'ರಾಹುಲ್ ಗಾಂಧಿ ವಿದೇಶ ಪ್ರವಾಸ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ, ಬಹಿರಂಗಪಡಿಸಬೇಕು': ಅಮಿತ್ ಶಾ

ಹರಿಯಾಣದ ಕರ್ನಾಲ್‌ನಲ್ಲಿ ಸೆಕ್ಟರ್ 12ರಿಂದ ದಯಾನಂದ್ ಚೌಕ್‌ವರೆಗೆ ಬಿಜೆಪಿಯ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಪಾದಯಾತ್ರೆಯ ನೇತೃತ್ವ ವಹಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.
Amit Shah
ಅಮಿತ್ ಶಾ
Updated on: 

ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಬಹಿಷ್ಕಾರದ ಮೂಲಕ ಪ್ರತಿಭಟನೆ ನಡೆಸುವುದನ್ನು ಪಕ್ಷದ ರಾಜಕೀಯ ಸಂಸ್ಕೃತಿಯ ಭಾಗವಾಗಿಸಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

ಹರಿಯಾಣದ ಕರ್ನಾಲ್‌ನಲ್ಲಿ ಸೆಕ್ಟರ್ 12ರಿಂದ ದಯಾನಂದ್ ಚೌಕ್‌ವರೆಗೆ ಬಿಜೆಪಿಯ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಪಾದಯಾತ್ರೆಯ ನೇತೃತ್ವ ವಹಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತು ಚರ್ಚೆಗೆ ಅತ್ಯುನ್ನತ ವೇದಿಕೆಯಾಗಿದೆ. ಆದರೆ, ಲೋಕಸಭೆ ಪ್ರತಿಪಕ್ಷ ನಾಯಕರು ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಹುಲ್ ಗಾಂಧಿ ನೀವು ಸಂಸತ್ತಿನ ಕಲಾಪ ನಡೆಯಲು ಬಿಡುವುದಿಲ್ಲ, ವಿಷಯಗಳ ಬಗ್ಗೆ ಚರ್ಚೆಯನ್ನೂ ಮಾಡುವುದಿಲ್ಲ. ಗದ್ದಲ ಸೃಷ್ಟಿಸುವುದು ಮತ್ತು ಕಲಾಪ ಬಹಿಷ್ಕರಿಸುವುದನ್ನು ಕಾಂಗ್ರೆಸ್‌ನ ಸಂಸ್ಕೃತಿಯನ್ನಾಗಿ ಮಾಡಿಕೊಂಡಿದ್ದೀರಿ ಎಂದು ಅಮಿತ್ ಶಾ ಹೇಳಿದರು.

Amit Shah
ತೆಲಂಗಾಣ ರಾಜಕೀಯದಲ್ಲಿ ಭಾರೀ ಸಂಚಲನ: ಚಿರಂಜೀವಿ ನಿವಾಸಕ್ಕೆ ಅಮಿತ್ ಶಾ ಭೇಟಿ; ಹಲವು ವಿಷಯಗಳ ಬಗ್ಗೆ ಚರ್ಚೆ!

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ನಡೆಸುವ ಪ್ರತಿಭಟನೆಗಳಿಗೆ ರಾಜಕೀಯದ ಎಲ್ಲ ವೇದಿಕೆಗಳಲ್ಲೂ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ 80 ವರ್ಷಗಳ ಪ್ರಜಾಪ್ರಭುತ್ವ ನಿಮ್ಮ ತಂತ್ರಗಳಿಗೆ ಬಲಿಯಾಗುತ್ತದೆ ಎಂದು ಭಾವಿಸಿದ್ದೀರಾ? ನಾವು ಬೀದಿಗಳಲ್ಲಿ ಹೋರಾಟ ನಡೆಸಿದವರು. ನಾನು ಹೇಳುವುದನ್ನು ಗಮನದಲ್ಲಿಟ್ಟುಕೊಳ್ಳಿ. ಸಂಸತ್ತಿನಲ್ಲಿ, ವಿಧಾನಸಭೆಯಲ್ಲಿ, ಹಳ್ಳಿಗಳಲ್ಲಿ ಸೇರಿದಂತೆ ಎಲ್ಲೆಡೆ ಬಿಜೆಪಿ ನಿಮಗೆ ತಕ್ಕ ಉತ್ತರ ನೀಡಲಿದೆ ಎಂದು ಅವರು ಹೇಳಿದರು.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ತಮ್ಮ ಪ್ರಸ್ತಾಪವನ್ನೂ ಗೃಹ ಸಚಿವರು ಪುನರುಚ್ಚರಿಸಿದರು. ಅಕ್ರಮ ವಲಸಿಗರನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ನೀವು ಜವಾಬ್ದಾರಿಯುತ ಚರ್ಚೆ ಬಯಸುವುದಾದರೆ ಸಂಸತ್ತಿನ ಒಳಗೆ ಚರ್ಚಿಸೋಣ. ಮತದಾರರ ಪಟ್ಟಿಗಳಿಂದ ಅಕ್ರಮ ವಲಸಿಗರನ್ನು ಗುರುತಿಸಿ ತೆಗೆದುಹಾಕುವುದು ಬಿಜೆಪಿಯ ಸಂಕಲ್ಪ. ಆದರೆ, ಇಂಡಿಯಾ ಮೈತ್ರಿಕೂಟ ಅಕ್ರಮ ವಲಸಿಗರನ್ನು ರಕ್ಷಿಸಲು ಬಯಸುತ್ತಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳ ಬಗ್ಗೆಯೂ ಪ್ರಶ್ನಿಸಿದ ಅಮಿತ್ ಶಾ, ಈ ಕುರಿತು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ನೀವು ಲೋಕಸಭೆಯ ಪ್ರತಿಪಕ್ಷ ನಾಯಕರು. ನಿಮ್ಮ ವಿದೇಶ ಪ್ರವಾಸಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X