'ಅಮ್ಮಾ ಪ್ಲೀಸ್ ಮನೆಗ್ ಕರ್ಕೊಂಡ್ ಹೋಗು': 2 ತಿಂಗಳ ಕಣ್ಣೀರಿಗೆ ಕೊನೆಗೂ ತೆರೆ, ಪೋಷಕರ ಮಡಿಲು ಸೇರಿದ ಕಂದಮ್ಮ! ಆಗಿದ್ದೇನು? Video

ತೆಲಂಗಾಣ ಹೈಕೋರ್ಟ್ ಮಧ್ಯಪ್ರವೇಶ ಹಾಗೂ ಜಗಿತ್ಯಾಲ ಜಿಲ್ಲಾಡಳಿತದ ಕ್ರಮದ ಬಳಿಕ, ಸುಮಾರು ಮೂರು ವರ್ಷಗಳಿಂದ ತನ್ನನ್ನು ಸಾಕಿ ಸಲಹಿದ್ದ ದಂಪತಿಯ ಮಡಿಲಿಗೆ ಪುಟ್ಟ ಬಾಲಕ ರುದ್ರ ಮಹೇಶ್ ಸೋಮವಾರ ಸಂಜೆ ಮರಳಿದ್ದಾನೆ.
Toddlers Emotional Reunion With Foster Parents
ಕೊನೆಗೂ ಪೋಷಕರ ಮಡಿಲು ಸೇರಿದ ಮಗು
Updated on: 

ಜಗಿತ್ಯಾಲ: ತೆಲಂಗಾಣದಲ್ಲಿ ಭಾರೀ ಸಾರ್ವಜನಿಕ ಕಳವಳಕ್ಕೆ ಕಾರಣವಾಗಿದ್ದ ಮೂರು ವರ್ಷದ ಬಾಲಕನ ಪಾಲನೆ-ಪೋಷಣೆ ಮತ್ತು ವಶದ ವಿವಾದಕ್ಕೆ ಕೊನೆಗೂ ಸುಖಾಂತ್ಯ ಸಿಕ್ಕಿದೆ.

ತೆಲಂಗಾಣ ಹೈಕೋರ್ಟ್ ಮಧ್ಯಪ್ರವೇಶ ಹಾಗೂ ಜಗಿತ್ಯಾಲ ಜಿಲ್ಲಾಡಳಿತದ ಕ್ರಮದ ಬಳಿಕ, ಸುಮಾರು ಮೂರು ವರ್ಷಗಳಿಂದ ತನ್ನನ್ನು ಸಾಕಿ ಸಲಹಿದ್ದ ದಂಪತಿಯ ಮಡಿಲಿಗೆ ಪುಟ್ಟ ಬಾಲಕ ರುದ್ರ ಮಹೇಶ್ ಸೋಮವಾರ ಸಂಜೆ ಮರಳಿದ್ದಾನೆ.

'ಅಮ್ಮಾ, ನನ್ನನ್ನು ಮನೆಗೆ ಕರೆದುಕೊಂಡು ಹೋಗು... ನನಗೆ ಭಯವಾಗುತ್ತಿದೆ!' ಎಂದು ಮಗು ಅಂಗಲಾಚುತ್ತಿದ್ದ ಹೃದಯವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕರೀಂನಗರದ ಮಕ್ಕಳ ಆರೈಕೆ ಕೇಂದ್ರದಲ್ಲಿದ್ದ ಬಾಲಕನ ಕಣ್ಣೀರಿನ ಮನವಿಯ ವಿಡಿಯೋ ಸಾವಿರಾರು ಜನರ ಮನಕಲಕಿತ್ತು.

Toddlers Emotional Reunion With Foster Parents
ಗುಂಡು ಪತ್ತೆ, ಪ್ರಾಚೀನ ಬಂದೂಕು: ಚೀತಾ ಬೇಟೆಗಾರರು ಸಿಕ್ಕಿ ಬಿದ್ದಿದ್ದೇ ರೋಚಕ, STF ಹೇಳಿದ್ದೇನು?

ಮಗುವನ್ನು ದತ್ತು ಪಡೆದಿದ್ದ ದಂಪತಿ

ಮೂಲಗಳ ಪ್ರಕಾರ ಕಸರಾಪು ಶ್ರೀನಿವಾಸ್ ಮತ್ತು ಸರಿತಾ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಈ ಮಗುವನ್ನು ದತ್ತು ಪಡೆದಿದ್ದರು. ಈ ಬಗ್ಗೆ ಮಾತನಾಡಿರುವ ದಂಪತಿ, ಕೇವಲ ಐದು ದಿನಗಳ ಮಗುವಾಗಿದ್ದಾಗಲೇ ತಮ್ಮ ಮನೆಗೆ ಕರೆತಂದು, ಸ್ವಂತ ಮಗುವಿನಂತೆ ಸುಮಾರು ಮೂರು ವರ್ಷಗಳಿಂದ ಸಾಕಿ ಬೆಳೆಸಿದ್ದೇವೆ. ನಮಗೆ ಮಕ್ಕಳಿರಲಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ಮಗುವನ್ನು ದತ್ತು ಪಡೆದಿದ್ದೇವೆ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.

