

ನವದೆಹಲಿ: ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತ ಸರ್ಕಾರದ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರು ಹಣದ ಅಕ್ರಮ ವರ್ಗಾವಣೆ (Money Laundering) ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ (Terror Financing) ವಿರುದ್ಧ ಕಾರ್ಯನಿರ್ವಹಿಸುವ ಜಾಗತಿಕ ಸಂಸ್ಥೆಯಾದ ಹಣಕಾಸು ಕ್ರಿಯಾ ಕಾರ್ಯಪಡೆ (FATF)ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಬೆಳವಣಿಗೆಯನ್ನು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರಕಟಿಸಿರುವ ವಿದೇಶಾಂಗ ಸಚಿವಾಲಯ (MEA), ಇದನ್ನು "ಭಾರತದ ಮಹತ್ವದ ಗೆಲುವು" ಎಂದು ಬಣ್ಣಿಸಿದೆ.
ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಅಕ್ರಮ ಹಣಕಾಸು ಜಾಲಗಳನ್ನು ತಡೆಗಟ್ಟುವ ಪ್ರಯತ್ನಗಳಲ್ಲಿ ಭಾರತದ ಪಾತ್ರ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ತಿಳಿಸಿದೆ.
FATF ಒಂದು ಅಂತರ್ ಸರ್ಕಾರಿ ಸಂಸ್ಥೆಯಾಗಿದ್ದು, ಹಣದ ಅಕ್ರಮ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಗೆ ಎದುರಾಗುವ ಇತರೆ ಅಪಾಯಗಳನ್ನು ತಡೆಯಲು ಅಂತರರಾಷ್ಟ್ರೀಯ ಮಾನದಂಡಗಳನ್ನು ರೂಪಿಸುತ್ತದೆ. ವಿವೇಕ್ ಅಗರ್ವಾಲ್ ಅವರ ಆಯ್ಕೆಯಿಂದ FATF ಜೊತೆಗಿನ ಭಾರತದ ಸಹಕಾರ ಮತ್ತಷ್ಟು ಬಲವಾಗುವ ನಿರೀಕ್ಷೆಯಿದೆ.
ಇದೇ ವೇಳೆ, ಸಂಸ್ಕೃತಿ ಸಚಿವಾಲಯ ಕೂಡ ಈ ಸಾಧನೆಯನ್ನು ಸ್ವಾಗತಿಸಿದ್ದು, 200ಕ್ಕೂ ಹೆಚ್ಚು ದೇಶಗಳು ಮತ್ತು ನ್ಯಾಯವ್ಯಾಪ್ತಿಗಳ ನಡುವೆ ಭಾರತ ಗಳಿಸಿರುವ ವಿಶ್ವಾಸ ಮತ್ತು ವಿಶ್ವಾಸಾರ್ಹತೆಯ ಪ್ರತೀಕವಾಗಿದೆ ಎಂದು ಹೇಳಿದೆ. ಜೊತೆಗೆ ಡಿಜಿಟಲ್ ಪಾವತಿಗಳು ಹಾಗೂ ವರ್ಚುವಲ್ ಆಸ್ತಿಗಳಂತಹ ಹೊಸ ಸವಾಲುಗಳಿಗೆ ಸಂಬಂಧಿಸಿದ ಜಾಗತಿಕ ನೀತಿಗಳ ರೂಪಿಕರಣದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿರುವುದನ್ನು ಇದು ತೋರಿಸುತ್ತದೆ ಎಂದು ತಿಳಿಸಿದೆ.
ಮಧ್ಯಪ್ರದೇಶ ಕೇಡರ್‌ನ 1994ರ ಐಎಎಸ್ ಅಧಿಕಾರಿ ಆಗಿರುವ ವಿವೇಕ್ ಅಗರ್ವಾಲ್ ಅವರು ಪ್ರಸ್ತುತ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಏಪ್ರಿಲ್ 2025ರಲ್ಲಿ ಈ ಹುದ್ದೆ ವಹಿಸಿಕೊಳ್ಳುವ ಮೊದಲು, ಅವರು ಹಣಕಾಸು ಸಚಿವಾಲಯದ ಆದಾಯ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಅವರು FIU-IND ಮುಖ್ಯಸ್ಥರಾಗಿಯೂ, FATF ನಲ್ಲಿ ಭಾರತದ ನಿಯೋಗದ ನಾಯಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.
ಮೂರು ದಶಕಗಳಿಗೂ ಅಧಿಕ ಆಡಳಿತ ಅನುಭವ ಹೊಂದಿರುವ ಅಗರ್ವಾಲ್ ಅವರು ಹಣಕಾಸು, ಕೃಷಿ, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜೊತೆಗೆ ಪಿಎಂ-ಕಿಸಾನ್, ಡಿಜಿಟಲ್ ಅಗ್ರಿಕಲ್ಚರ್ ಮತ್ತು ಅಗ್ರಿಕಲ್ಚರ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ ಸೇರಿದಂತೆ ಹಲವು ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
Advertisement