

ನವದೆಹಲಿ: ಅಮೆರಿಕದ ಮಿಚಿಗನ್ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಅಲ್-ಸಯೀದ್ ಗೆಲ್ಲುವ ಮೂಲಕ ಇದೇ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯೊಬ್ಬರು ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ. ಇದು ನಮಗೆ ಉತ್ತಮ ದಾರಿ ತೋರಿಸುತ್ತಿದ್ದು ಮುಂದೆ ಉತ್ತರಪ್ರದೇಶದ ಚುನಾವಣೆಗಳಲ್ಲಿ ನೂರಾರು ಅಬ್ದುಲ್ಲಾಗಳು ಗೆಲ್ಲಬೇಕು ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಅಮೆರಿಕ ಕಾಂಗ್ರೆಸ್‌ನ ಮೇಲ್ಮನೆ (ಸೆನೆಟ್) ಗೆ ಆಯ್ಕೆಯಾದ ಮೊದಲ ಮುಸ್ಲಿಂ ಅಲ್-ಸಯೀದ್ ಗೆಲುವಿಗೆ ಪ್ರತಿಕ್ರಿಯಿಸಿದ ಹೈದರಾಬಾದ್ ಸಂಸದ, ಈ ಫಲಿತಾಂಶವು ತಮ್ಮ ಗುರುತಿನ ಕಾರಣದಿಂದಾಗಿ ರಾಜಕೀಯ ನಿಂದನೆಗಳನ್ನು ಎದುರಿಸುತ್ತಿರುವ ಮತದಾರರಿಗೆ ಸಂದೇಶವಾಗಿದೆ ಎಂದರು. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಓವೈಸಿ, ಮಿಚಿಗನ್‌ನಲ್ಲಿ 'ಅಬ್ದುಲ್' ಗೆದ್ದಿದ್ದಾನೆ; ಈಗ ಉತ್ತರ ಪ್ರದೇಶದ 'ಅಬ್ದುಲ್' ತನ್ನ ರಾಜಕೀಯ ಗುರುತನ್ನು ಬಲಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಸಂಘಿಗಳು ಅಬ್ದುಲ್ಲಾ ಎಂಬ ಪದವನ್ನು ಅಣಕಿಸಲು ತುಂಬಾ ಪ್ರಯತ್ನಿಸಿದ್ದಾರೆ. ಈಗ 'ಅಬ್ದುಲ್' ಅಲ್ಲಾಹನಿಗೆ ಮಾತ್ರ ನಮಸ್ಕರಿಸುವುದಿಲ್ಲ ಎಂದು ತೋರಿಸಬೇಕಾದ ಸಮಯ ಬಂದಿದೆ ಎಂದರು.
ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಮತ್ತು ಮುಸ್ಲಿಂ ಮತದಾರರು ಒಟ್ಟು ಮತದಾರರಲ್ಲಿ ಸುಮಾರು ಐದನೇ ಒಂದು ಭಾಗದಷ್ಟಿರುವ ಉತ್ತರಪ್ರದೇಶದಲ್ಲಿ 'ಅಬ್ದುಲ್ಲಾ' ಎಂಬ ಹೆಸರನ್ನು ರಾಜಕೀಯ ಚರ್ಚೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಳ್ಳಲು ಹೆಚ್ಚಾಗಿ ಬಳಸಲಾಗುತ್ತಿದೆ. ಆಡಳಿತ ಬಿಜೆಪಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ಓವೈಸಿ ಅವರ ಪಕ್ಷ ಪದೇ ಪದೇ ಆರೋಪಿಸಿದೆ. ಆದರೆ ಸಮಾಜವಾದಿ ಪಕ್ಷದಂತಹ ಪ್ರಾದೇಶಿಕ ವಿರೋಧ ಪಕ್ಷಗಳು ಸಮುದಾಯವನ್ನು ಮತ ಬ್ಯಾಂಕ್ ಆಗಿ ಮಾತ್ರ ಬಳಸುತ್ತವೆ ಎಂದರು.
ನಿರ್ಣಾಯಕ ಮಿಚಿಗನ್ ಸೆನೆಟ್ ರೇಸ್‌ನಲ್ಲಿ 42 ವರ್ಷದ ವೈದ್ಯಕೀಯ ಆಡಳಿತಾಧಿಕಾರಿ ಎಲ್-ಸಯೀದ್ ವಿಜೇತ ಎಂದು ಯುಎಸ್ ಟಿವಿ ನೆಟ್‌ವರ್ಕ್‌ಗಳು ಘೋಷಿಸಿದ ಕೆಲವೇ ಗಂಟೆಗಳ ನಂತರ AIMIM ಮುಖ್ಯಸ್ಥರ ಹೇಳಿಕೆಗಳು ಬಂದಿವೆ. ಎಲ್-ಸಯೀದ್ ಮಾಜಿ ರಿಪಬ್ಲಿಕನ್ ಕಾಂಗ್ರೆಸ್ ಸದಸ್ಯ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ್ದಾರೆ.