'ಜಾತ್ಯತೀತತೆ ಬಗ್ಗೆ ಇಸ್ಲಾಮಿಕ್ ಮೂಲಭೂತವಾದಿಗಳು' ಮಾತನಾಡ್ತಿದ್ದಾರೆ! ಪ್ರಧಾನಿ ವಿರುದ್ಧ ರಾಹುಲ್ ಗಾಂಧಿಯ 'ವಿದೇಶಿ ನೆರವು' ಆರೋಪಕ್ಕೆ ರಿಜಿಜು ತಿರುಗೇಟು

ಗಾಂಧಿಯವರ ಈ ಹೇಳಿಕೆಯನ್ನು "ಜಾತ್ಯತೀತತೆಯ ಬಗ್ಗೆ ಇಸ್ಲಾಮಿಕ್ ಮೂಲಭೂತವಾದಿಗಳು ಮಾತನಾಡುವುದಕ್ಕೆ ಹೋಲಿಸಿರುವ ರಿಜಿಜು, ಅವರು ಭಾರತದ ಶತ್ರುಗಳ ಅಜೆಂಡಾವನ್ನು ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Rijiju, Rahul Gandhi
ಕಿರಣ್ ರಿಜಿಜು, ರಾಹುಲ್ ಗಾಂಧಿ
Updated on: 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ಮತ್ತು ಅಧಿಕಾರದಲ್ಲಿ ಮುಂದುವರಿಯಲು "ವಿದೇಶಿ ನೆರವು" ಪಡೆದಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಕ್ಕೆ ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಗಾಂಧಿಯವರ ಈ ಹೇಳಿಕೆಯನ್ನು "ಜಾತ್ಯತೀತತೆಯ ಬಗ್ಗೆ ಇಸ್ಲಾಮಿಕ್ ಮೂಲಭೂತವಾದಿಗಳು ಮಾತನಾಡುವುದಕ್ಕೆ ಹೋಲಿಸಿರುವ ರಿಜಿಜು, ಅವರು ಭಾರತದ ಶತ್ರುಗಳ ಅಜೆಂಡಾವನ್ನು ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷ ಅಥವಾ ಪ್ರಧಾನಿ ಮೋದಿ ಇವರಲ್ಲಿ ಯಾರು ವಿದೇಶಿ ಬೆಂಬಲ ಪಡೆದಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ನೀಡಿದ ಸವಾಲನ್ನು ತಳ್ಳಿಹಾಕಿದ ರಿಜಿಜು, "ಉನ್ನತ ಮಟ್ಟದ ಚರ್ಚೆಗಳು ಪ್ರಬುದ್ಧ ವ್ಯಕ್ತಿಗಳ ನಡುವೆ ನಡೆಯುತ್ತವೆ. ಇದು ಜಾತ್ಯತೀತತೆಯ ಬಗ್ಗೆ ಇಸ್ಲಾಮಿಕ್ ಮೂಲಭೂತವಾದಿಗಳು ಮಾತನಾಡುವುದು, ಪ್ರತ್ಯೇಕತಾವಾದಿಗಳು ಭಾರತದ ಧ್ವಜವನ್ನು ಹಿಡಿಯುವುದು ಮತ್ತು ಅರಾಜಕತಾವಾದಿಗಳು ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸುವುದಕ್ಕೆ ಸಮಾನವಾಗಿದೆ ಎಂದು ಟೀಕಿಸಿದ್ದಾರೆ.

ಮೋದಿ ಅವರು ವಿದೇಶಿ ನೆರವಿನೊಂದಿಗೆ ಪ್ರಧಾನಿಯಾದರು ಮತ್ತು ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂಬ ರಾಹುಲ್ ಗಾಂಧಿಯವರ ಆರೋಪದ ಹಿನ್ನೆಲೆಯಲ್ಲಿ ಈ ವಾಕ್ಸಮರ ನಡೆದಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಿನ್ನೆ ಮಾಡಿದ ರಾಹುಲ್ ಗಾಂಧಿ, ಈ ವಿಷಯದ ಕುರಿತು ಬಹಿರಂಗ ಚರ್ಚೆಗೆ ಪ್ರಧಾನಿಯವರಿಗೆ ಸವಾಲು ಹಾಕಿದ್ದಾರೆ. ನಿಮ್ಮ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿಯರ ನಿಯಂತ್ರಣದಲ್ಲಿದೆ ಮತ್ತು ಅವರ ಬೆಂಬಲವನ್ನು ಹೊಂದಿದೆ. ವಿದೇಶಿ ಸಾಮಾಜಿಕ ಮಾಧ್ಯಮಗಳು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತಿವೆ. ಈ ಬಗ್ಗೆ ಬಹಿರಂಗ ಚರ್ಚೆಗೆ ಸವಾಲು ಹಾಕುತ್ತೇನೆ. ಯಾವುದೇ ವೇದಿಕೆ, ಯಾವುದೇ ಸಮಯ, ಧೈರ್ಯವಿದ್ದರೆ ಬನ್ನಿ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಗುಜರಾತ್‌ಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ಮೋದಿ ಅವರು, ದೇಶವನ್ನು ವಿಭಜಿಸಲು ಕೆಲವು ಶಕ್ತಿಗಳು ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿದ ನಂತರ ಈ ವಾಕ್ಸಮರ ಆರಂಭವಾಯಿತು. ರಾಹುಲ್ ಗಾಂಧಿಯವರ ವಿದೇಶ ಪ್ರವಾಸಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ, ವಿದೇಶದಲ್ಲಿ ಯಾರು ಯಾರನ್ನು ಗುಪ್ತವಾಗಿ ಭೇಟಿಯಾಗುತ್ತಿದ್ದಾರೆ ಮತ್ತು ಯಾವ ಭಾರತ ವಿರೋಧಿ ಶಕ್ತಿಗಳು ಅವರಿಗೆ ಬೆಂಬಲ ನೀಡುತ್ತಿವೆ ಎಂದು ಪ್ರಶ್ನಿಸಿದ್ದರು.

ಈ ಆರೋಪಗಳನ್ನು ಪ್ರಧಾನಿ ಅವರ ಮೇಲೆಯೇ ರಾಹುಲ್ ಗಾಂಧಿ ತಿರುಗಿಸಿದ್ದು, ಅವರು ಅಧಿಕಾರದಲ್ಲಿ ಉಳಿಯಲು ವಿದೇಶಿ ಬೆಂಬಲವನ್ನು ಅವಲಂಬಿಸಿದ್ದಾರೆ ಎಂದು ದೂರಿದ್ದಾರೆ. ರಿಜಿಜು ಅವರ ಇತ್ತೀಚಿನ ಹೇಳಿಕೆಗಳು ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರವನ್ನು ಇನ್ನಷ್ಟು ತೀವ್ರಗೊಳಿಸಿವೆ.

ಇಂದು ಕೂಡಾ ರಾಹುಲ್ ಗಾಂಧಿ ವಿಡಿಯೋ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸವಾಲು ಹಾಕಿ 24 ಗಂಟೆ ಕಳೆದಿದೆ. ಮೋದಿ ಅವರೇ ಈಗಲೂ ಹೇಳುತ್ತಿದ್ದೇನೆ, ಯಾವುದೇ ವೇದಿಕೆಗಾದರೂ ಚರ್ಚೆಗೆ ಬನ್ನಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X