

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯುವ ಮುನ್ನ, ಅವರನ್ನು ಸಚಿವ ಸಂಪುಟದಿಂದ ಕೈಬಿಡುವ ಬದಲು ಬೇರೆ ಖಾತೆ ನೀಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಸಿಜೆಪಿ ಮುಂದೆ ಇಟ್ಟಿತ್ತು. ಆದರೆ ಸಿಜೆಪಿ ಇದನ್ನು ತಿರಸ್ಕರಿಸಿತು. ಹೀಗಾಗಿ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂಬ ಮಾಧ್ಯಮ ವರದಿಗಳನ್ನು ಬಿಜೆಪಿ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದೆ
ಇಂದು ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಮತ್ತು ವಕ್ತಾರ ಸಂಬಿತ್ ಪಾತ್ರ, ಮಾಧ್ಯಮಗಳ ವರದಿ "ಆಧಾರರಹಿತ ಮತ್ತು ಕಾಲ್ಪನಿಕ" ಎಂದಿದ್ದಾರೆ. ಈ ವಿಷಯವನ್ನು ಸಂಚಲನಗೊಳಿಸಲು ಈ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಜಂತರ್ ಮಂತರ್‌ನಲ್ಲಿ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾಗ, ಸರ್ಕಾರ ಆರಂಭದಲ್ಲಿ ಪ್ರಧಾನ್ ಅವರ ಖಾತೆಯನ್ನು ಬದಲಾಯಿಸುವ ಪ್ರಸ್ತಾಪ ಮುಂದಿಟ್ಟಿದೆ. ಆದರೆ ಪ್ರಸ್ತಾಪವನ್ನು ತಿರಸ್ಕರಿಸಿದ ಸಿಜೆಪಿ ತಿರಸ್ಕರಿಸಿ, ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ನೀಡುವುದೇ ಏಕೈಕ ಪರಿಹಾರ ಎಂದು ಸ್ಪಷ್ಟಪಡಿಸಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.
ಕಳೆದ ಶನಿವಾರ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರನ್ನು CJP ನಿಯೋಗ ಭೇಟಿ ಮಾಡಿತ್ತು. ಈ ವೇಳೆ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಲ್ಲೇ ಉಳಿಸಿಕೊಂಡು ಅವರ ಖಾತೆಯನ್ನು ಬದಲಾಯಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮುಂದಿರಿಸಿತ್ತು ಎನ್ನಲಾಗಿದೆ. ಸಚಿವರನ್ನು ಸಂಪುಟದಿಂದ ಕೈಬಿಡುವುದು ಅಥವಾ ಅವರ ಖಾತೆಯನ್ನು ಬದಲಾಯಿಸುವುದು ಪ್ರಧಾನಿಯ ವಿಶೇಷಾಧಿಕಾರ ಎಂದು ಕೇಂದ್ರದ ಸಂಧಾನಕಾರರು ತಿಳಿಸಿದ್ದರು. ಆದರೆ, ಪ್ರಧಾನ್ ಅವರ ರಾಜೀನಾಮೆಗೆ ಯಾವುದೇ ಪರ್ಯಾಯವನ್ನು ಒಪ್ಪುವುದಿಲ್ಲ ಎಂದು CJP ಸ್ಪಷ್ಟಪಡಿಸಿತ್ತು.