ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ: 'ಕೋಟ್ಯಾಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ': ಪ್ರಧಾನಿ ಮೋದಿ ಮೌನದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಶ್ರೀರಾಮ ಮಂದಿರದಲ್ಲಿ ನಡೆದಿರುವ ಎನ್ನಲಾದ ದೇಣಿಗೆ ದುರ್ಬಳಕೆ ಕುರಿತು ಪ್ರಧಾನಿ ಮೋದಿ ಮೌನವಾಗಿರುವುದು ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ.
Jairam ramesh (File photo)
ಜೈರಾಮ್ ರಮೇಶ್ - ಕೆ ಸಿ ವೇಣುಗೋಪಾಲ್
Updated on

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಅವ್ಯವಹಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದ್ದು, ಇದು ದೇಶದ ಕೋಟ್ಯಂತರ ಭಕ್ತರ ಧಾರ್ಮಿಕ ನಂಬಿಕೆಗೆ ಮಾಡಿದ ಅಪಮಾನ ಎಂದು ಕಿಡಿಕಾರಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, "ಶ್ರೀರಾಮ ಮಂದಿರದಲ್ಲಿ ನಡೆದಿರುವ ಎನ್ನಲಾದ ದೇಣಿಗೆ ದುರ್ಬಳಕೆ ಕುರಿತು ಪ್ರಧಾನಿ ಮೋದಿ ಮೌನವಾಗಿರುವುದು ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ಅಪಮಾನ" ಎಂದು ಟೀಕಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಯಾವುದೇ ಪಾರದರ್ಶಕ ಮಾನದಂಡ ಅಥವಾ ಸಾರ್ವಜನಿಕ ಸಮಾಲೋಚನೆಯಿಲ್ಲದೆ ಕೇಂದ್ರ ಸರ್ಕಾರ ರಚಿಸಿದೆ.

ಟ್ರಸ್ಟ್‌ನಲ್ಲಿ ಆರ್‌ಎಸ್‌ಎಸ್ ಸದಸ್ಯರನ್ನು ನೇಮಿಸಿ, ಬಳಿಕ ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಯಿಂದಲೂ ಟ್ರಸ್ಟ್‌ಗೆ ವಿನಾಯಿತಿ ನೀಡಲಾಗಿದೆ. "ಮೋದಿ ಜೀ, ನಿಮ್ಮ ಮೌನ ಮುರಿಯಿರಿ" ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯಲು ಮತ್ತು ಪೂಜೆ ಸಲ್ಲಿಸಲು ನಿರ್ಧರಿಸಿತ್ತು. ಆದರೆ, ಅಯೋಧ್ಯೆ ತಲುಪಿದ ತಕ್ಷಣವೇ ಪೊಲೀಸರು ತಮ್ಮನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಜಯ್ ರೈ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಉತ್ತುಂಗಕ್ಕೇರಿದೆ. ಅಯೋಧ್ಯೆಗೆ ಬಂದ ತಕ್ಷಣವೇ ಪೊಲೀಸರು ನನ್ನನ್ನು ಹೋಟೆಲ್‌ನಿಂದ ಕರೆದೊಯ್ದಿದ್ದಾರೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Jairam ramesh (File photo)
ಅಯೋಧ್ಯೆ: ರಾಮ ಮಂದಿರ ದೇಣಿಗೆ ಹಗರಣ, ಬಂಧಿತ 8 ಆರೋಪಿಗಳ ಮನೆ ಮೇಲೆ ಪೊಲೀಸರ ದಾಳಿ!

ಇದೇ ವೇಳೆ ರಾಮ ಮಂದಿರ ದೇಣಿಗೆ ದುರ್ಬಳಕೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ವಿಸರ್ಜಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಇತ್ತ ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್, ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಆರೋಪಿಗಳ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದಿಲ್ಲ ಎಂದು ಘೋಷಿಸಿದ್ದು, ಸಿಬಿಐ ತನಿಖೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದೆ.

ಏತನ್ಮಧ್ಯೆ ಪ್ರಕರಣದ ತುರ್ತು ವಿಚಾರಣೆಗೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಬೇಸಿಗೆ ರಜೆ ಬಳಿಕ, ಜುಲೈ 13ರಂದು ನ್ಯಾಯಾಲಯ ಪುನರಾರಂಭವಾದ ನಂತರ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠ ತಿಳಿಸಿದೆ.

ಈ ನಡುವೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, "ನಿಜವಾದ ಸನಾತನಿಗಳು ಬಿಜೆಪಿಗೆ ಮತ ಹಾಕಬಾರದು ಹಾಗೂ ಆ ಪಕ್ಷದಿಂದ ಟಿಕೆಟ್ ಕೂಡ ಪಡೆಯಬಾರದು. ಬಿಜೆಪಿ ಶ್ರೀರಾಮನಿಗೆ ದ್ರೋಹ ಮಾಡಿದೆ" ಎಂದು ಕಿಡಿಕಾರಿದ್ದಾರೆ.

ಆದರೆ, ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪಕ್ಷ ಹೇಳಿದೆ.

ಜೂನ್ 13ರಂದು ಉತ್ತರ ಪ್ರದೇಶ ಸರ್ಕಾರ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮನವಿಯ ಮೇರೆಗೆ ವಿಶೇಷ ತನಿಖಾ ತಂಡ (SIT) ರಚಿಸಿತ್ತು.

ಎಸ್‌ಐಟಿ ವರದಿ ಆಧರಿಸಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಆದರೆ, ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನು ಬಿಟ್ಟು ಸಣ್ಣ ಮಟ್ಟದ ಆರೋಪಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಆರೋಪಿಸುತ್ತಿವೆ.

X
Kannada Prabha
www.kannadaprabha.com