

ಬಹಳ ವಿವಾದಕ್ಕೆ ಕಾರಣವಾದ ದಿ ಕೇರಳ ಸ್ಟೋರಿ 2 ಕಳೆದ ವಾರ ಬಿಡುಗಡೆಯಾಗಿದ್ದು, ಕಾನೂನು ಹೋರಾಟ ಮತ್ತು ತೀವ್ರ ಸಾರ್ವಜನಿಕ ಟೀಕೆ ನಂತರ ಚಿತ್ರಮಂದಿರಗಳಿಗೆ ಬಂದಿದೆ. 2023ರಲ್ಲಿ ಬಿಡುಗಡೆಯಾದ ಮೊದಲ ಭಾಗ The Kerala Story ಕೂಡ ಭಾರೀ ಸದ್ದು ಮಾಡಿ ಚಿತ್ರವು ಆ ವರ್ಷದಲ್ಲಿನ ಒಂಬತ್ತನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿತ್ತು.
ಆದರೆ ಸೀಕ್ವೆಲ್‌ಗೆ ಪ್ರೇಕ್ಷಕರ ಪ್ರತಿಕ್ರಿಯೆ ಕಡಿಮೆಯಾಗಿದ್ದು, ಬಿಡುಗಡೆಯಾದ ಮೊದಲ ವಾರದಲ್ಲಿ ಕೇವಲ 25.4 ಕೋಟಿ ರೂಪಾಯಿ ಮಾತ್ರ ಸಂಗ್ರಹಿಸಿದೆ. ದೇಶದಾದ್ಯಂತ ಪ್ರೇಕ್ಷಕರಿಂದ ಹೆಚ್ಚಿನ ಮಟ್ಟದಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ. ಹಲವು ರಾಜಕಾರಣಿಗಳು ಕೂಡ ಚಿತ್ರವನ್ನು ಟೀಕಿಸಿದ್ದಾರೆ.
ಶಶಿ ತರೂರ್ ಈ ಚಿತ್ರವನ್ನು ದ್ವೇಷ ಹರಡುವ ಸಾಧನ ಎಂದು ಹಿಂದೆ ಹೇಳಿದ್ದರು. ಈಗ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಚಿತ್ರ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೇರಳ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಡುಕ್ಕಿಯಲ್ಲಿ ಕಾಲೇಜೊಂದರಲ್ಲಿ ಸಾರ್ವಜನಿಕ ಸಂವಾದದಲ್ಲಿ ಒಬ್ಬ ವಿದ್ಯಾರ್ಥಿ ಸಿನಿಮಾಗಳು ಈಗ ಜನಾಭಿಪ್ರಾಯವನ್ನು ರೂಪಿಸಲು ರಾಜಕೀಯ ಪ್ರಚಾರದ ಸಾಧನಗಳಾಗುತ್ತಿವೆಯೇ ಎಂದು ಕೇಳಿದಾಗ, ರಾಹುಲ್ ಗಾಂಧಿ, ಒಳ್ಳೆಯ ಸುದ್ದಿ ಎಂದರೆ The Kerala Story ಚಿತ್ರಮಂದಿರಗಳಲ್ಲಿ ಖಾಲಿಯಾಗಿವೆ, ಅದನ್ನು ನೋಡಲು ಯಾರೂ ಬರುತ್ತಿಲ್ಲ ಎಂಬಂತೆ ಕಾಣುತ್ತಿದೆ. ಇದರಿಂದ ಈ ದೇಶದ ಬಹುಮತ ಜನರಿಗೆ ಕೇರಳದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಸ್ಪಷ್ಟ ಅರಿವು ಇದೆ ಎಂಬುದು ತೋರಿಸುತ್ತದೆ ಎಂದು ಹೇಳಿದರು.
ಚಿತ್ರಗಳು, ಟಿವಿ ಮತ್ತು ಮಾಧ್ಯಮಗಳನ್ನು ಈಗ ಶಸ್ತ್ರದಂತೆ ಬಳಸಲಾಗುತ್ತಿದೆ. ಜನರನ್ನು ಕಳಂಕಿತಗೊಳಿಸಲು, ಸಮುದಾಯಗಳನ್ನು ದೂರ ಮಾಡುವುದಕ್ಕೆ ಮತ್ತು ಸಮಾಜದಲ್ಲಿ ವಿಭಜನೆ ಸೃಷ್ಟಿಸಲು ಅವುಗಳನ್ನು ಬಳಸಲಾಗುತ್ತಿದೆ. ಇದರಿಂದ ಕೆಲವು ಗುಂಪುಗಳಿಗೆ ಲಾಭವಾಗುತ್ತದೆ ಹಾಗೂ ಇತರರು ಹಾನಿಗೊಳಗಾಗುತ್ತಾರೆ ಎಂದು ಹೇಳಿದರು.
ಯಾರಾದರೂ ಒಂದು ನಿರ್ದಿಷ್ಟ ರೀತಿಯ ಸಿನಿಮಾ ಮಾಡಲಿ, ಮಾಧ್ಯಮಗಳಲ್ಲಿ ಒಂದು ಅಭಿಪ್ರಾಯ ಹೇಳಲಿ ಅಥವಾ ಕೆಲವು ವಿಚಾರಗಳನ್ನು ಸಮರ್ಥಿಸಲಿ ಎಂದರೆ ಅವರಿಗೆ ವಿರೋಧ ವ್ಯಕ್ತವಾಗುತ್ತದೆ, ಮಾತನಾಡಲು ಅವಕಾಶ ನೀಡಲಾಗುವುದಿಲ್ಲ, ನಾನು ಇದನ್ನು ಸದಾ ಅನುಭವಿಸುತ್ತೇನೆ ಎಂದು ಹೇಳಿದರು.
ಕೆಲವು ನಿರ್ದಿಷ್ಟ ಕಥನಗಳನ್ನು ಮಾತ್ರ ಪ್ರಚಾರ ಮಾಡಲಾಗುತ್ತಿದೆ, ಇನ್ನೊಂದೆಡೆ, ಕೆಲವು ಕಥನಗಳನ್ನು ಎಷ್ಟು ಬೇಕಾದರೂ ಹರಡಬಹುದು, ಆದರೆ ಅದಕ್ಕೆ ಯಾವುದೇ ಪರಿಣಾಮ ಎದುರಾಗುವುದಿಲ್ಲ. ಇದು ದೇಶಕ್ಕೆ ತುಂಬಾ ಹಾನಿಕಾರಕ. ಭಾರತದಲ್ಲಿ ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಣ ಬಳಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಈ ಸೀಕ್ವೆಲ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಚಿತ್ರವು ಕೇರಳ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ನಿರ್ಮಿಸಲಾಗಿದೆ, ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಕೇರಳದ ವಿರುದ್ಧ ದ್ವೇಷ ಹರಡುವ ಮತ್ತು ನಮ್ಮ ಧರ್ಮನಿರಪೇಕ್ಷ ಪರಂಪರೆಯನ್ನು ಅವಮಾನಿಸುವ ಉದ್ದೇಶದಿಂದ ನಿರ್ಮಿಸಲಾದ ದಿ ಕೇರಳ ಸ್ಟೋರಿ ಚಿತ್ರದ ಎರಡನೇ ಭಾಗ ಬಿಡುಗಡೆಯನ್ನು ಗಂಭೀರವಾಗಿ ನೋಡಬೇಕು ಎಂದು ಹೇಳಿದ್ದಾರೆ.
Advertisement