ದುರಹಂಕಾರ ಬಿಟ್ಟು ಕಾನೂನು ಪಾಲಿಸಿ: ಇಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ಇನ್ನು ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಕೊಡಬಾರ್ದಾ? Video

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್ ಎಸ್ಎಸ್ ನವರು 'ದುರಹಂಕಾರ ಬಿಟ್ಟು ಕಾನೂನು' ಪಾಲಿಸಬೇಕು ಎಂದು ಹೇಳಿದ್ದಾರೆ.
Priyank Kharge
ಪ್ರಿಯಾಂಕ್ ಖರ್ಗೆ
Updated on

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿ ಮಾಡಿಸಬೇಕು ಮತ್ತು ಪಾರದರ್ಶಕವಾಗಿ ಲೆಕ್ಕ ಕೊಡಬೇಕು ಎಂದು ಮತ್ತೆ ಆಗ್ರಹಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು. ಇನ್ನು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದಾ? ಎಂದು ಮಂಗಳವಾರ ಪ್ರಶ್ನಿಸಿದ್ದಾರೆ.

ನಿನ್ನೆ ಆರ್‌ಎಸ್‌ಎಸ್ ನೋಂದಣಿ ಮತ್ತು ಹಣಕಾಸು ವಹಿವಾಟುಗಳ ಮಾಹಿತಿ ಕೋರಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆರ್ ಎಸ್ಎಸ್ ನವರು 'ದುರಹಂಕಾರ ಬಿಟ್ಟು ಕಾನೂನು' ಪಾಲಿಸಬೇಕು ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ದೇಣಿಗೆ ವಿಚಾರದಲ್ಲಿ ಹಗರಣ ನಡೆದಿದೆ. ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡುವ ಪರಿಸ್ಥಿತಿ ಇದೆ. ಇನ್ನೂ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಯಾಕೆ ಲೆಕ್ಕ ಕೊಡಬಾರದು? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಆರ್‌ಎಸ್‌ಎಸ್‌ನ ಆಳು ಮಕ್ಕಳು, ಅವರು ವಿರೋಧ ಮಾಡೇ ಮಾಡ್ತಾರೆ. ಪಾರದರ್ಶಕತೆ ಕೇಳುವುದು ತಪ್ಪಾ? ಪತ್ರದಲ್ಲಿ ತಪ್ಪೇನಿದೆ ಹೇಳಿ? ನಿತ್ಯ ಸಾವಿರಾರು ಶಾಖಾ ಸಭೆಗಳನ್ನ ನಡೆಸಲಾಗುತ್ತಿದೆ. ಆರ್‌ಎಸ್‌ಎಸ್‌ ಮಾಹಿತಿ ನೀಡದಂತೆ ಲಕ್ಷಾಂತರ ಜನರನ್ನು ಸೇರಿಸಿ ಪಂಥಸಂಚಲನ ಮಾಡುತ್ತಿದ್ದಾರೆ. ಅಖಿಲ ಭಾರತ ಪ್ರತಿನಿಧಿ ಸಭಾ ಈ ಮಾಹಿತಿ ನೀಡಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ಪಥಸಂಚಲನ ಮಾಡಿದರೆ ಪ್ರಶ್ನೆ ಮಾಡಬಾರದಾ? ಎಂದು ಕೇಳಿದರು.

