ಇಂಧನ ಅಬಕಾರಿ ಸುಂಕ ಇಳಿಕೆ ಬೆಲೆ ಏರಿಕೆಯಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುತ್ತದೆ: ನಿರ್ಮಲಾ ಸೀತಾರಾಮನ್-Video

ನಿನ್ನೆ ರಾಮನವಮಿ ದಿನ ಪ್ರಧಾನಮಂತ್ರಿಗಳು ತುರ್ತು ಸಭೆ ಕರೆದಿದ್ದು, ಈ ವಿಷಯಗಳ ಬಗ್ಗೆ ಚರ್ಚಿಸಿ ತಕ್ಷಣ ನಿರ್ಧಾರ ಕೈಗೊಂಡರು. ನಂತರ ನಮ್ಮ ಹಣಕಾಸು ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯ ರಾತ್ರಿ ಒಟ್ಟಾಗಿ ಕುಳಿತು ಚರ್ಚಿಸಿ ಇಂದು ಈ ನಿರ್ಧಾರವನ್ನು ಘೋಷಿಸಿದ್ದೇವೆ ಎಂದರು.
Nirmala Sitharaman
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾಗತಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ಅದರ ಪರಿಣಾಮದಿಂದ ರಕ್ಷಿಸುವುದೇ ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಇಂತಹ ಸಂಕಷ್ಟಗಳು ಬಂದಾಗ ಮತ್ತು ಅದರ ಪರಿಣಾಮ ಭಾರತಕ್ಕೆ ತಟ್ಟಿದಾಗ—ಹಿಂದೆ ಕೋವಿಡ್ ಸಮಯದಲ್ಲಿಯೂ ಹೀಗೆಯೇ ಪ್ರಧಾನಮಂತ್ರಿಗಳು ತಕ್ಷಣ ಪ್ರತಿಕ್ರಿಯಿಸಿದ್ದಾರೆ. ಜನರ ಮೇಲೆ ಭಾರ ಬೀಳಬಾರದು, ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಕೊರತೆ ಎದುರಾಗಬಾರದು ಎಂಬುದು ಅವರ ಉದ್ದೇಶವಾಗಿದೆ. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ (ವಿಮಾನ ಇಂಧನ) ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಗ್ರಾಹಕರಿಗೆ ಬೆಲೆ ಏರಿಕೆಯಾಗದಂತೆ ನಾವು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ನಿನ್ನೆ ರಾಮನವಮಿ ದಿನ ಪ್ರಧಾನಮಂತ್ರಿಗಳು ತುರ್ತು ಸಭೆ ಕರೆದಿದ್ದು, ಈ ವಿಷಯಗಳ ಬಗ್ಗೆ ಚರ್ಚಿಸಿ ತಕ್ಷಣ ನಿರ್ಧಾರ ಕೈಗೊಂಡರು. ನಂತರ ನಮ್ಮ ಹಣಕಾಸು ಸಚಿವಾಲಯ ಮತ್ತು ಪೆಟ್ರೋಲಿಯಂ ಸಚಿವಾಲಯ ರಾತ್ರಿ ಒಟ್ಟಾಗಿ ಕುಳಿತು ಚರ್ಚಿಸಿ ಇಂದು ಈ ನಿರ್ಧಾರವನ್ನು ಘೋಷಿಸಿದ್ದೇವೆ ಎಂದರು.

ಕಚ್ಚಾ ತೈಲದ ಬೆಲೆ ಏರಿಕೆಯಿಂದ ಸಮಸ್ಯೆ ಎದುರಿಸುತ್ತಿದ್ದ ತೈಲ ಮಾರುಕಟ್ಟೆ ಕಂಪನಿಗಳನ್ನು ರಕ್ಷಿಸುವುದೂ ಈ ಅಬಕಾರಿ ಸುಂಕ ಕಡಿತದ ಮತ್ತೊಂದು ಉದ್ದೇಶವಾಗಿದೆ ಎಂದು ಹೇಳಿದರು. ಇದರಿಂದ ಇಂಧನ ಸರಬರಾಜಿನಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದರು.

ವಿದೇಶದಲ್ಲಿ ಬೆಲೆ ಏರಿಕೆಯಾಗುತ್ತಿರುವುದರಿಂದ ಕಂಪನಿಗಳು ಖರೀದಿ ನಿಲ್ಲಿಸುವ ಪರಿಸ್ಥಿತಿ ಬರಬಾರದು. ಅವು ಖರೀದಿ ಮುಂದುವರಿಸಿ, ದೇಶಕ್ಕೆ ತರಬೇಕು, ಜನರಿಗೆ ಸರಿಯಾದ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಈ ನಿರ್ಧಾರದಿಂದ ಸರಬರಾಜಿನಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದು ಹೇಳಿದರು.

