

ನವದೆಹಲಿ: ಇತ್ತೀಚಿಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಬಹುಮತದ ಕೊರತೆ ಎದುರಿಸುತ್ತಿರುವ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿದೆ.
ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಕಾಂಗ್ರೆಸ್, ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಜೊತೆ ಚುನಾವಣೋತ್ತರ ಮೈತ್ರಿಗೆ ಮುಂದಾಗಿದೆ. ಇದರಿಂದ ಆಕ್ರೋಶಗೊಂಡ ಡಿಎಂಕೆ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಜೊತೆ ಮೈತ್ರಿ ಕಡಿದುಕೊಳ್ಳಲು ನಿರ್ಧರಿಸಿದೆ.
ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಅವರು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದು, ಲೋಕಸಭೆಯಲ್ಲಿ ಡಿಎಂಕೆ ಸದಸ್ಯರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವಂತೆ ಕೋರಿದ್ದಾರೆ.
ಬದಲಾದ ರಾಜಕೀಯ ಪರಿಸ್ಥಿತಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿನ ಪಕ್ಷದ ಮೈತ್ರಿ ಕೊನೆಗೊಂಡಿರುವುದರಿಂದ, ಡಿಎಂಕೆ ಸದಸ್ಯರು ಕಾಂಗ್ರೆಸ್ ಸಂಸದರ ಪಕ್ಕದಲ್ಲಿ ಕುಳಿತುಕೊಳ್ಳುವುದು ಸೂಕ್ತವಲ್ಲ ಎಂದು ಕನಿಮೋಳಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಡಿಎಂಕೆ ಸಂಸದೀಯ ಪಕ್ಷಕ್ಕೆ ಪ್ರತ್ಯೇಕ ಆಸನ ಹಂಚಿಕೆ ಮಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಕನಿಮೋಳಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಒತ್ತಾಯಿಸಿದ್ದಾರೆ. ಇದರಿಂದಾಗಿ ಅದರ ಸದಸ್ಯರು ಲೋಕಸಭೆಯಲ್ಲಿ ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಕೋರಿಕೆಗೆ ಸ್ಪೀಕರ್ ಕಚೇರಿಯಿಂದ ಸೂಕ್ತ ಪರಿಗಣನೆ ಸಿಗುತ್ತದೆ ಎಂದು ಕನಿಮೋಳಿ ಅವರು ಆಶಿಸಿದ್ದಾರೆ.
Advertisement