

ನವದೆಹಲಿ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಅತಿರೇಕದ ಘಟನೆಗಳಿಗೆ ಸಂಪೂರ್ಣ ಹೊಣೆಗಾರಿಕೆಯನ್ನು ಸಂಜಯ್ ಗಾಂಧಿ ಅವರೊಬ್ಬರ ಮೇಲೆಯೇ ಹೊರಿಸಲು ನಿರಾಕರಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕೆಲವು ಹಿರಿಯ ಸಹೋದ್ಯೋಗಿಗಳಿಂದ 'ಭಾರಿ ಒತ್ತಡ'ವಿತ್ತು ಎಂದು ತಿಳಿಸಿದ್ದಾರೆ.
ನವೆಂಬರ್ 10 ರಂದು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey Of Love) ಜಗತ್ತಿನಾದ್ಯಂತ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಅವರು 'ದಿ ಹಿಂದೂ' ಪತ್ರಿಕೆ ಜೊತೆ ಮಾತನಾಡಿದ್ದಾರೆ.
'ಸಂಜಯ್ ಒಬ್ಬರೇ ಇದಕ್ಕೆ ಕಾರಣರಲ್ಲ, ಆದರೂ ಸಾರ್ವಜನಿಕರ ದೃಷ್ಟಿಯಲ್ಲಿ 'ತುರ್ತು ಪರಿಸ್ಥಿತಿ' (Emergency) ಎಂದರೆ ಸಂಜಯ್ ಎಂಬಂತೆಯೇ ಬಿಂಬಿತವಾಗಿದೆ. ಇಂದಿರಾ ಗಾಂಧಿ ಅವರ ಹಿರಿಯ ಸಹೋದ್ಯೋಗಿಗಳಿಂದ ಸಾಕಷ್ಟು ಒತ್ತಡವಿತ್ತು. ರಾಜೀವ್ ಅವರಂತೆ ಭಿನ್ನ ದೃಷ್ಟಿಕೋನ ಹೊಂದಿದ್ದವರು ಆಕೆಯ ಸುತ್ತಮುತ್ತ ಬಹಳ ಕಡಿಮೆ ಮಂದಿ ಇದ್ದರು ಎಂದು ನಾನು ಭಾವಿಸುತ್ತೇನೆ. ಅಲ್ಲದೆ, ತಮ್ಮ ಪತಿ ರಾಜೀವ್ ಗಾಂಧಿ ಅವರು ತಮಗೆ ಕೇಳಿಬಂದ ದೂರುಗಳು ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ತಾಯಿಯವರಿಗೆ ತಿಳಿಸುತ್ತಿದ್ದರು' ಎಂದು ತಿಳಿಸಿದರು.
ಅಂತಿಮವಾಗಿ, ತಮ್ಮ ಅತ್ತೆಯಾದ ಇಂದಿರಾ ಅವರು 'ತಮ್ಮ ಸ್ವಂತ ವಿವೇಚನೆಯ ಮೂಲಕ' ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು ಮತ್ತು ಅದನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಂಡರು ಎಂದು ಸೋನಿಯಾ ಹೇಳಿದರು.
ತುರ್ತು ಪರಿಸ್ಥಿತಿಯನ್ನು 'ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಅಧ್ಯಾಯ' ಎಂದು ಪರಿಗಣಿಸುವುದು ಸರಿಯಲ್ಲವೇ ಎಂದು ಕೇಳಿದಾಗ, 'ಪ್ರಜಾಪ್ರಭುತ್ವದ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು' ಎಂಬುದನ್ನು 79 ವರ್ಷದ ನಾಯಕಿ ಒಪ್ಪಿಕೊಂಡರು.
