

ಇಂಫಾಲ್: ಜನಾಂಗೀಯ ಸಂಘರ್ಷಗಳಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಅಪಹರಣಕ್ಕೊಳಗಾಗಿದ್ದ ಆರು ನಾಗಾ ಸಮುದಾಯದ ಸದಸ್ಯರ ಮೃತದೇಹಗಳು ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ರಾಜ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಖೇಮಚಂದ್ ಸಿಂಗ್ ಅವರು, ಈ ಕ್ರೂರ ಹತ್ಯೆಯ ಹಿಂದಿರುವ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಕಾಂಗ್‌ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೈ ಗ್ರಾಮದಿಂದ ಅಪಹರಿಸಲ್ಪಟ್ಟ ಆರು ನಾಗಾ ಸಮುದಾಯದ ಸದಸ್ಯರ ಕ್ರೂರ ಹತ್ಯೆಯಿಂದ ತೀವ್ರ ದುಃಖಿತರಾಗಿದ್ದಾರೆ. ಮೃತ ಕುಟುಂಬಗಳಿಗೆ ನನ್ನ ಸಂತಾಪಗಳು.
ಮಣಿಪುರ ಸರ್ಕಾರವು ಈ ಹೇಯ ಕೃತ್ಯವನ್ನು ಬಲವಾಗಿ ಖಂಡಿಸುತ್ತದೆ ಮತ್ತು ಅಪರಾಧಿಗಳನ್ನು ನ್ಯಾಯಕ್ಕೆ ಒಳಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಪ್ರಕರಣವನ್ನು ಎನ್ಐಎ ತನಿಖೆ ಮಾಡುತ್ತಿದೆ. ನಮ್ಮ ಸಮಾಜದಲ್ಲಿ ಹಿಂಸಾಚಾರಕ್ಕೆ ಸ್ಥಾನವಿಲ್ಲ. ಮಣಿಪುರದಲ್ಲಿ ಶಾಂತಿ, ಭದ್ರತೆ ಮತ್ತು ಕಾನೂನು ರಕ್ಷಿಸುವ ನಮ್ಮ ಬದ್ಧತೆಯಲ್ಲಿ ನಾವು ದೃಢವಾಗಿದ್ದೇವೆ. ಹತ್ಯೆಗೈದವರನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೇ 13ರಂದು ಕಾಂಗ್‌ಪೋಕ್ಪಿ ಜಿಲ್ಲೆಯ ಲೀಲೋನ್ ವೈಫೈ ಗ್ರಾಮದಿಂದ ಆರು ನಾಗಾ ಸಮುದಾಯದ ಸದಸ್ಯರನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಪಹರಿಸಿದ್ದರು. ಅಂದಿನಿಂದ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮಣಿಪುರ ಪೊಲೀಸರು, ಕೇಂದ್ರ ಮೀಸಲು ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್ ಹಾಗೂ ಇತರೆ ಭದ್ರತಾ ಪಡೆಗಳು ಜಂಟಿಯಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದವು.
ಸುಮಾರು 450ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರ ಸಹಕಾರದೊಂದಿಗೆ 24 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬುಧವಾರ ಮಧ್ಯಾಹ್ನ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.
ಪತ್ತೆಯಾದ ಮೃತದೇಹಗಳು ಮೇ 13ರಂದು ಅಪಹರಣಕ್ಕೊಳಗಾಗಿದ್ದ ನಾಗಾ ಸಮುದಾಯದ ಸದಸ್ಯರದ್ದೇ ಎಂದು ಪೊಲೀಸರು ಶಂಕಿಸಿದ್ದಾರೆ.
ಇದೀಗ ಮೃತದೇಹಗಳನ್ನು ಇಂಫಾಲ್‌ನ ಜೆಎನ್‌ಐಎಂಎಸ್ ಆಸ್ಪತ್ರೆಗೆ ರವಾನಿಸಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದ್ದಾರೆ.
ಚರ್ಚ್ ಮುಖಂಡರ ಹತ್ಯೆ ಬಳಿಕ ಹೆಚ್ಚಿದ ಹಿಂಸಾಚಾರ
ಮೇ 13ರಂದು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಚರ್ಚ್ ಮುಖಂಡರ ಹತ್ಯೆ ನಡೆದ ಬಳಿಕ ರಾಜ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿತ್ತು.
ಇದೇ ಹಿಂಸಾಚಾರದ ನಡುವೆ ಆರು ನಾಗಾ ಸದಸ್ಯರು ಹಾಗೂ 14 ಕುಕಿ ಸಮುದಾಯದ ಸದಸ್ಯರನ್ನು ಅಪಹರಿಸಲಾಗಿತ್ತು. ಈ ಪೈಕಿ 14 ಕುಕಿ ಸದಸ್ಯರನ್ನು ಜೂನ್ 9ರಂದು ಬಿಡುಗಡೆ ಮಾಡಲಾಗಿತ್ತು. ಆದರೆ., ನಾಗಾ ಸದಸ್ಯರ ಶವಗಳು ಪತ್ತೆಯಾಗಿರುವುದು ಜನಾಂಗೀಯ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ.
ಪ್ರತಿಭಟನೆ, ಬಂದ್‌ಗೆ ಕರೆ
ಮೃತದೇಹಗಳು ಪತ್ತೆಯಾದ ಬಳಿಕ ಸೆನಾಪತಿ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ನಾಗಾ ಪೀಪಲ್ಸ್ ಫ್ರಂಟ್ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ. ಅಲ್ಲದೆ, ಕರೋಂಗ್ ಪ್ರದೇಶದಲ್ಲಿ ಎರಡು ಲಾರಿಗಳಿಗೂ ಬೆಂಕಿ ಹಚ್ಚಲಾಗಿದೆ.
ಘಟನೆಯನ್ನು ಖಂಡಿಸಿ ಯುನೈಟೆಡ್ ನಾಗಾ ಕೌನ್ಸಿಲ್ 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ. ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಬಂದ್‌ನಿಂದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮತ್ತೆ ತೀವ್ರಗೊಂಡ ಉದ್ವಿಗ್ನತೆ
ಕಳೆದ ಮೂರು ವರ್ಷಗಳಿಂದ ನಾಗಾ, ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವಿನ ಸಂಘರ್ಷಗಳಿಂದ ಮಣಿಪುರ ತತ್ತರಿಸಿದೆ.
ಸಂಘರ್ಷದಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಆರು ನಾಗಾ ಸದಸ್ಯರ ಹತ್ಯೆ ಪ್ರಕರಣವು ರಾಜ್ಯದಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದ್ದು, ಶಾಂತಿ ಸ್ಥಾಪನೆಗೆ ಸರ್ಕಾರ ಮತ್ತು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
Advertisement