ಜವಬ್ದಾರಿ ಸ್ಥಾನದಲ್ಲಿ ಕುಳಿತು ನಾನು ಕೇಳುತ್ತಿದ್ದೇನೆ. ಯಾವುದೇ ಧರ್ಮದ ಸಂಘ ಸಂಸ್ಥೆಗಳಾದರೂ ಕಾನೂನು ಅಡಿಯಲ್ಲಿ ಬರಬೇಕು. ಯಾವುದೇ ಕಾರ್ಯಕ್ರಮ ಮಾಡಿದ್ರೂ ಪೊಲೀಸ್ ಅನುಮತಿ ಪಡೆಯಬೇಕು. ಆರ್‌ಎಸ್‌ಎಸ್ ಪಡೆಯುವುದು ತಪ್ಪಾ? ನಿಮ್ಮ ಆಡಳಿತ ಸಿಬ್ಬಂದಿ ಯಾರು ಎಂದು ತಿಳಿದುಕೊಳ್ಳಬಾರದಾ? ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ ಎಷ್ಟು ಬರ್ತಿದೆ? ಇದೆಲ್ಲಾ ಕೇಳಬಾರದಾ? ಆರ್‌ಎಸ್‌ಎಸ್‌ನವರು ಕಾನೂನು ಹೋರಾಟಕ್ಕೆ ಮೂರು ಕೋಟಿ ಖರ್ಚು ಮಾಡಿದ್ದಾರೆ. ಸಂಘದ ನಾಯಕರು ಅಮೆರಿಕ ಪ್ರವಾಸ ಮಾಡುತ್ತಾರೆ. ಅವರಿಗೆ ಹಣ ಎಲ್ಲಿಂದ ಬರ್ತಿದೆ? ಅವರ ಚಟುವಟಿಕೆಗಳು ಏನು? ಅಂತ ಪ್ರಶ್ನೆಗಳ ಮಳೆಸುರಿಸಿದರು.

Priyank Kharge
Fact Check: ಮೋಹನ್ ಭಾಗವತ್ ವಿಡಿಯೋ ನನ್ನ ಪತ್ರಕ್ಕೆ ಉತ್ತರವಲ್ಲ; ಗೃಹ ಸಚಿವರಿಂದಲೇ ಫ್ಯಾಕ್ಟ್ ಚೆಕ್

"ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ, ಯಾವುದೇ ಸಂಸ್ಥೆ, ಅದು ಎಷ್ಟೇ ಹಳೆಯದಾಗಿರಲಿ ಅಥವಾ ಪ್ರಭಾವಶಾಲಿಯಾಗಿರಲಿ ದೇಶದ ಕಾನೂನು ಪಾಲಿಸಬೇಕು. ದುರಹಂಕಾರವನ್ನು ದೂರವಿಡಿ, ಕಾನೂನನ್ನು ಅನುಸರಿಸಿ ಮತ್ತು ನಿಮ್ಮ 'ಪದಾಧಿಕಾರಿಗಳು' ಅಥವಾ 'ಕಾನೂನು ಮುಖ್ಯಸ್ಥರು' ಬಂದು ನನಗೆ ವಿವರಿಸಲಿ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸಫಾಯಿ ಕರ್ಮಚಾರಿಗೂ ನೊಂದಣಿ ಬೇಕು, ಇವರಿಗೆ ನೋಂದಣಿ ಯಾಕೆ ಇಲ್ಲ? ಎಲ್ಲದಕ್ಕೂ ಧರ್ಮ ಅಡ್ಡ ತರ್ತಾರೆ, ನಾನು ಎಲ್ಲಿ ಧರ್ಮ ಉಲ್ಲೇಖಿಸಿದ್ದೇನೆ? ನನ್ನ ಪತ್ರದಲ್ಲಿ ಹಿಂದೂ ಅನ್ನೊ ಪದ ಎಲ್ಲಿದೆ? ಕೆಲವು ಕಡೆ ನನ್ನ ಪತ್ರಕ್ಕೆ ಸರ ಸಂಘ ಸಂಚಾಲಕ ಮೋಹನ್ ಭಾಗವತ್ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಅವರು ಇನ್ನು ಉತ್ತರ ನೀಡಿಲ್ಲ ಮೋಹನ್ ಬಾಗವತ್ ಅವರು ಜೂನ್ 13 ರಂದು ನೀಡಿದ ಹೇಳಿಕೆಯನ್ನು ತಿರುಚಲಾಗುತ್ತಿದೆ. ನಾನು ನಿನ್ನೆ ಪತ್ರ ಬಿಡುಗಡೆ ಮಾಡಿದ್ದೇನೆ. ಅದಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ, ಹಾಗಿದ್ದಾಗ ಅದು ಉತ್ತರ ಹೇಗೆ ಆಗಲು ಸಾಧ್ಯ? ನಾನು ಧರ್ಮಕ್ಕೆ ನೋಂದಣಿ ಕೇಳುತ್ತಿಲ್ಲ, ಸಂಘಕ್ಕೆ ನೋಂದಣಿ ಕೇಳುತ್ತಿದ್ದೇನೆ ಅವರು ಉತ್ತರಿಸಲಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com