

ಮೈನ್ ಪುರಿ: ತನ್ನ ಬ್ಯಾಂಕ್ ಖಾತೆಗೆ ಬರೋಬ್ಬರಿ 10 ಕೋಟಿ ರೂ. ಜಮೆ ಆಗಿದ್ದರೂ ಒಂದು ರೂಪಾಯಿಯನ್ನು ವಿಥ್ ಡ್ರಾ ಮಾಡದ ರೈತ ಮಹಿಳೆಯೊಬ್ಬರ ಪ್ರಾಮಾಣಿಕತೆ ಇದೀಗ ದೇಶಾದ್ಯಂತ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸಿದೆ. ಹೌದು. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟಮಿಯ ಸಂದರ್ಭದಲ್ಲಿ ಹಣ ವಿತ್ ಡ್ರಾ ಮಾಡಲು ಸ್ಥಳೀಯ ಬ್ಯಾಂಕ್ ಗೆ ಹೋದಾಗ ಶಾಖೆ ಮುಚ್ಚಿದ್ದರಿಂದ ಹಣ ಪಡೆಯಲು ಸಾಧ್ಯವಾಗಿಲ್ಲ.
ಬಳಿಕ ಹತ್ತಿರದ ಎಟಿಎಂ ಬಳಿಗೆ ಹೋಗಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಶಾಕ್ ಆಗಿದೆ. ತನ್ನ ಕಣ್ಣುಗಳನ್ನು ತಾನೇ ನಂಬಲು ಆಗಲಿಲ್ಲ. ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಆಕೆಯ ಆಕೌಂಟ್ ನಲ್ಲಿ ಬಾಕಿಮೊತ್ತ ರೂ. 9,99,49,588, ಆಗಿದೆ. ಬಳಿಕ ಎರಡನೇ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿದ್ದು, ಸ್ಕ್ರೀನ್ ವಿಡಿಯೋ ಮಾಡಿಕೊಂಡಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಕೌಂಟ್ ನಲ್ಲಿ ಅಷ್ಟೊಂದು ಹಣ ಇದ್ದರೂ ರೀಟಾ ಒಂದು ರೂ. ಹಣ ಕೂಡಾ ವಿತ್ ಡ್ರಾ ಮಾಡಲು ಪ್ರಯತ್ನಿಸಲಿಲ್ಲ. ಪರಿಸ್ಥಿತಿಯನ್ನು ಸರಿಯಾಗಿ ವಿವರಿಸುವವರೆಗೆ ಹಣವನ್ನು ಮುಟ್ಟಬೇಡಿ ಎಂದು ಆಕೆ ತನ್ನ ಕುಟುಂಬ ಸದಸ್ಯರಿಗೆ ದೃಢವಾಗಿ ಹೇಳಿದ್ದರು. ಆಕೆಯ ಅಸಾಧಾರಣ ಪ್ರಾಮಾಣಿಕತೆಗಾಗಿ ನೆರೆಹೊರೆಯವರು ಮತ್ತು ಸ್ಥಳೀಯರು ಆಕೆಯನ್ನು ಶ್ಲಾಘಿಸಿದ್ದಾರೆ.
ರೀಟಾ ಮತ್ತು ಅವರ ಕುಟುಂಬ ಈ ವಿಷಯವನ್ನು ತಿಳಿಸಲು ಬ್ಯಾಂಕ್‌ಗೆ ಹೋದಾಗ ರಜೆಯ ಕಾರಣ ಬ್ಯಾಂಕ್ ಬಂದ್ ಆಗಿತ್ತು. ತಾಂತ್ರಿಕ ದೋಷ ಅಥವಾ ವಹಿವಾಟಿನ ದೋಷದಿಂದ ಇದಾಗಿರಬಹುದು. ಶಾಖೆ ಮತ್ತೆ ತೆರೆದ ನಂತರ ಈ ವಿಷಯವನ್ನು ತನಿಖೆ ಮಾಡಿ ಪರಿಹರಿಸಲಾಗುವುದು ಎಂದು ಬ್ಯಾಂಕ್ ಆಫ್ ಇಂಡಿಯಾದ ಕರೀಮ್‌ಗಂಜ್ ಶಾಖೆಯ ಮ್ಯಾನೇಜರ್ ರಿಷಿಕಾಂತ್ ಪಾಂಡೆ ಭರವಸೆ ನೀಡಿದ್ದಾರೆ.
ಈ ಘಟನೆಯು ದೇಶಾದ್ಯಂತ ಈಗ ಸುದ್ದಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ರೀಟಾ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸುತ್ತಿದ್ದಾರೆ.
Advertisement