

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ತಲಾ 3 ರೂ. ಮತ್ತು ಸಿಎನ್‌ಜಿ ಬೆಲೆ ಎರಡು ರೂಪಾಯಿ ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು 'ಮೆಹಂಗೈ ಮ್ಯಾನ್' ಎಂದು ಟೀಕಿಸಿದೆ.
ಚುನಾವಣೆಗಳು ಮುಗಿದಿವೆ, ಮೋದಿಯವರ ಚೇತರಿಕೆ ಪ್ರಾರಂಭವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರವು ಈಗಾಗಲೇ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳಿಂದ ಬಳಲುತ್ತಿರುವ ನಾಗರಿಕರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡವನ್ನು ಹೇರುತ್ತಿದೆ ಎಂದು ಹೇಳಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಕಳೆದ ಹಲವು ವರ್ಷಗಳಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಅದರ ಲಾಭವನ್ನು ಗ್ರಾಹಕರಿಗೆ ನೀಡಿಲ್ಲ. ಇದೀಗ ಹೆಚ್ಚು ಶುಲ್ಕ ವಿಧಿಸಿ ಗ್ರಾಹಕರನ್ನು ಶೋಷಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಜಾಗತಿಕ ತೈಲ ಬೆಲೆಗಳು ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಮತ್ತೆ ಏರಿಕೆಯಾಗುತ್ತಿದ್ದು, ಅದನ್ನು ಕಾರಣವಾಗಿಸಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿ ಲೀಟರ್‌ಗೆ ರೂ.3 ಹೆಚ್ಚಿಸಿದೆಯ “ಈ ಏರಿಕೆ ದೇಶದಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಿಸುತ್ತದೆ. ಈ ಹಣಕಾಸು ವರ್ಷದಲ್ಲಿ ದರ ಏರಿಕೆ ಸುಮಾರು ಶೇ.6 ವರೆಗೆ ತಲುಪುವ ಸಾಧ್ಯತೆ ಇದೆ. ಬೆಳವಣಿಗೆ ಆರ್ಥಿಕ ಬೆಳವಣಿಗೆಯ ಅಂದಾಜುಗಳನ್ನು ಕುಗ್ಗಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಇಂಧನ ದರ ಹೆಚ್ಚಿಸಿದ್ದು, ಸರ್ಕಾರಿ ತೈಲ ಕಂಪನಿಗಳು ಎದುರಿಸುತ್ತಿರುವ ನಷ್ಟ ಹಾಗೂ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ದರ ಪರಿಷ್ಕರಣೆ ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು ಮುಗಿದ ಕೇವಲ 16 ದಿನಗಳ ಬಳಿಕ ನಡೆದಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ರೂ.97.77 ಮತ್ತು ಡೀಸೆಲ್ ದರ ರೂ.90.67ಕ್ಕೆ ಏರಿಕೆಯಾಗಿದೆ. 2022ರಿಂದ ಬಹುತೇಕ ಸ್ಥಿರವಾಗಿದ್ದ ಇಂಧನ ದರಗಳು ಈಗ ಮತ್ತೆ ಏರಿಕೆ ಕಂಡಿವೆ.
ಆದರೆ ಇಂಧನ ದರಗಳು ರಾಜ್ಯಗಳ VAT ತೆರಿಗೆಯ ಕಾರಣದಿಂದ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತವೆ. ಆದಾಗ್ಯೂ ಡೀಸೆಲ್ ಮತ್ತು ಪೆಟ್ರೋಲ್ ದರಗಳು ಅನಿಯಂತ್ರಿತವಾಗಿದ್ದರೂ ಅವುಗಳ ಪರಿಷ್ಕರಣೆ ರಾಜಕೀಯವಾಗಿ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ.
Advertisement