ಡೀಸೆಲ್ ಖರೀದಿಗೆ ಇನ್ನು ಮಿತಿ ಇಲ್ಲ: ಜು.1ರಿಂದ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮುಕ್ತ ಮಾರಾಟ..!

ಜೂನ್ 29ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, ದೇಶದ ಇಂಧನ ಪೂರೈಕೆ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ತಾತ್ಕಾಲಿಕ ನಿಯಮಗಳು ಇನ್ನು ಮುಂದೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ.
Petrol-Diesel rate hike
ಪೆಟ್ರೋಲ್-ಡೀಸೆಲ್ ದರ ಏರಿಕೆ
Updated on

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ, ವಾಣಿಜ್ಯ, ಕೈಗಾರಿಕಾ ಹಾಗೂ ಸಾಂಸ್ಥಿಕ ಬಳಕೆದಾರರಿಗೆ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಇಂಧನ ಖರೀದಿಸಲು ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಜುಲೈ 1ರಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.

ಈ ನಿರ್ಧಾರದಿಂದ ವಾಣಿಜ್ಯ, ಕೈಗಾರಿಕಾ ಹಾಗೂ ಸಾಂಸ್ಥಿಕ ಬಳಕೆದಾರರು ಮತ್ತೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಬಹುದಾಗಿದೆ. ಜೊತೆಗೆ, ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಮಾತ್ರ ಮಾರಾಟ ಮಾಡಬೇಕೆಂಬ ಮಿತಿಯನ್ನೂ ಸರ್ಕಾರ ರದ್ದುಪಡಿಸಿದೆ.

ಜೂನ್ 29ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, ದೇಶದ ಇಂಧನ ಪೂರೈಕೆ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ತಾತ್ಕಾಲಿಕ ನಿಯಮಗಳು ಇನ್ನು ಮುಂದೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿಗೊಳಿಸಿದ್ದ ಈ ಕ್ರಮಗಳು ತಮ್ಮ ಉದ್ದೇಶವನ್ನು ಯಶಸ್ವಿಯಾಗಿ ನೆರವೇರಿಸಿರುವ ಹಿನ್ನೆಲೆಯಲ್ಲಿ, ಅವುಗಳನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿದ್ದ ಉದ್ವಿಗ್ನತೆ ಹಾಗೂ ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದ ಜಾಗತಿಕ ಮಟ್ಟದಲ್ಲಿ ಇಂಧನ ಮಾರುಕಟ್ಟೆ ಅಸ್ಥಿರಗೊಂಡಿತ್ತು. ಇದರ ಪರಿಣಾಮವಾಗಿ ಭಾರತದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಎದುರಾಗಿತ್ತು. ಚಿಲ್ಲರೆ ಗ್ರಾಹಕರಿಗೆ ಇಂಧನ ಕೊರತೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜೂನ್ 12ರಂದು ತುರ್ತು ನಿರ್ಬಂಧಗಳನ್ನು ಜಾರಿಗೊಳಿಸಿತ್ತು.

Petrol-Diesel rate hike
ಪೆಟ್ರೋಲ್-ಡಿಸೇಲ್ ಕೊರತೆ ಆತಂಕ: ಮನೆಯಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ ಕ್ಯಾನ್‌ಗೆ ಬೆಂಕಿ; ಮಹಿಳೆಗೆ ಗಂಭೀರ ಗಾಯ

ಆ ಸಂದರ್ಭದಲ್ಲಿ ವಾಣಿಜ್ಯ, ಕೈಗಾರಿಕಾ ಹಾಗೂ ಸಾಂಸ್ಥಿಕ ಬಳಕೆದಾರರು ಪೆಟ್ರೋಲ್ ಬಂಕ್‌ಗಳಿಂದ ನೇರವಾಗಿ ಇಂಧನ ಖರೀದಿಸುವುದನ್ನು ನಿಷೇಧಿಸಲಾಗಿತ್ತು. ಅವರು ತಮ್ಮದೇ ಗ್ರಾಹಕ ಪಂಪ್‌ಗಳ ಮೂಲಕ ಅಥವಾ ಬಲ್ಕ್ ಸರಬರಾಜಿನ ಮೂಲಕ ಇಂಧನ ಪಡೆಯುವಂತೆ ಸೂಚಿಸಲಾಗಿತ್ತು. ಅಲ್ಲದೆ, ವಾಹನದ ಇಂಧನ ಟ್ಯಾಂಕ್ ಅಥವಾ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಅನುಮೋದಿಸಿದ ಕಂಟೇನರ್‌ಗಳಿಗೆ ಮಾತ್ರ ಇಂಧನ ತುಂಬಲು ಅವಕಾಶ ನೀಡಲಾಗಿತ್ತು. ಒಂದು ವಾಹನ ಅಥವಾ ಗ್ರಾಹಕರಿಗೆ ದಿನಕ್ಕೆ 200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಮಾರಾಟ ಮಾಡದಂತೆ ಎಲ್ಲಾ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಗೆ ಸೂಚಿಸಲಾಗಿತ್ತು.

