

ಕೋಲ್ಕತ್ತಾ: ವಿಧಾನಸಭಾ ಚುನಾವಣೆಗೆ ಮುನ್ನ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಿರುದ್ಯೋಗಿಗಳಿಗೆ ಶನಿವಾರ ಭರ್ಜರಿ ಗಿಫ್ಟ್ ನೀಡಿದ್ದು, 10ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಪ್ರತಿ ತಿಂಗಳು 1,500 ರೂ. ಭತ್ಯೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪೂರ್ಣಗೊಂಡ ನಂತರ ಅಂತಿಮ ಪಟ್ಟಿಯಿಂದ ಸುಮಾರು 64 ಲಕ್ಷ ಮತದಾರರನ್ನು ಡಿಲೀಟ್ ಮಾಡಿದ್ದನ್ನು ವಿರೋಧಿಸಿ ಶುಕ್ರವಾರದಿಂದ ಟಿಎಂಸಿ ಧರಣಿ ನಡೆಸುತ್ತಿದ್ದು, ಎರಡನೇ ದಿನವಾದ ಇಂದು, ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಈ ಘೋಷಣೆ ಮಾಡಿದರು.
ಮಾರ್ಚ್ 7 ರಿಂದ ಅಂದರೆ ಇಂದಿನಿಂದಲೇ ನಿರುದ್ಯೋಗಿಗಳು ತಿಂಗಳಿಗೆ 1,500 ರೂ. ಪಡೆಯಲಿದ್ದಾರೆ ಎಂದು ದೀದಿ ಹೇಳಿದರು.
ಈ ಯೋಜನೆ ಏಪ್ರಿಲ್‌ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಈಗ ಅದು ತಕ್ಷಣವೇ ಪ್ರಾರಂಭವಾಗಲಿದೆ ಎಂದು ಸಿಎಂ ತಿಳಿಸಿದರು.
"ಯುವ ಸಾಥಿ ವಿಷಯದಲ್ಲಿ, ಇನ್ನೂ ಓದುತ್ತಿರುವ ಮತ್ತು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಇತರ ಯಾವುದೇ ಯೋಜನೆಗಳ ಫಲಾನುಭವಿಗಳಲ್ಲದ ನಿರುದ್ಯೋಗಿಗಳಿಗೆ 1500 ಭತ್ಯೆ ನೀಡಲಾಗುತ್ತದೆ. ಏಪ್ರಿಲ್ 1 ರಂದು ಹಣವನ್ನು ನೀಡಲಾಗುವುದು ಎಂದು ನಾವು ಮೊದಲೇ ಹೇಳಿದ್ದೆವು. ಆದರೆ ನಾಳೆ ಅಂತರರಾಷ್ಟ್ರೀಯ ಮಹಿಳಾ ದಿನವಾದ್ದರಿಂದ, ಇದರ ಉಡುಗೊರೆಯಾಗಿ, ನಾವು ಪಾವತಿ ದಿನಾಂಕವನ್ನು ಏಪ್ರಿಲ್ 1 ರಿಂದ ಇಂದಿಗೆ(ಮಾರ್ಚ್ 7) ಬದಲಾಯಿಸಿದ್ದೇವೆ" ಎಂದು ಅವರು ಹೇಳಿದರು.
21 ರಿಂದ 40 ವರ್ಷ ವಯಸ್ಸಿನ ಎಲ್ಲರೂ, ಸುಮಾರು 1 ಕೋಟಿ ಜನ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳ ಫಲಾನುಭವಿಗಳಲ್ಲ ಎಂದು ಮಮತಾ ತಿಳಿಸಿದರು.
ತಮ್ಮ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಹೇಳಿದ ಬ್ಯಾನರ್ಜಿ, "ಬಂಗಾಳದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 40 ರಷ್ಟು ಕಡಿಮೆಯಾಗಿದೆ" ಎಂದರು.
ನಾವು ಕನಿಷ್ಠ 40 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡಿದ್ದೇವೆ, ಅದರಲ್ಲಿ ಸುಮಾರು 10 ಲಕ್ಷ ಜನ ಈಗಾಗಲೇ ಉದ್ಯೋಗದಲ್ಲಿದ್ದಾರೆ ಎಂದರು.
Advertisement