

ನವದೆಹಲಿ: ಖಾರವಾದ ತಂದೂರಿ ಚಿಕನ್‌ನಿಂದ ಹಿಡಿದು ನಿತ್ಯದ ಅರಹರ್ ದಾಲ್(ತೊಗರಿ ಬೇಳೆ ಸಾರು) ವರೆಗೆ; ಸೋನಿಯಾ ಗಾಂಧಿ ಅವರು ತಮ್ಮ ಬಹು ನಿರೀಕ್ಷಿತ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love)ನಲ್ಲಿ, ಇಟಲಿಯಿಂದ ಭಾರತಕ್ಕೆ ಬಂದ ನಂತರ, ಭಾರತೀಯ ಆಹಾರ, ಕೌಟುಂಬಿಕ ಸಂಪ್ರದಾಯಗಳು ಮತ್ತು ಸೀರೆಗಳು ಹೇಗೆ ತಮ್ಮ ಜೀವನದ ಭಾಗವಾದವು ಎಂಬುದನ್ನು ವಿವರಿಸಿದ್ದಾರೆ.
ಆಹಾರವು ಕೆಲವೊಮ್ಮೆ 'ಒಂದೆಡೆ ಸೇರುವಿಕೆ'ಯ ಮೊದಲ ಭಾಷೆಯಾಗಬಲ್ಲದು. ಸೋನಿಯಾ ಗಾಂಧಿ ಅವರ ಪಾಲಿಗೆ, ಈ ಪ್ರಯಾಣವು ಒಂದು ತಟ್ಟೆ ತಂದೂರಿ ಚಿಕನ್‌ನೊಂದಿಗೆ ಆರಂಭವಾಯಿತು.
ತಮ್ಮ ಮುಂಬರುವ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕುರಿತ ಆಸಕ್ತಿದಾಯಕ ವಿಚಾರವೊಂದರಲ್ಲಿ, ಸೋನಿಯಾ ಗಾಂಧಿ ಅವರು ಭಾರತೀಯ ಅಡುಗೆಯೊಂದಿಗಿನ ತಮ್ಮ ಆರಂಭಿಕ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ದಿವಂಗತ ಪತಿ ರಾಜೀವ್ ಗಾಂಧಿ ಅವರೊಂದಿಗೆ ತಾವು ಸವಿದ ಮೊದಲ ಭಾರತೀಯ ಖಾದ್ಯಗಳಲ್ಲಿ ತಂದೂರಿ ಚಿಕನ್ ಕೂಡ ಒಂದಾಗಿತ್ತು ಎಂದು ಸೋನಿಯಾ ಗಾಂಧಿ ಬಹಿರಂಗಪಡಿಸಿದ್ದಾರೆ.
ಶುಕ್ರವಾರ ಪ್ರಕಾಶಕರಾದ 'ಹಾರ್ಪರ್ ಕಾಲಿನ್ಸ್ ಇಂಡಿಯಾ' (HarperCollins India) ಹಂಚಿಕೊಂಡಿರುವ ಈ ಸ್ಮರಣೀಯ ಘಟನೆಯು, ಭಾರತದ ರಾಜಕೀಯ ಇತಿಹಾಸದೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಒಬ್ಬ ಮಹಿಳೆಯ ವೈಯಕ್ತಿಕ ಬದುಕಿನ ಬಗ್ಗೆ ತಿಳಿಸುತ್ತದೆ.
ಆತ್ಮಚರಿತ್ರೆಯಲ್ಲಿ ಹೀಗೆ ಬರೆಯಲಾಗಿದೆ: "ರಾಜೀವ್ ಅವರೊಂದಿಗೆ ಸೋನಿಯಾ ಗಾಂಧಿ ಸವಿದ ಮೊದಲ ಭಾರತೀಯ ಖಾದ್ಯಗಳಲ್ಲಿ ತಂದೂರಿ ಚಿಕನ್ ಕೂಡ ಒಂದು. ಅದು ಗಾಢ ಕೆಂಪು ಬಣ್ಣದ್ದಾಗಿದ್ದು, ತಿನ್ನುವಾಗ ಸ್ವಲ್ಪ ಬಾಯಿ ಸುಟ್ಟಿತು ಮತ್ತು ಅದನ್ನು ತಿಂದಾಗ ಬಾಯಿಯಲ್ಲಿ ಖಾರದ ಕಿಚ್ಚು ಹೊತ್ತಿಕೊಂಡಂತಾಯಿತು" ಎಂದು ಹೇಳಲಾಗಿದೆ.
ಒಂದು ಅಪರಿಚಿತ ಪಾಕಶಾಲೆಯಲ್ಲಿ ಆರಂಭವಾದ ಚಿಕನ್ ತಂದೂರಿ ಸೇವನೆ, ಕ್ರಮೇಣ ಅವರ ದೈನಂದಿನ ಜೀವನದ ಭಾಗವಾಯಿತು. ಸೋನಿಯಾ ಗಾಂಧಿ ಕಾಲಕ್ರಮೇಣ ಕೌಟುಂಬಿಕ ಊಟದ ಪದ್ಧತಿಯನ್ನು ಹೇಗೆ ಅಳವಡಿಸಿಕೊಂಡರು ಎಂಬುದನ್ನು ಈ ಭಾಗವು ವಿವರಿಸುತ್ತದೆ. ಈ ಊಟದಲ್ಲಿ ಅನ್ನ, ಫುಲ್ಕಾ (ಚಪಾತಿ), ತರಕಾರಿಗಳು ಹಾಗೂ ಮಟನ್, ಮೀನು ಅಥವಾ ಚಿಕನ್ ಖಾದ್ಯಗಳು ತಟ್ಟೆಯಲ್ಲಿ(ಥಾಲಿಯಲ್ಲಿ) ಇರುತ್ತಿದ್ದವು.
ಮತ್ತು ಪ್ರತಿದಿನದ ಊಟದಲ್ಲಿ ಕಡ್ಡಾಯವಾಗಿ ಇದ್ದ ಒಂದು ಖಾದ್ಯವೆಂದರೆ... "ಅರಹರ್ ದಾಲ್(ತೊಗರಿ ಬೇಳೆ ಸಾರು)" ಎಂದು ಆ ಭಾಗವು ಉಲ್ಲೇಖಿಸುತ್ತದೆ.
2026ರ ನವೆಂಬರ್ 10ರಂದು ಬಿಡುಗಡೆಯಾಗಲಿರುವ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಕೃತಿಯ ಪ್ರಚಾರ ಸಾಮಗ್ರಿಗಳಲ್ಲಿ, ಇಂತಹ ಆಹಾರಕ್ಕೆ ಸಂಬಂಧಿಸಿದ ನೆನಪುಗಳು ಮತ್ತು ಇತರ ವೈಯಕ್ತಿಕ ವಿವರಗಳನ್ನು ಎತ್ತಿ ತೋರಿಸಲಾಗಿದೆ.