

ಚೆನ್ನೈ: ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸಲು ಪ್ರಯತ್ನಿಸಿದಾಗ ಅವರಿಗೆ ಡಿಎಂಕೆ "ಬೆದರಿಕೆ" ಹಾಕಿತ್ತು ಎಂದು ಟಿವಿಕೆ ನಾಯಕ ಆಧವ್ ಅರ್ಜುನ್ ಅವರು ಹೊಸ ವಿವಾದ ಸೃಷ್ಟಿಸಿದ್ದಾರೆ ಮತ್ತು ಅವರ ಹೇಳಿಕೆಗೆ ನಟ ರಜನಿಕಾಂತ್ ಅಭಿಮಾನಿಗಳು ಮತ್ತು ಮಾಜಿ ಸಲಹೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಜನಿಕಾಂತ್ ಅವರ ಮಾಜಿ ಸಲಹೆಗಾರ ರಾ. ಅರ್ಜುನಮೂರ್ತಿ ಅವರು ಟಿವಿಕೆ ನಾಯಕನ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದು, ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ, ನಟ ವಿಜಯ್ ಅವರು, ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅರ್ಜುನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತಮಿಳುನಾಡು ಸಚಿವ ಎಸ್. ರೆಗುಪತಿ ಅವರು, ವಿಜಯ್ ನೇತೃತ್ವದ ಪಕ್ಷವು "ಸುಳ್ಳು" ಹೇಳುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ರಜನಿಕಾಂತ್ ಅವರು ಡಿಎಂಕೆಯ ಸ್ನೇಹಿತ ಮತ್ತು ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ಬೆದರಿಸಲು ಸಾಧ್ಯವಿಲ್ಲ. ಅದು ಎಲ್ಲರಿಗೂ ಗೊತ್ತು. ಡಿಎಂಕೆ ಅವರನ್ನು ಬೆದರಿಸಿದೆ ಎಂದು ಹೇಳುವುದು ಶುದ್ಧ ಸುಳ್ಳು. ವಿಜಯ್ ಅವರ ಪಕ್ಷವು ರಾಜಕೀಯ ಲಾಭ ಪಡೆಯಲು ಹೀಗೆ ಹೇಳುತ್ತಿದೆ ಮತ್ತು 1996 ರ ಚುನಾವಣೆಯಲ್ಲಿ ರಜನಿ ಡಿಎಂಕೆಗೆ ಬೆಂಬಲ ನೀಡಿದ್ದರು" ಎಂದು ರೆಗುಪತಿ ಹೇಳಿದರು.
ಮಾರ್ಚ್ 12 ರಂದು ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್, ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಡಿಎಂಕೆ ಅವರಿಗೆ ಬೆದರಿಕೆ ಹಾಕಿದೆ ಎಂದು ಆರೋಪಿಸಿದರು.
ಅರ್ಜುನ್ ಅವರು ರಜನಿ ಅವರನ್ನು ಟೀಕಿಸುತ್ತಿಲ್ಲ. ಆದರೆ ಟಿವಿಕೆ ಸಂಸ್ಥಾಪಕ ವಿಜಯ್ ಅವರಿಗೆ ಅಂತಹ ಒತ್ತಡ, ಬೆದರಿಕೆಯನ್ನು ತಡೆದುಕೊಳ್ಳುವ ಧೈರ್ಯವಿದೆ ಎಂದು ಎತ್ತಿ ತೋರಿಸಲು ಯತ್ನಿಸಿದರು.
Advertisement