ರಾಜಕೀಯ 'ಇಷ್ಟವಿರಲಿಲ್ಲ', ರಾಹುಲ್, ಪ್ರಿಯಾಂಕಾ ಸಹ ವಿರೋಧಿಸಿದ್ದರು, ಆದರೆ ಭಗವದ್ಗೀತೆ, ಶ್ರೀಕೃಷ್ಣನ ಸಂದೇಶ "ಮುಂದಿನ ದಾರಿ ತೋರಿಸಿತು": ಸೋನಿಯಾ

ರಾಜೀವ್ ಗಾಂಧಿ ಮತ್ತು ತಮ್ಮ ಅತ್ತೆ ಇಂದಿರಾ ಗಾಂಧಿ ಅವರ ಭಾವಚಿತ್ರಗಳು ತಮ್ಮ ಕಣ್ಣ ಮುಂದೆ ಹಾದುಹೋದಾಗಲೆಲ್ಲಾ, ತೀವ್ರ ನೋವು ಮತ್ತು ಅಪರಾಧ ಪ್ರಜ್ಞೆ (guilt) ತಮ್ಮನ್ನು ಆವರಿಸಿಕೊಳ್ಳುತ್ತಿತ್ತು ಎಂದು ವಿವರಿಸಿದ್ದಾರೆ.
Sonia Gandhi 'always disliked' politics but then came Bhagavad Gita
ಪ್ರಿಯಾಂಕಾ, ರಾಹುಲ್, ಸೋನಿಯಾ ಗಾಂಧಿ
Updated on: 

ಸೋನಿಯಾ ಗಾಂಧಿ ಅವರಿಗೆ ರಾಜಕೀಯವೆಂದರೆ "ಯಾವಾಗಲೂ ಇಷ್ಟವಿರಲಿಲ್ಲ". ತಮ್ಮ ಪತಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ, ತಾವೂ ರಾಜಕೀಯ ಜಗತ್ತಿಗೆ ಪ್ರವೇಶಿಸಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿ ಆಂತರಿಕ ಸಂಘರ್ಷವನ್ನು ಎದುರಿಸುತ್ತಿದ್ದರು. ಆದರೆ, ಭಗವದ್ಗೀತೆಯು ಅವರ ಸಂದೇಹಗಳನ್ನು ನಿವಾರಿಸಲು ಮತ್ತು ಮುಂದಿನ ದಾರಿ ತೋರಿಸಲು ಸಹಾಯ ಮಾಡಿತು.

ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೊದಲು ತಾವು ಅನುಭವಿಸಿದ ಆಂತರಿಕ ಸಂಘರ್ಷ ಮತ್ತು ತಳಮಳದ ಬಗ್ಗೆ ತಮ್ಮ ಹೊಸ ಪುಸ್ತಕದಲ್ಲಿ ಬರೆದಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, 1990ರ ದಶಕದ ಅಂತ್ಯದಲ್ಲಿ ಪಕ್ಷವು ಕಠಿಣ ಸನ್ನಿವೇಶವನ್ನು ಎದುರಿಸುತ್ತಿದ್ದಾಗ, ತಾವು ರಾಜೀವ್ ಗಾಂಧಿ ಮತ್ತು ತಮ್ಮ ಅತ್ತೆ ಇಂದಿರಾ ಗಾಂಧಿ ಅವರ ಭಾವಚಿತ್ರಗಳು ತಮ್ಮ ಕಣ್ಣ ಮುಂದೆ ಹಾದುಹೋದಾಗಲೆಲ್ಲಾ, ತೀವ್ರ ನೋವು ಮತ್ತು ಅಪರಾಧ ಪ್ರಜ್ಞೆ (guilt) ತಮ್ಮನ್ನು ಆವರಿಸಿಕೊಳ್ಳುತ್ತಿತ್ತು ಎಂದು ವಿವರಿಸಿದ್ದಾರೆ.

ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸಹ "ತಮ್ಮನ್ನು ಕಳೆದುಕೊಳ್ಳಲು ಇಷ್ಟಪಡದೆ", ತಾಯಿ ರಾಜಕೀಯಕ್ಕೆ ಪ್ರವೇಶಿಸಬಹುದು ಎಂದು ಆತಂಕಗೊಂಡಿದ್ದರು ಮತ್ತು ತೀವ್ರವಾಗಿ ವಿರೋಧಿಸಿದ್ದರು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.

Sonia Gandhi 'always disliked' politics but then came Bhagavad Gita
'ಬಾಯಿ ಸುಟ್ಟುಕೊಂಡಿದ್ದೆ': ರಾಜೀವ್ ಗಾಂಧಿ ಜೊತೆ ತಂದೂರಿ ಚಿಕನ್ ಸವಿದಿದ್ದನ್ನು ನೆನಪಿಸಿಕೊಂಡ ಸೋನಿಯಾ!