Nirmala Sitharaman
ಭಾರತದಲ್ಲಿ ಲಾಕ್‌ಡೌನ್ ವದಂತಿಗಳು ಸಂಪೂರ್ಣ ಸುಳ್ಳು, ಅಂತಹ ಯಾವುದೇ ಪ್ರಸ್ತಾಪವಿಲ್ಲ: ಹರ್ದೀಪ್ ಸಿಂಗ್ ಪುರಿ

ವಿಮಾನ ಇಂಧನ (ATF) ರಫ್ತಿಗೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿರುವುದರಿಂದ ಅದು ದೇಶೀಯ ಬಳಕೆಗೆ ಆದ್ಯತೆ ಸಿಗುತ್ತದೆ. ಎಟಿಎಫ್ ಭಾರತಕ್ಕೆ ಬಹಳ ಮುಖ್ಯ. ಕೆಲವು ರಿಫೈನರಿಗಳು ವಿದೇಶದಿಂದ ತೈಲವನ್ನು ಖರೀದಿ ಮಾಡಿ ಇಲ್ಲಿ ಶುದ್ಧೀಕರಿಸಿ ಮತ್ತೆ ರಫ್ತು ಮಾಡುತ್ತವೆ. ಈಗ ರಫ್ತಿನ ಮೇಲಿನ ಸುಂಕವನ್ನು ಹೆಚ್ಚಿಸಿದ್ದರಿಂದ, ಅವು ದೇಶೀಯವಾಗಿ ಮಾರಾಟ ಮಾಡುವ ಸಾಧ್ಯತೆ ಹೆಚ್ಚುತ್ತದೆ ಮತ್ತು ಭಾರತದಲ್ಲಿ ಲಭ್ಯತೆ ಹೆಚ್ಚಾಗುತ್ತದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರವು ಇಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂಪಾಯಿಗೆ ಇಳಿಸಿ, ಡೀಸೆಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಡೀಸೆಲ್ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಲೀಟರ್‌ಗೆ 21.5 ರೂಪಾಯಿ ಎಂದು ನಿಗದಿಪಡಿಸಲಾಗಿದೆ.

ಈ ಕ್ರಮವು ಅಮೆರಿಕಾ–ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದ ಉಂಟಾದ ಜಾಗತಿಕ ಇಂಧನ ಸಂಕಷ್ಟದ ಹಿನ್ನೆಲೆಯಲ್ಲಿದೆ. ಹಾರ್ಮೊಜ್ ಸಾಗರ ದ್ವಾರದಲ್ಲಿ ಇರಾನ್ ವಿಧಿಸಿರುವ ನಿರ್ಬಂಧದಿಂದ, ವಿಶ್ವದ ಕಚ್ಚಾ ತೈಲ ಮತ್ತು ಅನಿಲ ಸರಬರಾಜಿನ ಸುಮಾರು 20–25 ಮಿಲಿಯನ್ ಬ್ಯಾರೆಲ್ ಪ್ರತಿದಿನ ಸಾಗುವ ಮಾರ್ಗದ ಮೇಲೆ ಪರಿಣಾಮ ಬೀರಿದೆ. ಈ ಸಂಘರ್ಷಕ್ಕೂ ಮೊದಲು ಭಾರತವು ಸರಬರಾಜಿನ 12ರಿಂದ 15 ಶೇಕಡಾ ತೈಲವನ್ನು ಖರೀದಿಸುತ್ತಿತ್ತು.

ಲಾಕ್ ಡೌನ್ ಹೇರಿಕೆ ಇಲ್ಲ

ಇಂಧನ ಕೊರತೆ ಉಂಟಾಗುವ ಸಾಧ್ಯತೆ ಹಿನ್ನೆಲೆ ಸರ್ಕಾರ ಲಾಕ್‌ಡೌನ್ ರೀತಿಯ ಕ್ರಮಗಳನ್ನು ಪರಿಗಣಿಸಬಹುದು ಎಂಬ ವದಂತಿಗಳನ್ನು ಸಹ ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.

ಇಂತಹ ವರದಿಗಳು ಆಧಾರರಹಿತವಾಗಿವೆ ಎಂದು ಹೇಳಿದ ಅವರು, ಸರ್ಕಾರದಿಂದ ಇಂತಹ ಯಾವುದೇ ಕ್ರಮವನ್ನು ಪರಿಗಣಿಸಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಜನತೆಗೆ ನಾನು ಭರವಸೆ ನೀಡಲು ಬಯಸುತ್ತೇನೆ, ಯಾವುದೇ ಲಾಕ್‌ಡೌನ್ ಇರುವುದಿಲ್ಲ. ಕೆಲವು ನಾಯಕರು ಲಾಕ್‌ಡೌನ್ ಬರುತ್ತದೆ, ಇಂಧನ ಕೊರತೆ ಉಂಟಾಗುತ್ತದೆ ಎಂದು ಹೇಳುತ್ತಿರುವುದು ನನಗೆ ಆಶ್ಚರ್ಯವಾಗುತ್ತಿದೆ. ಅವು ಸಂಪೂರ್ಣವಾಗಿ ಆಧಾರರಹಿತ ಹೇಳಿಕೆಗಳು. ರಾಜಕೀಯ ವಲಯದಲ್ಲಿರುವವರಿಂದ ಇಂತಹ ಮಾತುಗಳು ಕೇಳಿಬರುವುದು ಬೇಸರದ ಸಂಗತಿ. ಕೋವಿಡ್ ಸಮಯದಲ್ಲಿ ಕಂಡಂತೆ ಯಾವುದೇ ಲಾಕ್‌ಡೌನ್ ಇರಲಾರದು ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com