

ಕೋಲ್ಕತ್ತ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ 9ರಂದು ನಡೆಯಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.
15 ವರ್ಷಗಳ ದೀದಿ ಆಡಳಿತ ಕೊನೆಗೊಳಿಸಿ ಅಧಿಕೃತವಾಗಿ ಮೇ 9ರಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರದ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇ 9ರಂದು ರವೀಂದ್ರನಾಥ ಠ್ಯಾಗೋರ್ ಅವರ ಜನ್ಮದಿನವಿದ್ದು, ಅಂದೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಿರ್ಧರಿಸಿದೆ. ಪ್ರಮಾಣ ವಚನ ಸಮಾರಂಭಕ್ಕೆ ಎನ್‌ಡಿಎ ಆಡಳಿತವಿರುವ ಎಲ್ಲ ರಾಜ್ಯಗಳ ಸಿಎಂಗಳಿಗೆ ಆಹ್ವಾನಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು (ಟಿಎಂಸಿ) ಸೋಲಿಸಿ, ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.
ಮೇ 4ರಂದು (ಸೋಮವಾರ) ಚುನಾವಣಾ ಫಲಿತಾಂಶ ಪ್ರಕಟವಾಗಿದೆ. 294 ಕ್ಷೇತ್ರಗಳ ಪೈಕಿ ಬಿಜೆಪಿ 206, ಟಿಎಂಸಿ 80, ಕಾಂಗ್ರೆಸ್ 2, ಇತರೆ ಪಕ್ಷಗಳು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಸ್ಪಷ್ಟ ಬಹುಮತ ಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೊಸ ಸರ್ಕಾರ ರಚನೆಗೆ ಸಜ್ಜಾಗಿದೆ.
Advertisement