ಕಾನೂನು ಮಾನ್ಯತೆ ಇಲ್ಲ ಎಂದು ಅಧಿಕಾರಿಗಳ ಕಿರಿಕ್

ಈ ನಡುವೆ ದಂಪತಿಗಳು ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆಯನ್ನು ಕಾನೂನು ಬಾಹಿರ ಎಂದು ಪರಿಗಣಿಸಿ ಆಕ್ಷೇಪ ಎತ್ತಿದ್ದರು. ದತ್ತು ಪ್ರಕ್ರಿಯೆಯ ಕಾನೂನುಬದ್ಧತೆಯ ಬಗ್ಗೆ ಅಧಿಕಾರಿಗಳು ಪ್ರಶ್ನೆ ಎತ್ತಿದ್ದರು. ಬಳಿಕ ಮಗುವನ್ನು ದಂಪತಿಯಿಂದ ಬೇರ್ಪಡಿಸಿ ಕರೀಂನಗರದ ಸರ್ಕಾರಿ ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈ ನಡುವೆ, ಸರಿತಾ ಅವರ ಬಳಿ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಬಾಲಕ ಕಣ್ಣೀರಿಡುತ್ತಾ ಅಂಗಲಾಚುತ್ತಿರುವ ವಿಡಿಯೋ ವೈರಲ್ ಆಗಿತ್ತು. ಮಗುವಿನ ಸ್ಥಿತಿ ಕಂಡು ದಂಪತಿಯೂ ಭಾವುಕರಾಗಿದ್ದರು.

ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿ

ಮಗುವಿನ ವಶಕ್ಕಾಗಿ ಶ್ರೀನಿವಾಸ್ ಮತ್ತು ಸರಿತಾ ದಂಪತಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಅವರ ಪ್ರಕಾರ, 2026ರ ಅಕ್ಟೋಬರ್ 16ರಂದು ಡಬ್ಲ್ಯು.ಪಿ. ಸಂಖ್ಯೆ 31588/2026ರ ವಿಚಾರಣೆಯಲ್ಲಿ ಮಧ್ಯಂತರ ಆದೇಶ ಹೊರಡಿಸಿದ್ದ ನ್ಯಾಯಾಲಯ, ಮಗುವಿನ ಮಧ್ಯಂತರ ಪಾಲನಾ ವಶವನ್ನು ದಂಪತಿಗೆ ಮರಳಿಸುವಂತೆ ನಿರ್ದೇಶಿಸಿತ್ತು.

ಕೋರ್ಟ್ ಆದೇಶದ ಹೊರತಾಗಿಯೂ ಮಗು ಹಸ್ತಾಂತರ ಪ್ರಕ್ರಿಯೆ ವಿಳಂಬ

ಇನ್ನು ಅಕ್ಟೋಬರ್ 28ರಂದು ನ್ಯಾಯಾಲಯದ ಆದೇಶವನ್ನು ಮಕ್ಕಳ ಕಲ್ಯಾಣ ಸಮಿತಿ (CWC)ಗೆ ಸಲ್ಲಿಸಿದ್ದರೂ, ಮಗುವನ್ನು ಹಸ್ತಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ದಂಪತಿ ಆರೋಪಿಸಿದ್ದರು. ಈ ವಿಳಂಬದ ಬಗ್ಗೆ ಮತ್ತೆ ಹೈಕೋರ್ಟ್ ಗಮನ ಸೆಳೆದಿದ್ದ ದಂಪತಿ, ನವೆಂಬರ್ 2ರ ಸೋಮವಾರ ಜಗಿತ್ಯಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಜಾವಣಿ ಜನಸ್ಪಂದನಾ ಕಾರ್ಯಕ್ರಮದಲ್ಲಿಯೂ ಮನವಿ ಸಲ್ಲಿಸಿದ್ದರು.

Toddlers Emotional Reunion With Foster Parents
ಕರ್ನಾಟಕದ ಜನ, ಸಿಎಂ ಡಿಕೆಶಿಗೆ ಧನ್ಯವಾದ ಅರ್ಪಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು!

ಜಿಲ್ಲಾಧಿಕಾರಿಯಿಂದ ಭರವಸೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿರುವ ಕಳವಳದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಜಗಿತ್ಯಾಲ ಜಿಲ್ಲಾಧಿಕಾರಿ ಬಿ. ಸತ್ಯ ಪ್ರಸಾದ್, ಹೈಕೋರ್ಟ್ ನಿರ್ದೇಶನದಂತೆ ಮಗುವನ್ನು ದಂಪತಿಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದ್ದರು.

ಮಕ್ಕಳ ಕಲ್ಯಾಣ ಸಮಿತಿಯ ಅನುಮೋದನೆ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಿಂದಾಗಿ ವಿಳಂಬವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗ್ಗೆಯೊಳಗೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು.

ಕೊನೆಗೂ ಮಗು ಹಸ್ತಾಂತರ

ಅದರಂತೆ, ನವೆಂಬರ್ 2ರ ಸೋಮವಾರ ಸಂಜೆ ರುದ್ರ ಮಹೇಶ್‌ನನ್ನು ದಂಪತಿಗೆ ಹಸ್ತಾಂತರಿಸಲಾಯಿತು. ವಾರಗಳ ಆತಂಕ ಮತ್ತು ಮಗುವಿನಿಂದ ದೂರವಿದ್ದ ನೋವಿನ ಬಳಿಕ ಶ್ರೀನಿವಾಸ್ ಮತ್ತು ಸರಿತಾ ದಂಪತಿಗೆ ಈ ಮರುಮಿಲನ ನೆಮ್ಮದಿ ತಂದಿದೆ. ಇತ್ತ, ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದ ಪುಟ್ಟ ರುದ್ರ ಮಹೇಶ್‌ಗೆ ಪರಿಚಿತ ಪ್ರೀತಿಯ ಮಡಿಲು ಮತ್ತೆ ಸಿಕ್ಕಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X