

ತಿರುವನಂತಪುರಂ: ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದ ಹಿರಿಯ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿ ಕೇರಳ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಗುರುವಾರ ಹೇಳಿದ್ದು, ಆಡಳಿತದಲ್ಲಿ "ಸಾಮೂಹಿಕ ಪ್ರಯತ್ನ"ಕ್ಕೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಇಂದು ವಿ.ಡಿ. ಸತೀಶನ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಘೋಷಿಸಿದ ನಂತರ ತಿರುವನಂತಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸತೀಶನ್ ಅವರು, ರಾಹುಲ್ ಗಾಂಧಿ ಮತ್ತು ಯುಡಿಎಫ್ ಕಾರ್ಯಕರ್ತರಿಗೆ ಧನ್ಯವಾದ ಹೇಳಿದರು.
"ನಾನು ಸಿಎಂ ಸ್ಥಾನ ಪಡೆದಿರುವುದನ್ನು ವೈಯಕ್ತಿಕ ಸಾಧನೆ ಎಂದು ಭಾವಿಸುವುದಿಲ್ಲ. ಇದು ದೈವಿಚ್ಛೆ ಎಂದುಕೊಳ್ಳುತ್ತೇನೆ. ಎಐಸಿಸಿಯ ಎಲ್ಲಾ ಚಟುವಟಿಕೆಗಳನ್ನು ಸಂಘಟಿಸಿದವರು ಕೆ.ಸಿ. ವೇಣುಗೋಪಾಲ್. ಅವರ ಬೆಂಬಲ ಅಪಾರವಾಗಿತ್ತು. ರಮೇಶ್ ಚೆನ್ನಿತ್ತಲ ನನ್ನ ನಾಯಕರೂ ಹೌದು. ನಾನು ಅವರೆಲ್ಲರನ್ನೂ ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಕೇರಳದ ಪ್ರತಿಯೊಂದು ವರ್ಗದ ಜನರ ಬೆಂಬಲವನ್ನು ನಾನು ಬಯಸುತ್ತೇನೆ. ಸಾಮೂಹಿಕ ಪ್ರಯತ್ನ ಮಾತ್ರ ಹೊಸ ಕೇರಳವನ್ನು ನಿರ್ಮಿಸಬಲ್ಲದು. ಯಾರೂ ಇದನ್ನು ಒಬ್ಬಂಟಿಯಾಗಿ ಮಾಡಲು ಸಾಧ್ಯವಿಲ್ಲ; ಒಂದು ತಂಡವಾಗಿ ಅದನ್ನು ಸಾಧಿಸಬಹುದು" ಎಂದರು.
"ನನ್ನ ಪಕ್ಷವು ನನಗೆ ಒಂದು ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ಅದಕ್ಕಾಗಿ ನಾನು ರಾಹುಲ್ ಗಾಂಧಿ ಮತ್ತು ಇತರರಿಗೆ ಧನ್ಯವಾದ ಹೇಳುತ್ತೇನೆ. ಈ ಚುನಾವಣೆಯಲ್ಲಿ ಲಕ್ಷಾಂತರ ಯುಡಿಎಫ್ ಕಾರ್ಯಕರ್ತರು ಮತ್ತು ನಾಯಕರು ಶ್ರಮಿಸಿದ್ದಾರೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ" ಎಂದು ಸತೀಶನ್ ಹೇಳಿದರು.
ಶಾಸಕಾಂಗ ಪಕ್ಷದ ಸಭೆಯ ನಂತರ ಸತೀಶನ್ ಅವರು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಯುಡಿಎಫ್ ಸರ್ಕಾರವನ್ನು ರಚಿಸಲು ಹಕ್ಕು ಮಂಡಿಸಲು ಸಜ್ಜಾಗಿದ್ದಾರೆ.
"ನಾವು ಮೊದಲು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ ಮತ್ತು ನಂತರ ಪ್ರಮಾಣವಚನ ಯಾವಾಗ ನಡೆಯುತ್ತಿದೆ ಎಂಬುದನ್ನು ಲೆಕ್ಕಾಚಾರ ಮಾಡುತ್ತೇವೆ. ನೂತನ ಸಚಿವರನ್ನು ಪಕ್ಷವು ನಿರ್ಧರಿಸುತ್ತದೆ. ಪಕ್ಷವು ಒಟ್ಟಾಗಿ ನಿರ್ಧರಿಸುತ್ತದೆ" ಎಂದರು.
Advertisement