ಕಾಂಗ್ರೆಸ್‌ ಶಕ್ತಿ ದೇಶದ ಶಕ್ತಿ, SIR ಅಭಿಯಾನ ದೇಶದ ಒಳಿತಿಗೆ: ಡಿ ಕೆ ಶಿವಕುಮಾರ್; Video

ದೆಹಲಿಯಲ್ಲಿ ನಿನ್ನೆ ಸಾಯಂಕಾಲ ರಾಹುಲ್ ಗಾಂಧಿ ನಿವಾಸದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಪಕ್ಷದ ಒಗ್ಗಟ್ಟು ಹಾಗೂ ಕಾರ್ಯಕರ್ತರ ಬದ್ಧತೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂಬುದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಶಯವಾಗಿದೆ ಎಂದು ತಿಳಿಸಿದರು.
D K Shivakumar in Delhi
ದೆಹಲಿಯಲ್ಲಿ ರಾಹುಲ್ ಗಾಂಧಿ ನಿವಾಸದಲ್ಲಿ ಡಿ ಕೆ ಶಿವಕುಮಾರ್
Updated on: 

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಅಭಿಯಾನವನ್ನು ರಾಷ್ಟ್ರೀಯ ಅಭಿಯಾನ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ಜನರ ಧ್ವನಿ ಹಾಗೂ ಅವರ ಮತದಾನದ ಹಕ್ಕನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಿನ್ನೆ ಸಾಯಂಕಾಲ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಪಕ್ಷದ ಒಗ್ಗಟ್ಟು ಹಾಗೂ ಕಾರ್ಯಕರ್ತರ ಬದ್ಧತೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂಬುದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಶಯವಾಗಿದೆ ಎಂದು ತಿಳಿಸಿದರು.

"ಇದು ಅವರ ಅಭಿಯಾನವಲ್ಲ, ರಾಹುಲ್ ಗಾಂಧಿ ಅವರ ಅಭಿಯಾನವೂ ಅಲ್ಲ. ಇದು ದೇಶದ ಅಭಿಯಾನ. ಇದು ಜನರ ಧ್ವನಿ ಮತ್ತು ಜನರ ಮತದ ಧ್ವನಿ" ಎಂದು ಮುಖ್ಯಮಂತ್ರಿ ಹೇಳಿದರು.

ದೇಶಕ್ಕೆ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆಯನ್ನು ಉಲ್ಲೇಖಿಸಿದ ಡಿ ಕೆ ಶಿವಕುಮಾರ್, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನೀಡಿದೆ ಎಂದರು. ರಾಹುಲ್ ಗಾಂಧಿ ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ಸಮಾಜದ ಪ್ರತಿಯೊಂದು ವರ್ಗಕ್ಕೂ ಸಮಾನವಾಗಿ ಎಲ್ಲವನ್ನೂ ಹಂಚಿಕೆ ಮಾಡಿದೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆಂಬುದು ರಾಹುಲ್ ಗಾಂಧಿಯವರ ಆಶಯ. ಇದೇ ಅವರ ಅತಿದೊಡ್ಡ ಶಕ್ತಿ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ದೀಪಾವಳಿ ಮಿಲನ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಸಂದೇಶವು ಒಗ್ಗಟ್ಟು, ಶಾಂತಿ ಮತ್ತು ಸಹಬಾಳ್ವೆಯನ್ನು ಸಾರುವಂತಿತ್ತು. ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿರುವ ಹಾಗೂ ಸಂಘಟನೆಯೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರು ಮತ್ತು ಪದಾಧಿಕಾರಿಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು ಎಂದರು.

ಪಕ್ಷಕ್ಕಾಗಿ ದುಡಿದಿರುವ, ಪಕ್ಷದೊಂದಿಗೆ ಉಳಿದುಕೊಂಡಿರುವ ಮತ್ತು ಪಕ್ಷಕ್ಕೆ ನಿಷ್ಠರಾಗಿರುವ ಎಲ್ಲ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಮತ್ತು ಉತ್ತಮವಾಗಿ ಬೆಳೆಸಬೇಕು ಎಂಬುದು ರಾಹುಲ್ ಗಾಂಧಿಯವರ ಆಶಯ. ಇದು ದೀಪಾವಳಿ ಸಂಭ್ರಮಾಚರಣೆಯಾಗಿತ್ತು. ಅದಕ್ಕಾಗಿ ಅತ್ಯುತ್ತಮ ವ್ಯವಸ್ಥೆ ಮಾಡಲಾಗಿತ್ತು. ನಾವೆಲ್ಲರೂ ಸಂಭ್ರಮಿಸಿದೆವು. ನಮ್ಮ ನಡುವೆ ಪ್ರೀತಿ, ಒಗ್ಗಟ್ಟು ಮತ್ತು ಶಾಂತಿಯಿದೆ ಎಂದು ಹೇಳಿದರು.

ಫಲಾನುಭವಿ ಯೋಜನೆಗಳಿಗೆ ಗುರುತಿನ ಚೀಟಿಗಳನ್ನು ಜೋಡಿಸುವ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ಈ ವಿಷಯದಲ್ಲಿ ಚರ್ಚಿಸಬೇಕಾದ ಹಲವು ವಿಚಾರಗಳಿವೆ. ನಾವು ಚರ್ಚಿಸುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X