

ಗುವಾಹಟಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಒಬ್ಬ ಮಹಿಳೆ ಸೇರಿದಂತೆ ಮೂವರು ಕುಕಿ ಗ್ರಾಮಸ್ಥರನ್ನು ಹತ್ಯೆ ಮಾಡಲಾಗಿದೆ ಮತ್ತು ಏಳು ಮನೆಗಳನ್ನು ಸುಟ್ಟು ಹಾಕಲಾಗಿದೆ.
ಕಾಂಗ್ಪೋಕ್ಪಿ ಜಿಲ್ಲೆಯ ಸೈತು-ಗಂಫಜೋಲ್ ಉಪವಿಭಾಗದಲ್ಲಿರುವ ಲೋಯಿಬೋಲ್ ಖುಲ್ಲೆನ್ ಎಂಬ ಸಣ್ಣ ಹಳ್ಳಿಯಲ್ಲಿ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.
ಬಲಿಯಾದವರನ್ನು ಲೆತ್ಖೊಂಗಮ್ ಹಾವೊಕಿಪ್, ಅವರ ಪತ್ನಿ ತಿನ್ಮರಿ ಹಾವೊಕಿಪ್ ಮತ್ತು ಜಂಗ್ಮಿನ್ಲಾಲ್ ಹಾವೊಕಿಪ್ ಎಂದು ಗುರುತಿಸಲಾಗಿದೆ.
ಕುಕಿ ಸಂಘಟನೆ ಕುಕಿ ಇನ್ಪಿ ಮಣಿಪುರ(ಕೆಐಎಂ) ರಾಷ್ಟ್ರೀಯ ಸಮಾಜವಾದಿ ಮಂಡಳಿಯ ನಾಗಲಿಮ್(ಎನ್‌ಎಸ್‌ಸಿಎನ್-ಐಎಂ) ಮತ್ತು ಅದರ ಪ್ರಾಕ್ಸಿ ಸಂಘಟನೆಯಾದ ಜೆಲಿಯಾಂಗ್‌ರಾಂಗ್ ಯುನೈಟೆಡ್ ಫ್ರಂಟ್‌ನ ಸಶಸ್ತ್ರ ಬಂಡುಕೋರರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಆರೋಪಿಸಿದೆ.
ಘಟನೆಯನ್ನು ಖಂಡಿಸಿದ ಕೆಐಎಂ, ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಏಳು ಮನೆಗಳು ಸುಟ್ಟು ಭಸ್ಮವಾಗಿವೆ. ಇದರಿಂದ ವ್ಯಾಪಕ ಹಾನಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
"ಈ ಹಿಂಸಾಚಾರ ಕೃತ್ಯವು ಮೂವರು ಅಮಾಯಕ ನಾಗರಿಕರ ದುರಂತ ಹತ್ಯೆಗೆ ಮತ್ತು ಮನೆಗಳು ಹಾಗೂ ಜೀವನೋಪಾಯ ನಾಶಕ್ಕೆ ಕಾರಣವಾಗಿದೆ" ಎಂದು ಸಂಘಟನೆ ಹೇಳಿದೆ. ಅಲ್ಲದೆ ಈ ಘಟನೆಯು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಎಂದು ವಿವರಿಸಿದೆ.
ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಮನೆಗಳನ್ನು ಸುಟ್ಟುಹಾಕುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು KIM ಘಟನೆಯನ್ನು ತೀವ್ರವಾಗಿ ಖಂಡಿಸಿದೆ.
Advertisement