

ನವದೆಹಲಿ: ಸಾಮಾಜಿಕ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿಯನ್ನು (Voter ID) ಬಳಸಲಾಗುವುದು ಎಂಬ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅವರ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಇದು ಕೇವಲ ಮತ ಕಳ್ಳತನವಲ್ಲ, ಹಕ್ಕುಗಳ ಕಳ್ಳತನ" ಎಂದಿದ್ದಾರೆ.
ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಇನ್ನು ಮುಂದೆ ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿಯನ್ನು ಮಾನದಂಡವಾಗಿ ಬಳಸಲಾಗುವುದು ಎಂಬ ಮೋದಿ ಸರ್ಕಾರದ ಸಚಿವರ ಘೋಷಣೆಯನ್ನು ಇದೊಂದು ಷಡ್ಯಂತ್ರ ಎಂದು ರಾಹುಲ್ ಗಾಂಧಿ ಕರೆದಿದ್ದಾರೆ.
"ಈ ಷಡ್ಯಂತ್ರ ಬಹಳ ಆಳವಾಗಿದೆ - ಇದನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ. 'ಎಸ್ಐಆರ್' (SIR) ನೆಪದಲ್ಲಿ ಲಕ್ಷಾಂತರ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಇದನ್ನು ತಡೆಯದಿದ್ದರೆ, ಇನ್ನೂ ಹೆಚ್ಚಿನ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ. ಯಾರ ಹೆಸರುಗಳನ್ನು ಮುಖ್ಯವಾಗಿ ಗುರಿಯಾಗಿಸಲಾಗುತ್ತಿದೆ? ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ಹೊಂದಿರುವವರ ಹೆಸರುಗಳನ್ನು! ಎಂದು ಅವರು ಸಾಮಾಜಿಕ ಜಾಲತಾಣ 'ಎಕ್ಸ್' (X) ಬರೆದುಕೊಂಡಿದದಾರೆ.
ಮತದಾರರ ಪಟ್ಟಿಗಳು ನಿಷ್ಪಕ್ಷಪಾತವಾಗಿರುವ ಚುನಾವಣಾ ಆಯೋಗದ ಕೈಯಲ್ಲಿರಬೇಕು. ಆದರೆ ಈಗ ಅವು "ಮೋದಿ ಸರ್ಕಾರದ ಉದ್ಯೋಗಿ ಜ್ಞಾನೇಶ್ ಕುಮಾರ್" ಅವರ ಕೈಯಲ್ಲಿವೆ. ಮತ ಕಳ್ಳತನದ ವಿಷಯದಲ್ಲಿ ಬಿಜೆಪಿ ಜೊತೆಗಿನ ಅವರ ಸಾಮೀಲಾತಿಯನ್ನು ನಾವು ಸಾಕ್ಷ್ಯಸಮೇತ ಕೈಗೆ ಸಿಕ್ಕಿಬೀಳುವಂತೆ ಹಿಡಿದಿದ್ದೇವೆ" ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿಗೆ ಬಹುಮತ ಸಿಗುವಂತೆಯೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಈಗ ಇದೇ ಪಟ್ಟಿಯು ನಿಮಗೆ ಸರ್ಕಾರದ ಯೋಜನೆಗಳ ಲಾಭ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ ಎಂದು ಗಾಂಧಿ ದೂರಿದ್ದಾರೆ. "ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ನಿರ್ಧರಿಸಿದವರ ಹೆಸರುಗಳನ್ನು ಆಯ್ದು, ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಹೆಸರು ತೆಗೆದುಹಾಕಿದರೆ, ಮತವು ಹೋಯಿತು, ಹಕ್ಕುಗಳೂ ಹೋದವು" ಎಂದು ಅವರು ಹೇಳಿದ್ದಾರೆ.
