

ಮುಂಬೈ: ಮಹಾರಾಷ್ಟ್ರದ ಹಿಂಗೋಲಿಯಲ್ಲಿ 18 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮೊದಲು ರೆಕಾರ್ಡ್ ಮಾಡಲಾದ ವಿಡಿಯೋದಲ್ಲಿ 'ಕ್ಷಮಿಸಿ, ಅಮ್ಮ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಸುಶೀಲ್ ಧಾಗೆ ಎಂದು ಗುರುತಿಸಲಾದ ವಿದ್ಯಾರ್ಥಿ, ಜೂನ್ 21 ರಂದು ನೀಟ್ (ಯುಜಿ) 2026 ಮರು ಪರೀಕ್ಷೆಗೆ ಹಾಜರಾಗಿದ್ದರು.
'ಅಮ್ಮಾ, ನಾನು ಇಂದು ನನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತೇನೆ. ಅಮ್ಮಾ, ದಯವಿಟ್ಟು ಸ್ವಲ್ಪವೂ ಚಿಂತಿಸಬೇಡಿ. ನನ್ನ ಮುಂದಿನ ಜನ್ಮದಲ್ಲಿ, ನಾನು ಮತ್ತೆ ನಿಮ್ಮ ಗರ್ಭದಲ್ಲೇ ಹುಟ್ಟುತ್ತೇನೆ ಮತ್ತು ನಿಮಗೆ ಈ ರೀತಿಯ ನೋವುಂಟು ಮಾಡುವುದಿಲ್ಲ' ಎಂದು ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಕೈಮುಗಿದು ಹೇಳಿದ್ದಾರೆ.
'ನನ್ನನ್ನು ಕ್ಷಮಿಸಿಬಿಡಿ ಅಮ್ಮ. ಸುಮೇಧ್ ಜೊತೆ ಇರಿ ಅಮ್ಮ. ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ಮತ್ತು ನನ್ನ ಬಗ್ಗೆ ಚಿಂತಿಸಬೇಡಿ. ನನಗೆ ತುಂಬಾ ನೋವಾಗಿದೆ... ನನಗೆ ಏನೂ ಮಾಡಲು ಸಾಧ್ಯವಿಲ್ಲ... ನನಗೆ ಏನು ಮಾಡಬೇಕೆಂದು ಅರ್ಥವಾಗುತ್ತಿಲ್ಲ. ನನ್ನನ್ನು ಕ್ಷಮಿಸು ಅಮ್ಮ' ಎಂದು 33 ಸೆಕೆಂಡುಗಳ ವಿಡಿಯೋದಲ್ಲಿ ಹೇಳಿದ್ದಾರೆ.
ವಿದ್ಯಾರ್ಥಿಯು ವಿಡಿಯೋವೊಂದನ್ನು ಚಿತ್ರೀಕರಿಸಿ ತನ್ನ ಕುಟುಂಬಕ್ಕೆ ಕಳುಹಿಸಿದ ನಂತರ, ಬುಧವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
NEET ಮರುಪರೀಕ್ಷೆಯು ತನಗೆ ಬಹಳ ಕಷ್ಟಕರವೆನಿಸಿತ್ತು ಎಂದು ಆತ ಹೇಳಿದ್ದಾಗಿ ಆತನ ಕುಟುಂಬದವರು ನಂತರ ಪೊಲೀಸರಿಗೆ ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಪರೀಕ್ಷೆಯನ್ನು ಮೇ 3 ರಂದು ನಡೆಸಲಾಗಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಮೇರೆಗೆ ಮೇ 12ರಂದು ರದ್ದುಗೊಳಿಸಲಾಯಿತು. ಕೇಂದ್ರ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆ ನಡೆಸಿ ಸೋರಿಕೆಯ ಹಿಂದಿನ ಕಿಂಗ್‌ಪಿನ್ ವ್ಯಕ್ತಿಯನ್ನು ಬಂಧಿಸಿತು. ಅವರನ್ನು ಪುಣೆ ಮೂಲದ ರಸಾಯನಶಾಸ್ತ್ರ ಉಪನ್ಯಾಸಕ ಎಂದು ಗುರುತಿಸಲಾಗಿದೆ. ಜೂನ್ 21 ರಂದು ಮರು ಪರೀಕ್ಷೆ ನಡೆಸಲಾಯಿತು.
ಸುಮಾರು 1,00,000 ಪದವಿಪೂರ್ವ ಸೀಟುಗಳಿಗೆ ಸ್ಪರ್ಧಿಸುವ ಲಕ್ಷಾಂತರ ಅಭ್ಯರ್ಥಿಗಳು ವಾರ್ಷಿಕವಾಗಿ NEET ಅನ್ನು ತೆಗೆದುಕೊಳ್ಳುತ್ತಾರೆ.