

ಮಧ್ಯಪ್ರದೇಶದ ಇಂದೋರ್‌ನಿಂದ ಭಯಾನಕ ಮತ್ತು ಎದೆ ಝಲ್ ಎನಿಸುವಂತ ಘಟನೆ ನಡೆದಿದೆ. ಲಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ್ ಟೌನ್‌ಶಿಪ್ ನಲ್ಲಿ ಬುಧವಾರ ರಾತ್ರಿ ನಡೆದ ಸಣ್ಣ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ. ಪೆಂಟ್‌ಹೌಸ್ ಬಾಡಿಗೆಗೆ ಪಡೆದ ಸಂಬಂಧ ನಡೆದ ಜಗಳದಲ್ಲಿ ತಂದೆ ಮತ್ತು ಮಗ ತಮ್ಮ ಕಾರನ್ನು ನಿವಾಸಿಗಳ ಮೇಲೆ ಹರಿಸಿದ್ದಾರೆ. ಈ ಭಯಾನಕ ಘಟನೆಯಲ್ಲಿ, ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ದುರಂತವಾಗಿ ಸಾವನ್ನಪ್ಪಿದ್ದು ಇತರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿವಾಸಿಗಳ ಪ್ರಕಾರ, ಈ ಸಂಪೂರ್ಣ ವಿವಾದದ ಮೂಲವು ಟೌನ್‌ಶಿಪ್ ಕಟ್ಟಡದಲ್ಲಿರುವ ಎರಡು ಪೆಂಟ್‌ಹೌಸ್‌ಗಳ ಮೇಲೆ ಕೇಂದ್ರೀಕೃತವಾಗಿತ್ತು. ಆರೋಪಿ ಕುಲದೀಪ್ ಚೌಧರಿ ಟೌನ್‌ಶಿಪ್‌ನಲ್ಲಿ ಎರಡು ಪೆಂಟ್‌ಹೌಸ್‌ಗಳನ್ನು ಖರೀದಿಸಿದ್ದರು. ಅವರ ಮಗ ಮೋನಿಶ್ ಅದನ್ನು Airbnb ಅಪ್ಲಿಕೇಶನ್ ಮೂಲಕ ಅವುಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಹೀಗಾಗಿ ಸದಾ ಹೊರಗಿನವರು ಮತ್ತು ಅಪರಿಚಿತರು ಒಂದೆಡೆರು ದಿನಕ್ಕೆ ಬಾಡಿಗೆಗೆ ಪಡೆದು ಬರುತ್ತಿದ್ದರು. ಇದು ಭದ್ರತೆ ಮತ್ತು ಶಾಂತಿಗೆ ಭಂಗ ತರುತ್ತಿರುವುದರಿಂದ ಅಪಾರ್ಟ್ ಮೆಂಟ್ ನಿವಾಸಿಗಳು ಇದನ್ನು ತೀವ್ರವಾಗಿ ವಿರೋಧಿಸಿದ್ದರು.
ಬುಧವಾರ ರಾತ್ರಿ ಈ ವಿಷಯವಾಗಿ ಕುಲದೀಪ್ ಚೌಧರಿ ಮತ್ತು ಅವರ ಮಗ ಮೋನಿಶ್ ಅಪಾರ್ಟ್ ಮೆಂಟ್ ನಿವಾಸಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಈ ವಿವಾದವು ಉಲ್ಬಣಗೊಂಡು ಕೋಪಗೊಂಡ ನಿವಾಸಿಗಳು ತಂದೆ ಮತ್ತು ಮಗನನ್ನು ಥಳಿಸುವ ಹಂತಕ್ಕೆ ಹೋಗಿದ್ದಾರೆ. ಇದರಿಂದ ಭಯಭೀತರಾದ ತಂದೆ ಮತ್ತು ಮಗ ತಮ್ಮ ಕಾರನ್ನು ಹತ್ತಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಅವರನ್ನು ಹಿಡಿಯಲು ಪ್ರಯತ್ನಿಸಿದವರ ಮೇಲೆ ತಂದೆ ಮತ್ತು ಮಗ ಕಾರನ್ನು ಹತ್ತಿಸಿದ್ದಾರೆ. ಘಟನೆಯಲ್ಲಿ ಮಹಿಳಾ ಎಂಜಿನಿಯರ್ ಶಂಪಾ ಪಾಠಕ್ ಕಾರಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಈ ಭಯಾನಕ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಕಾರು ಜನರನ್ನು ಪುಡಿಪುಡಿ ಮಾಡುವುದನ್ನು ತೋರಿಸುತ್ತದೆ. ತ್ವರಿತವಾಗಿ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ತಂದೆ ಕುಲದೀಪ್ ಚೌಧರಿ ಮತ್ತು ಅವರ ಮಗ ಮೋನಿಶ್ ಅವರನ್ನು ಬಂಧಿಸಿದ್ದಾರೆ. ಇಬ್ಬರ ವಿರುದ್ಧವೂ ಕೊಲೆ ಪ್ರಕರಣ ದಾಖಲಾಗಿದ್ದು, ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡ ನಿವಾಸಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement