾರದರ್ಶಕ ಪರೀಕ್ಷೆ, ಕೈಗೆಟುಕುವ ಶಿಕ್ಷಣಕ್ಕೆ ಒತ್ತು ನೀಡಿ: ಕೇಂದ್ರ ಸರ್ಕಾರಕ್ಕೆ ವಿದ್ಯಾರ್ಥಿಗಳ ಆಗ್ರಹ

ನಾನು 19 ವರ್ಷದ ವಿದ್ಯಾರ್ಥಿ ಸಾಹಿಲ್ ಲೋಛಾಬ್ ಅವರನ್ನು ಭೇಟಿಯಾಗಿದ್ದೇನೆ. ಪೆಲೆಟ್ ಗನ್‌ನಿಂದ ಗಾಯಗೊಂಡಿರುವ ಅವರು, ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ದೆಹಲಿ ಪೊಲೀಸ್ ಸೇರಿದಂತೆ ಅಲ್ಲಿನ ಭದ್ರತಾ ಪಡೆಗಳು ಅಂತಿಮವಾಗಿ ಕೇಂದ್ರ ಗೃಹ ಸಚಿವರ ವ್ಯಾಪ್ತಿಗೆ ಬರುತ್ತವೆ. ಗೃಹ ಸಚಿವರಾಗಿ ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ ಸೇರಿದಂತೆ ಮಾರಕ ಬಲಪ್ರಯೋಗಕ್ಕೆ ನೀವು ಅನುಮೋದನೆ ನೀಡಿದ್ದೀರಾ? ಇಲ್ಲದಿದ್ದರೆ ಯಾರು ಅನುಮತಿ ನೀಡಿದರು?" ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಪ್ರತಿಭಟನಾಕಾರರ ಮೇಲೆ ಲಾಠಿ ಹಿಡಿದು ಹಲ್ಲೆ ನಡೆಸುತ್ತಿರುವ ಸಿವಿಡ್ ಡ್ರೆಸ್ ನಲ್ಲಿದ್ದ ವ್ಯಕ್ತಿಗಳು ಯಾರು ಎಂಬುದಕ್ಕೂ ಸ್ಪಷ್ಟನೆ ಕೇಳಿದ್ದಾರೆ.

"ಸಿವಿಡ್ ಡ್ರೆಸ್'ನ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವವರು ಪೊಲೀಸ್ ಸಿಬ್ಬಂದಿಯೇ ಅಥವಾ ಸ್ವಯಂಸೇವಕರೇ? ಅವರನ್ನು ನಿಯೋಜಿಸಲು ಅನುಮತಿ ನೀಡಿದವರು ಯಾರು?" ಎಂದು ಪ್ರಶ್ನಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಒತ್ತಿ ಹೇಳಿರುವ ರಾಹುಲ್ ಗಾಂಧಿ, "ಪ್ರತಿಭಟನಾಕಾರರನ್ನು ರಕ್ಷಿಸಿ, ಅವರ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸುವುದು ಸರ್ಕಾರದ ಕರ್ತವ್ಯ. ಆದರೆ, ನಡೆದಿರುವ ಈ ಕ್ರೂರ ಹಿಂಸಾಚಾರ ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನೂ ಧ್ವಂಸಗೊಳಿಸಿದೆ. ದೇಶದ ಭವಿಷ್ಯವಾದ ಯುವಜನತೆ ಮತ್ತು ವಿದ್ಯಾರ್ಥಿಗಳು ಉತ್ತರ ಹಾಗೂ ಹೊಣೆಗಾರಿಕೆಯನ್ನು ಕೇಳುತ್ತಿದ್ದಾರೆ. ಅವರ ಧ್ವನಿ ಖಂಡಿತ ಕೇಳಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳ ವಿರುದ್ಧ ಆರಂಭವಾದ ಸಿಜೆಪಿ ನೇತೃತ್ವದ ಪ್ರತಿಭಟನೆ ಜೂನ್ 20ರಂದು ಜಂತರ್ ಮಂತರ್‌ನಲ್ಲಿ ಆರಂಭವಾಗಿತ್ತು. ಬಳಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸ ಆರಂಭಿಸಿದ ನಂತರ ಚಳವಳಿ ರಾಷ್ಟ್ರವ್ಯಾಪಿ ಬೆಂಬಲ ಪಡೆದುಕೊಂಡಿತ್ತು.

ಜುಲೈ 20ರಂದು ಸಾವಿರಾರು ಪ್ರತಿಭಟನಾಕಾರರು ಸಂಸತ್ ಚಲೋ ನಡೆಸಿದ ವೇಳೆ ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, ಆ ಘಟನೆ ಬಳಿಕ ಈ ಹೋರಾಟ ದೇಶಾದ್ಯಂತ ಹೆಚ್ಚಿನ ಬೆಂಬಲ ಗಳಿಸಿತ್ತು.

Rahul gandhi
ಮೋದಿ ಭೂತಕಾಲ-ವಿದ್ಯಾರ್ಥಿಗಳು ದೇಶದ ಭವಿಷ್ಯ, ಭೂತಕಾಲ ಎಂದಿಗೂ ಭವಿಷ್ಯದ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ: ರಾಹುಲ್ ಗಾಂಧಿ; Video

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com