"ಹೀಗೆ, ನೀವು ಅಪಹರಿಸಲ್ಪಟ್ಟ ಪ್ರಜಾಪ್ರಭುತ್ವವೊಂದರ ಅದೃಶ್ಯ ಪ್ರಜೆಗಳಾಗಿಬಿಡುತ್ತೀರಿ. ಇಲ್ಲಿ ಜನರು ಸರ್ಕಾರವನ್ನು ಆಯ್ಕೆ ಮಾಡುವುದಿಲ್ಲ, ಬದಲಾಗಿ ಸರ್ಕಾರವೇ ತನ್ನ ಜನರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇಂದು ಪಂಚಾಯತ್ ರಾಜ್ ಯೋಜನೆಗಳು; ನಾಳೆ ಪಡಿತರ, ಪಿಂಚಣಿ, ಎಂ.ಜಿ.ಎನ್.ಆರ್.ಇ.ಜಿ.ಎ (MGNREGA), ವಸತಿ, ವಿದ್ಯಾರ್ಥಿವೇತನಗಳು ಅಥವಾ ಮೀಸಲಾತಿಗಳ ಸರದಿ ಬರಬಹುದು?" ಎಂದು ಗಾಂಧಿ ಹೇಳಿದ್ದಾರೆ.
ಇದು ಚುನಾವಣೆಗಳನ್ನು ಗೆಲ್ಲುವ ರಾಜಕೀಯವಲ್ಲ, ಬದಲಾಗಿ ಚುನಾವಣೆಗಳನ್ನು ಕದಿಯುವ ವ್ಯವಸ್ಥೆ ಮತ್ತು ಅಧಿಕಾರದಲ್ಲಿ ಅಂಟಿಕೊಂಡಿರಲು ರೂಪಿಸಿದ ಶಾಶ್ವತ ಏರ್ಪಾಡು ಎಂದು ಅವರು ಆರೋಪಿಸಿದ್ದಾರೆ.
ಮತದಾನ ಮಾಡುವುದು ನಿಮ್ಮ ಹಕ್ಕು, ಅದೊಂದು ಷರತ್ತಲ್ಲ. ಬಡವರೊಬ್ಬರ ಪಿಂಚಣಿಯನ್ನು ಅವರ ಮತದಾರರ ಗುರುತಿನ ಚೀಟಿಗೆ (ವೋಟರ್ ಕಾರ್ಡ್) ಕಟ್ಟಿಹಾಕಲು ಸಾಧ್ಯವಿಲ್ಲ. ಇದು ಕೇವಲ ಮತ ಕಳ್ಳತನವಲ್ಲ, ಇದು ಹಕ್ಕುಗಳ ಕಳ್ಳತನ. ನಾವು ಇದನ್ನು ನಡೆಯಲು ಬಿಡುವುದಿಲ್ಲ," ಎಂದು ಗಾಂಧಿ ಹೇಳಿದ್ದಾರೆ.
ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ (ಅಲಿಯಾಸ್ ಲಾಲನ್ ಸಿಂಗ್) ಅವರು ನೀಡಿರುವ ಹೇಳಿಕೆಯ ವಿಡಿಯೋ ತುಣುಕೊಂದನ್ನೂ ಅವರು ಹಂಚಿಕೊಂಡಿದ್ದಾರೆ. ಸಾಮಾಜಿಕ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿಯನ್ನು (ವೋಟರ್ ಐಡಿ) ಬಳಸಲಾಗುವುದು ಎಂಬ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಗುರುವಾರ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. "ಇದು ಕೇವಲ 'ಮತ ಕಳ್ಳತನ'ದ ಟ್ರೈಲರ್ ಅಷ್ಟೇ, ಸಂಪೂರ್ಣ ಚಿತ್ರಣವೆಂದರೆ ಇದು 'ಹಕ್ಕುಗಳ ಕಳ್ಳತನ'ವಾಗಿದೆ" ಎಂದು ಕಾಂಗ್ರೆಸ್ ಟೀಕಿಸಿದೆ.
ಪಂಚಾಯತ್ ರಾಜ್ ಸಚಿವಾಲಯದ ಯೋಜನೆಗಳ ಅಡಿಯಲ್ಲಿ ಆರ್ಥಿಕ ಸವಲತ್ತುಗಳು ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯಲು, ಇನ್ನು ಮುಂದೆ ಕಡ್ಡಾಯ ಬಯೋಮೆಟ್ರಿಕ್ ದೃಢೀಕರಣದೊಂದಿಗೆ 'ಮತದಾರರ ಫೋಟೋ ಗುರುತಿನ ಚೀಟಿ' (EPIC) ಸಂಖ್ಯೆಯೂ ಅಗತ್ಯವಿರುತ್ತದೆ ಎಂದು ರಾಜೀವ್ ರಂಜನ್ ಸಿಂಗ್ (ಅಲಿಯಾಸ್ ಲಾಲನ್ ಸಿಂಗ್) ಹೇಳಿದ್ದರು.