ಈ ಕ್ರಮದ ಹಿಂದಿನ ಪ್ರಮುಖ ಕಾರಣವೆಂದರೆ ಚಿಲ್ಲರೆ ಮತ್ತು ಬಲ್ಕ್ ಡೀಸೆಲ್ ದರಗಳ ನಡುವಿನ ಭಾರೀ ಬೆಲೆ ವ್ಯತ್ಯಾಸ. ದೆಹಲಿಯಲ್ಲಿ ಚಿಲ್ಲರೆ ಡೀಸೆಲ್ ದರ ಪ್ರತಿ ಲೀಟರ್‌ಗೆ ರೂ.95.20 ಇದ್ದರೆ, ಬಲ್ಕ್ ಡೀಸೆಲ್ ದರ ರೂ.134.50 ಇತ್ತು. ಈ ವ್ಯತ್ಯಾಸದಿಂದ ಕೈಗಾರಿಕೆಗಳು, ಟ್ರಕ್ಕಿಂಗ್ ಕಂಪನಿಗಳು, ಟೆಲಿಕಾಂ ಟವರ್‌ಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಂತಹ ಬಲ್ಕ್ ಗ್ರಾಹಕರು ತಮ್ಮ ನಿಯಮಿತ ಪೂರೈಕೆ ವ್ಯವಸ್ಥೆಯನ್ನು ಬಿಟ್ಟು ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್ ಖರೀದಿಸಲು ಆರಂಭಿಸಿದ್ದರು. ಇದರಿಂದ ಕೆಲವು ಪ್ರದೇಶಗಳಲ್ಲಿ ಸಾಮಾನ್ಯ ವಾಹನ ಸವಾರರಿಗೆ ಇಂಧನ ಕೊರತೆ ಉಂಟಾಗುವ ಆತಂಕ ವ್ಯಕ್ತವಾಗಿತ್ತು.

ಕೇಂದ್ರ ಸರ್ಕಾರ ಹೊರಡಿಸಿದ್ದ ತಾತ್ಕಾಲಿಕ ನಿರ್ಬಂಧಗಳು ಕಾಳಸಂತೆ, ಅಕ್ರಮ ಸಂಗ್ರಹಣೆ ಹಾಗೂ ಇಂಧನದ ದುರ್ಬಳಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದ್ದು, ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯನ್ನು ಸ್ಥಿರವಾಗಿಡಲು ನೆರವಾಗಿತ್ತು.

ಇದೀಗ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಕಚ್ಚಾ ತೈಲ ಸಾಗಣೆ ಮತ್ತೆ ಸುಗಮವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಇಂಧನ ಪೂರೈಕೆ ಸಹಜ ಸ್ಥಿತಿಗೆ ಮರಳಿರುವುದರಿಂದ ದೇಶದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆ ಉತ್ತಮಗೊಂಡಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತುರ್ತು ನಿರ್ಬಂಧಗಳನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಹೀಗಾಗಿ ಜುಲೈ 1ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮತ್ತೆ ಸಾಮಾನ್ಯ ನಿಯಮಗಳಂತೆ ನಡೆಯಲಿದ್ದು, ವಾಣಿಜ್ಯ, ಕೈಗಾರಿಕಾ ಮತ್ತು ಸಾಂಸ್ಥಿಕ ಬಳಕೆದಾರರು ಯಾವುದೇ ವಿಶೇಷ ನಿರ್ಬಂಧವಿಲ್ಲದೆ ಚಿಲ್ಲರೆ ಪೆಟ್ರೋಲ್ ಬಂಕ್‌ಗಳಿಂದ ಇಂಧನ ಖರೀದಿಸಬಹುದಾಗಿದೆ. ಜೊತೆಗೆ, ಒಂದು ವಾಹನಕ್ಕೆ 200 ಲೀಟರ್ ಡೀಸೆಲ್ ಮಿತಿಯೂ ಇನ್ನು ಮುಂದೆ ಅನ್ವಯವಾಗುವುದಿಲ್ಲ. ಸರ್ಕಾರದ ಈ ಕ್ರಮದಿಂದ ಇಂಧನ ವಿತರಣಾ ವ್ಯವಸ್ಥೆ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com