

ನವದೆಹಲಿ: ಲೋಕಸಭೆಯ ಪ್ರತಿ ಆರರಲ್ಲಿ ಒಬ್ಬ ಬಿಜೆಪಿ ಸಂಸದ ಮತ ಕಳ್ಳತನದ ಮೂಲಕ ಗೆಲುವು ಸಾಧಿಸಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎನ್ನಬಹುದೇ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಮತ ಕಳ್ಳತನದ ಮೂಲಕ ಕೆಲವೊಮ್ಮೆ ವೈಯಕ್ತಿಕ ಸ್ಥಾನಗಳನ್ನು ಕದಿಯಲಾಗುತ್ತದೆ. ಇನ್ನು ಕೆಲವು ಬಾರಿ ಇಡೀ ಸರ್ಕಾರವನ್ನೇ ಕದಿಯಬಹುದು. ಲೋಕಸಭೆಯಲ್ಲಿ ಈಗಿರುವ ಬಿಜೆಪಿಯ 240 ಸಂಸದರಲ್ಲಿ ಪ್ರತಿ ಆರನೇ ಸಂಸದರು ಮತ ಕಳ್ಳತನದ ಮೂಲಕವೇ ಗೆದ್ದಿದ್ದಾರೆ ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಒಂದು ವೇಳೆ ನ್ಯಾಯಸಮ್ಮತವಾಗಿ ಚುನಾವಣೆ ನಡೆದರೆ ಬಿಜೆಪಿ ಇಂದು ಲೋಕಸಭೆಯಲ್ಲಿ 140 ಸ್ಥಾನಗಳನ್ನು ಕೂಡ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮತ ಕಳ್ಳತನದ ಮೂಲಕವೇ ಗೆದ್ದವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಪರಿಭಾಷೆಯಲ್ಲಿ ಹೇಳುವುದಾದರೆ ಅಂತಹವರನ್ನು ‘ನುಸುಳುಕೋರರು’ ಎಂದು ಕರೆಯಬೇಕೇ?, ಇನ್ನು ಹರಿಯಾಣದ ಕಥೆಯೇನು? ಅಲ್ಲಿರುವ ಇಡೀ ಸರ್ಕಾರ ನುಸುಳುಕೋರರು ಇದ್ದಂತೆ. ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲು ಬಿಜೆಪಿ, ಚುನಾವಣಾ ಆಯೋಗವನ್ನು ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
Advertisement