

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ನೋಟಿಸ್ ಸಲ್ಲಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸುತ್ತಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸೋಮವಾರ ವರದಿ ಮಾಡಿದೆ.
ಮೂಲಗಳ ಪ್ರಕಾರ, ನೋಟಿಸ್‌ನ ಕರಡನ್ನು ಅಂತಿಮಗೊಳಿಸಲಾಗಿದ್ದು, ಈ ವಾರದ ಕೊನೆಯಲ್ಲಿ ಸಲ್ಲಿಸುವ ಸಾಧ್ಯತೆಯಿದೆ.
ಪ್ರಸ್ತಾವನೆಯನ್ನು ರಚಿಸುವಲ್ಲಿ ಭಾಗಿಯಾಗಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ಹಿರಿಯ ಸಂಸದರು ಈ ಕ್ರಮವನ್ನು ವಿರೋಧ ಪಕ್ಷಗಳ ಸಾಮೂಹಿಕ ಪ್ರಯತ್ನ ಎಂದು ಬಣ್ಣಿಸಿದ್ದಾರೆ.
“ಕರಡು ರಚನೆ ಮತ್ತು ಯೋಜನೆ ನಿಜವಾಗಿಯೂ ಎಲ್ಲಾ ಸಮಾನ ಮನಸ್ಕ ಪಕ್ಷಗಳ ತಂಡದ ಪ್ರಯತ್ನವಾಗಿದೆ. ಇದನ್ನು ಎರಡೂ ಸದನಗಳಲ್ಲಿ ಕಾರ್ಯಗತಗೊಳಿಸುವುದು ತಂಡದ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ” ಎಂದು ಟಿಎಂಸಿ ನಾಯಕರು ಪಿಟಿಐಗೆ ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರು “ತಾವು ಹೊಂದಿರುವ ದೊಡ್ಡ ಸ್ಥಾನವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ” ಎಂದು ಪ್ರತಿಪಕ್ಷ ಸಂಸದರು ಆರೋಪಿಸಿದ್ದಾರೆ.
ಪಕ್ಷವು ಈ ಕ್ರಮವನ್ನು ಬೆಂಬಲಿಸುತ್ತದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದು, ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣದಲ್ಲಿರುವ ಇತರ ಪಕ್ಷಗಳು ಸಹ ಇದನ್ನು ಬೆಂಬಲಿಸಿವೆ ಎಂದು ತಿಳಿದುಬಂದಿದೆ.
ವಿರೋಧ ಪಕ್ಷಗಳ ಸಂಸದರು ಉಭಯ ಸದನಗಳ ಸದಸ್ಯರಿಂದ ಸಹಿ ಸಂಗ್ರಹಿಸಲು ಪ್ರಾರಂಭಿಸುವ ನಿರೀಕ್ಷೆಯಿದೆ. ಸಂಸದೀಯ ನಿಯಮಗಳ ಪ್ರಕಾರ, ಪದಚ್ಯುತಿಗೆ ಪ್ರಸ್ತಾವನೆ ಮಂಡಿಸಲು ಲೋಕಸಭೆಯಲ್ಲಿ ಕನಿಷ್ಠ 100 ಸಂಸದರು ಅಥವಾ ರಾಜ್ಯಸಭೆಯಲ್ಲಿ 50 ಸಂಸದರು ಸಹಿ ಹಾಕಬೇಕಾಗುತ್ತದೆ.
ಸಿಇಸಿಯನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯು ಭಾರತದ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯಂತೆಯೇ ಇರುತ್ತದೆ. ಈ ಪ್ರಸ್ತಾವನೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಬಹುದು ಮತ್ತು ವಿಶೇಷ ಬಹುಮತದಿಂದ ಅಂಗೀಕರಿಸಬೇಕು. ಪದಚ್ಯುತಿಗೆ ಸದನದ ಒಟ್ಟು ಸದಸ್ಯತ್ವದ ಬಹುಮತ ಮತ್ತು ಹಾಜರಿರುವ ಮತ್ತು ಮತದಾನ ಮಾಡುವ ಸದಸ್ಯರ ಮೂರನೇ ಎರಡರಷ್ಟು ಬಹುಮತ ಅಗತ್ಯ ಇದೆ.
Advertisement