

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ, ಅಭಿಜಿತ್ ದೀಪ್ಕೆ ಅವರು, ಸಚಿವರ ಹುಟ್ಟುಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಿ ಗಮನ ಸೆಳೆದಿದ್ದಾರೆ.
"ಹ್ಯಾಪಿ ಬರ್ತ್‌ಡೇ ಪ್ರಧಾನ್... ದಯವಿಟ್ಟು ರಾಜೀನಾಮೆ ನೀಡಿ" ಎಂದು ಬರೆದು ಅವರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ದಿಪ್ಕೆ ಅವರು ಬಿಳಿ ಫಲಕದ ಮೇಲೆ "Happy Birthday Pradhan. Please Resign" ಎಂದು ಬರೆಯುತ್ತಿರುವುದು ಕಾಣಿಸುತ್ತದೆ. ಈ ವೇಳೆ ಪ್ರತಿಭಟನಾಕಾರರು ಹಿನ್ನಲೆಯಲ್ಲಿ ಹುಟ್ಟುಹಬ್ಬದ ಹಾಡು ಹಾಡಿದರು.
ನಂತರ ಮಾತನಾಡಿದ ದಿಪ್ಕೆ, "ಧರ್ಮೇಂದ್ರ ಪ್ರಧಾನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮಗೆ ಒಂದು ಉಡುಗೊರೆ ನೀಡಿ, ರಾಜೀನಾಮೆ ನೀಡಿ. ಬೇಕಿದ್ದರೆ ರಾಜೀನಾಮೆ ಪತ್ರವನ್ನೇ ನಾವು ಕಳುಹಿಸುತ್ತೇವೆ, ಅದಕ್ಕೆ ನೀವು ಹೆಬ್ಬೆರಳಿನ ಗುರುತು ಹಾಕಿದರೆ ಸಾಕು" ಎಂದು ವ್ಯಂಗ್ಯವಾಡಿದರು.
ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಧರಣಿಗೆ ದಿಪ್ಕೆ ನೇತೃತ್ವ ವಹಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಹಾಗೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಪ್ರತಿಭಟನೆ ಆರಂಭವಾದ ಬಳಿಕ ಸ್ಥಳ ತೊರೆಯಲು ನಿರಾಕರಿಸಿರುವ ಅವರು, ಸರ್ಕಾರ ಈವರೆಗೂ ಯಾವುದೇ ಮಾತುಕತೆಗೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯ ಐದನೇ ದಿನ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಮಿತಿಯ ಮುಂದೆ ಹಾಜರಾದ ದಿಪ್ಕೆ, ತಮ್ಮ ಸಂಘಟನೆಯ ಎಕ್ಸ್ (X) ಖಾತೆಯನ್ನೇಕೆ ನಿರ್ಬಂಧಿಸಲಾಗಿದೆ ಎಂದು ಪ್ರಶ್ನಿಸಿದರು.
"ಎಲ್ಲವೂ ಗೌಪ್ಯ ಎಂದು ಹೇಳುತ್ತಿದ್ದೀರಿ. ಹಾಗಾದರೆ ನೀಟ್ ಪ್ರಶ್ನೆಪತ್ರಿಕೆಯನ್ನೂ ಗೌಪ್ಯವಾಗಿ ಕಾಪಾಡಬೇಕಿತ್ತು. ಅದು ಹೇಗೆ ಸೋರಿಕೆಯಾಯಿತು? ಅದು ಆಗದಿದ್ದರೆ ವಿದ್ಯಾರ್ಥಿಗಳ ಆತ್ಮಹತ್ಯೆಗಳು ನಡೆಯುತ್ತಿರಲಿಲ್ಲ" ಎಂದು ಅವರು ಹೇಳಿದರು.
ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಟೀಕಿಸಿದ ದಿಪ್ಕೆ, "ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳುವ ಪ್ರಧಾನಿ, ಒಂದು ಸಚಿವರ ರಾಜೀನಾಮೆಯನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯನ್ನು ಏಕೆ ತಡೆಯಲಿಲ್ಲ?" ಎಂದು ಪ್ರಶ್ನಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಿಷ್ಠ 17 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ದಿಪ್ಕೆ, "ಈ ಸಾವಿಗೆ ಯಾರು ಹೊಣೆ? ಧರ್ಮೇಂದ್ರ ಪ್ರಧಾನ್ ಅವರೇ ಹೊಣೆ" ಎಂದು ಹೇಳಿದರು.
"ಸಚಿವರು ರಾಜೀನಾಮೆ ನೀಡಿದರೆ ಸರ್ಕಾರದೊಂದಿಗೆ ಮಾತುಕತೆಗೆ ನಾವು ಸಿದ್ಧ. ಆದರೆ, ನಮ್ಮೊಂದಿಗೆ ಸಂವಾದ ನಡೆಸುವ ಬದಲು ನಮ್ಮನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ನಾವು ಮತ ಕೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇವೆ. ನಾವು ಮತ್ತು ನಮ್ಮ ಪೋಷಕರು ತೆರಿಗೆ ಪಾವತಿಸುವ ನಾಗರಿಕರು. ನಮ್ಮನ್ನು ಭಯೋತ್ಪಾದಕರು ಎಂದು ಕರೆಯಲು ನಿಮಗೆ ನಾಚಿಕೆಯಾಗುವುದಿಲ್ಲವೇ?" ಎಂದು ಕಿಡಿಕಾರಿದರು.
ಇದೇ ವೇಳೆ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಕೂಡ ದಿಪ್ಕೆ ಅವರ ಬೇಡಿಕೆಗೆ ಬೆಂಬಲ ಸೂಚಿಸಿದ್ದಾರೆ. ಜೂನ್ 27ರೊಳಗೆ ಕೇಂದ್ರ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ, ಜೂನ್ 28ರಿಂದ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಘೋಷಿಸಿದ್ದಾರೆ.
ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಎದುರಿನಿಂದ ವಿಡಿಯೊ ಸಂದೇಶ ಬಿಡುಗಡೆ ಮಾಡಿದ ವಾಂಗ್ಚುಕ್, "ಇದು ದೆಹಲಿಯ ಜಂತರ್ ಮಂತರ್‌ನಂತೆಯೇ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನೀಡುವ ಸ್ಥಳವಾಗಿದೆ. ಸರ್ಕಾರವು ವಿದ್ಯಾರ್ಥಿಗಳ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.