

ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಹು ಭಾಷಾ ನಟಿ ತ್ರಿಶಾ ಕೃಷ್ಣನ್ ಅವರ ಹುಟ್ಟು ಹಬ್ಬದಂದೇ ತಮಿಳುನಾಡು ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅಚ್ಚರಿಯ ರೀತಿಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 109ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಭರ್ಜರಿಯಾಗಿ ಮುನ್ನುಗುತ್ತಿದೆ.
ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.
ದಳಪತಿ ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ವಿಜಯ್ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ನಟಿ ಉಪ ಚುನಾವಣೆಯಲ್ಲಿ ಗೆದ್ದರೆ, ಅವರು ಉಪಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟಿವಿಕೆ ಅಧ್ಯಕ್ಷ ವಿಜಯ್ ಅವರ ನೀಲಾಂಕರೈ ನಿವಾಸಕ್ಕೆ ನಟಿ ತ್ರಿಶಾ ಭೇಟಿ ನೀಡಿದ್ದಾರೆ.
ವಿಜಯ್ ಅವರು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ(ತಿರುಚಿ ಪೂರ್ವ ಮತ್ತು ಪೆರಂಬೂರು) ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇಂದು ತ್ರಿಶಾ ಅವರ ಹುಟ್ಟುಹಬ್ಬವಾಗಿದ್ದು, ಬೆಳಗ್ಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು, ಪ್ರಸಾದದೊಂದಿಗೆ ವಿಜಯ್ ಮನೆಗೆ ಭೇಟಿ ನೀಡಿದ್ದಾರೆ.
ವಿಜಯ್ ಅವರ ನಿವಾಸಕ್ಕೆ ತ್ರಿಶಾ ಪ್ರವೇಶಿಸುವಾಗ ಮಾಧ್ಯಮ ಸಿಬ್ಬಂದಿ ಅವರನ್ನು ಗಮನಿಸಿದ್ದು, ರಾಜಕೀಯ ಪಕ್ಷ ಸ್ಥಾಪಿಸಿದ 6 ತಿಂಗಳಲ್ಲಿ ಚೊಚ್ಚಲ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್ ಅವರ ಟಿವಿಕೆ ಪಕ್ಷ ಇತಿಹಾಸ ಸೃಷ್ಟಿಸಿ ಸರ್ಕಾರ ರಚಿಸಲು ಸಜ್ಜಾಗಿರುವ ಸಮಯದಲ್ಲೇ ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
Advertisement