"ನಾನು ನನ್ನೊಂದಿಗೆಯೇ ಒಂದು ಆಂತರಿಕ ಹೋರಾಟದಲ್ಲಿ ಸಿಲುಕಿದ್ದೆ. ರಾಜಕೀಯ ಜಗತ್ತಿನಲ್ಲಿರುವ ಮಹತ್ವಾಕಾಂಕ್ಷೆ, ದುರಾಸೆ, ಕಪಟತನ ಮತ್ತು ದ್ರೋಹದಂತಹ ಸಂಗತಿಗಳನ್ನು ಕಂಡು ನನ್ನ ಮನಸ್ಸು ಹಿಂಜರಿಯುತ್ತಿತ್ತು; ಅಧಿಕಾರದ ಆಟದಲ್ಲಿ ಇವೆಲ್ಲವೂ ಅನಿವಾರ್ಯವಾಗಿ ಜೊತೆಯಾಗಿರುತ್ತವೆ" ಎಂದು ಅವರು ಹೇಳಿದ್ದಾರೆ.

ಕರ್ತವ್ಯದ ಕರೆ ಮತ್ತು ತಮ್ಮಲ್ಲಿದ್ದ ಭಯಗಳ ನಡುವೆ ತೊಳಲಾಡುತ್ತಿದ್ದಾಗ, ನಾನು ಭಗವದ್ಗೀತೆಯ ಮೊರೆ ಹೋದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಗೀತೆಯ ಕೊನೆಯ ಅಧ್ಯಾಯದಲ್ಲಿ, "ಫಲಾಪೇಕ್ಷೆಯಿಲ್ಲದೆ ನಿನ್ನ ಧರ್ಮವನ್ನು(ಕರ್ತವ್ಯವನ್ನು) ನಿರ್ವಹಿಸು" ಎಂಬ ಶ್ರೀಕೃಷ್ಣನ ಸಂದೇಶವನ್ನು ಓದಿದಾಗ, "ನನ್ನ ಮನಸ್ಸು ಜಾಗೃತವಾಯಿತು" ಎಂದು ಅವರು ವಿವರಿಸಿದ್ದಾರೆ.

"ನನ್ನಲ್ಲಿದ್ದ ಸಂದೇಹಗಳು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ನಾನು ಹೊರಬಂದು, ನನ್ನ ಕರ್ತವ್ಯ ಎಲ್ಲಿಗೆ ಕರೆಯುತ್ತದೋ ಅಲ್ಲಿಗೆ ಹೋಗಲೇಬೇಕಿತ್ತು. ಹಾಗೆಯೇ ನಾನು ಮಾಡಿದೆ," ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

1991ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡ ನಂತರದ ದಿನಗಳನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ, ತಾವು ಏಕಾಂತದಿಂದ ಹೊರಬಂದು ಕ್ರಮೇಣ ಸಕ್ರಿಯರಾಗತೊಡಗಿದಾಗ, "ಕೆಲವೊಮ್ಮೆ ರಾಜೀವ್ ಅವರ ಮಾಜಿ ಸಹೋದ್ಯೋಗಿಗಳು ಭೇಟಿಯಾಗಲು ಬರುತ್ತಿದ್ದರು. ಕೆಲವರು ಕೇವಲ ಸೌಜನ್ಯಕ್ಕಾಗಿ ಅಥವಾ ಕೌಟುಂಬಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಲು ಬರುತ್ತಿದ್ದರು; ಇನ್ನು ಕೆಲವರು ಪಕ್ಷದ ವ್ಯವಹಾರಗಳಲ್ಲಿ ಸಕ್ರಿಯ ಆಸಕ್ತಿ ವಹಿಸುವಂತೆ ಕೋರುತ್ತಿದ್ದರು" ಎಂದು ಹೇಳಿದ್ದಾರೆ. "ಅವರ ಮಾತುಗಳನ್ನು ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆನೇ ಹೊರತು, ಅವರ ಕೋರಿಕೆಗೆ ಮನ್ನಣೆ ನೀಡುತ್ತಿರಲಿಲ್ಲ" ಎಂದು ಸೋನಿಯಾ ಗಾಂಧಿ ಅವರು ತಮ್ಮ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಈ ಪುಸ್ತಕದ ಆಯ್ದ ಭಾಗಗಳನ್ನು 'ದಿ ಹಿಂದೂ' ಪತ್ರಿಕೆ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X