

ನವದೆಹಲಿ: NEET-UG 2026 ರ ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದಿನ ಕಿಂಗ್ ಪಿನ್ ನನ್ನು ಬಂಧಿಸಲಾಗಿದೆ ಎಂದು ಕೇಂದ್ರೀಯ ತನಿಖಾ ತಂಡ (CBI) ಶುಕ್ರವಾರ ತಿಳಿಸಿದೆ. ಹಲವು ವರ್ಷಗಳಿಂದ ನೀಟ್ ಪ್ರಶ್ನೆ ಪತ್ರಿಕೆ ಸಿದ್ಧತೆಯ ಸಮಿತಿಯ ಭಾಗವಾಗಿದ್ದ ಲಾಟೂರಿನ ಕೆಮಿಸ್ಟ್ರಿ 'ಲೆಕ್ಚರರ್' ಪ್ರೊಫೆಸರ್ ಪಿ.ವಿ. ಕುಲಕರ್ಣಿ ಎಂಬುವರನ್ನು ಪುಣೆಯ ಅವರ ನಿವಾಸದಿಂದ ಬಂಧಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪರೀಕ್ಷಾ ಪ್ರಕ್ರಿಯೆಯೊಂದಿಗೆ ತೊಡಗಿಸಿಕೊಂಡಿದ್ದ ಕುಲಕರ್ಣಿಗೆ NEET-UG 2026 ಪ್ರಶ್ನೆ ಪತ್ರಿಕೆಗಳನ್ನು ಪಡೆಯಲು ಅವಕಾಶವಿತ್ತು. ಅದನ್ನು ಬಳಸಿಕೊಂಡು ತಮ್ಮ ಮನೆಯಲ್ಲಿ ವಿಶೇಷ ತರಬೇತಿ ತರಗತಿಗಳನ್ನು ನಡೆಸುತ್ತಿದ್ದರು. ಅಲ್ಲಿ ಪರೀಕ್ಷೆಗೂ ಮುನ್ನಾ ಪ್ರಶ್ನೆಗಳು ಮತ್ತು ಉತ್ತರಗಳನ್ನು ಹಂಚಿಕೊಳ್ಳಲಾಗುತ್ತಿತ್ತು ಎಂದು ಸಿಬಿಐ ಆರೋಪಿಸಿದೆ.
2026 ರ ಏಪ್ರಿಲ್ ಕೊನೆಯ ವಾರದಲ್ಲಿ, ಕುಲಕರ್ಣಿ ಮತ್ತೊಬ್ಬ ಆರೋಪಿ ಮನೀಷಾ ವಾಘ್ಮರೆ ಸಹಾಯದಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರು ಎಂದು ಸಿಬಿಐ ಹೇಳಿದೆ. ವಾಘ್ಮರೆ ಅವರನ್ನು ಮೇ 14 ರಂದು ಏಜೆನ್ಸಿ ಬಂಧಿಸಿತ್ತು.
ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನಡೆಸುತ್ತಿದ್ದ ಕುಲಕರ್ಣಿ, ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳು, ಸರಿಯಾದ ಉತ್ತರಗಳನ್ನು ಹೇಳುತ್ತಿದ್ದರು. ಅವರು ಹೇಳಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ತಮ್ಮ ನೋಟ್‌ಬುಕ್‌ಗಳಲ್ಲಿ ಕೈಬರಹದಲ್ಲಿ ಬರೆದುಕೊಂಡಿದ್ದರು. 03.05.2026 ರಂದು ನಡೆದ NEET-UG 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿಯೂ ಅದೇ ಪ್ರಶ್ನೆಗಳಿದ್ದವು ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ ಮತ್ತು ಅಹಲ್ಯಾನಗರದಿಂದ ಇದುವರೆಗೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಐದು ಆರೋಪಿಗಳನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿವರವಾದ ವಿಚಾರಣೆಗಾಗಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಗುರುವಾರ ಬಂಧಿಸಲಾದ ಉಳಿದ ಇಬ್ಬರು ಆರೋಪಿಗಳನ್ನು ಪುಣೆಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ನಂತರ ಅವರನ್ನು ದೆಹಲಿಗೆ ಸ್ಥಳಾಂತರಿಸಲಾಗುವುದು ಎಂದು ಸಿಬಿಐ ಹೇಳಿದೆ.
Advertisement