

ಅಮರಾವತಿ: ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯಕ್ಕೆ ಕರೆ ನೀಡಿರುವುದನ್ನು ಅನುಸರಿಸಿ ಆಂಧ್ರ ಪ್ರದೇಶದಲ್ಲೂ ಮನೆಯಿಂದ ಕೆಲಸ, ವಾಹನ ರಹಿತ ದಿನ, ಬೆಂಗಾವಲು ಕಡಿತ ಘೋಷಣೆ ಮಾಡಲಾಗಿದೆ.
ವಾಹನ ರಹಿತ ದಿನ, ಆನ್‌ಲೈನ್ ತರಗತಿಗಳು, ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಕಡಿತ ಮಾಡುವುದು, ವಿಶೇಷ ವಿಮಾನಗಳ ಬಳಕೆ ಮತ್ತು ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡುವುದು ಹಾಗೂ ಚಿನ್ನ ಖರೀದಿ ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಆಂಧ್ರಪ್ರದೇಶ ಸಚಿವ ಸಂಪುಟ ಗುರುವಾರ ಶಿಫಾರಸು ಮಾಡಿದೆ.
ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ. ಪಾರ್ಥಸಾರಥಿ ಅವರು, ಮನೆಯಿಂದ ಕೆಲಸ ಮಾಡುವುದು, ಸಾರ್ವಜನಿಕ ಸಾರಿಗೆ ಬಳಸುವುದು, ವರ್ಚುವಲ್ ಸಭೆ ನಡೆಸುವುದು ಮತ್ತು ಇಂಧನ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಇತರ ಶಿಫಾರಸುಗಳಾಗಿವೆ ಎಂದರು.
ಅಮೆರಿಕ - ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ತೈಲ ಬಿಕ್ಕಟ್ಟು ಎದುರಾಗಿದ್ದು, ಈ ನಿರ್ಣಾಯಕ ಸಮಯದಲ್ಲಿ ದೇಶಕ್ಕಾಗಿ "ನನ್ನ ದೇಶ, ನನ್ನ ಜವಾಬ್ದಾರಿ" ತತ್ವವನ್ನು ಅಳವಡಿಸಿಕೊಳ್ಳಲು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಜನರಿಗೆ ಕರೆ ನೀಡಿದ್ದಾರೆ ಎಂದು ಹೇಳಿದರು.
"ಪ್ರಸ್ತುತ ಭೌಗೋಳಿಕ-ರಾಜಕೀಯ ಸಂದರ್ಭಗಳನ್ನು, ವಿಶೇಷವಾಗಿ ನಮ್ಮ ದೇಶದ ಇಂಧನ ಅಗತ್ಯತೆಗಳು, ವಿದೇಶೀ ವಿನಿಮಯ ಮತ್ತು ರೈತರ ಉತ್ಪನ್ನಗಳ ರಫ್ತುಗಳ ಮೇಲಿನ ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ನನ್ನ ದೇಶ, ನನ್ನ ಜವಾಬ್ದಾರಿ" ತತ್ವವನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ದೇಶದ ಪ್ರಯೋಜನಕ್ಕಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ನಾಯ್ಡು ಅವರು ಹೇಳಿರುವುದಾಗಿ ಪಾರ್ಥಸಾರಥಿ ವಿವರಿಸಿದರು.
Advertisement