'ತುರ್ತು ಪರಿಸ್ಥಿತಿಯ ನಂತರವಷ್ಟೇ, ಆಗ ನಡೆಯುತ್ತಿದ್ದ ಘಟನೆಗಳ ನಿಜವಾದ ಗಂಭೀರತೆ ನನಗೆ ಅರಿವಿಗೆ ಬಂತು. ಹೌದು, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗಿತ್ತು ಮತ್ತು 'ಹೇಬಿಯಸ್ ಕಾರ್ಪಸ್' ಅನ್ನು ಅಮಾನತುಗೊಳಿಸಲಾಗಿತ್ತು; ಆದರೆ, ಇವೆಲ್ಲವನ್ನೂ ಸಾಂವಿಧಾನಿಕವಾಗಿಯೇ ಮಾಡಲಾಗಿತ್ತು' ಎಂದು ಅವರು ಹೇಳಿದರು.
ತುರ್ತು ಪರಿಸ್ಥಿತಿಗೆ ಕಾರಣವಾದ ಹದಗೆಡುತ್ತಿದ್ದ ಸನ್ನಿವೇಶಗಳನ್ನು ಸೋನಿಯಾ ಗಾಂಧಿ ಪಟ್ಟಿ ಮಾಡಿದರು. ಅಲ್ಲದೆ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕೈಗೊಳ್ಳಲಾದ ಅತಿಯಾದ ಕ್ರಮಗಳಿಗಾಗಿ ಇಂದಿರಾ ಗಾಂಧಿ ನಂತರದ ದಿನಗಳಲ್ಲಿ 'ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದ್ದರು' ಎಂದೂ ಅವರು ತಿಳಿಸಿದರು.
'ನಾನು ಆ ಕಾಲಘಟ್ಟಕ್ಕೆ ಹಿಂತಿರುಗಿ, ಇಂಧಿರಾ ಗಾಂಧಿಯವರ ದೃಷ್ಟಿಕೋನದಿಂದ ಪರಿಸ್ಥಿತಿಯನ್ನು ನೋಡಲು ಪ್ರಯತ್ನಿಸಿದಾಗ, ಅವರು ವೇಗವಾಗಿ ಹದಗೆಡುತ್ತಿದ್ದ ಸನ್ನಿವೇಶಗಳನ್ನು ನಿಭಾಯಿಸಲು ಹೆಣಗಾಡುತ್ತಿರುವುದು ನನಗೆ ಕಾಣಿಸುತ್ತದೆ: ಹಿಂಸಾತ್ಮಕ ಪ್ರತಿಭಟನೆಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಿಗೆ ಬೆಂಕಿ ಹಚ್ಚುವಿಕೆ, ವ್ಯಾಪಕವಾದ ಸಂಘಟಿತ ಅಶಾಂತಿ ಮತ್ತು ಅಷ್ಟೇ ಏಕೆ, ಅಧಿಕಾರಿವರ್ಗ ಹಾಗೂ ಸಶಸ್ತ್ರ ಪಡೆಗಳು ಮೇಲಧಿಕಾರಿಗಳ ಆದೇಶಗಳನ್ನು ಪಾಲಿಸದಂತೆ ನೀಡಲಾದ ಕರೆ - ಇವೆಲ್ಲವನ್ನೂ ಅವರು ಎದುರಿಸಬೇಕಾಗಿತ್ತು' ಎಂದು ಅವರು ಹೇಳಿದರು.
ತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವು ಅಂತಿಮವಾಗಿ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕವೇ ನಡೆಯಿತು ಎಂಬುದನ್ನು ಅವರು ಒತ್ತಿ ಹೇಳಿದರು.
'ಹಿಂಡ್‌ಸೈಟ್ ನಮಗೆ ವಿಷಯಗಳನ್ನು ಉತ್ತಮ ದೃಷ್ಟಿಕೋನದಿಂದ ನೋಡಲು ಅನುವು ಮಾಡಿಕೊಡುತ್ತದೆ. ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಂಡು ಮಾರ್ಚ್ 1977ರ ಚುನಾವಣೆಗೆ ಕರೆ ನೀಡಿದವರು ಇಂದಿರಾ ಗಾಂಧಿ ಎಂಬುದನ್ನು ನಾವು ಮರೆಯಬಾರದು. ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಅತಿರೇಕಗಳಿಗೆ ಅವರು ನಂತರ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದರು ಮತ್ತು ಕ್ಷಮೆಯಾಚಿಸಿದರು ಎಂದು ನಿಮಗೆ ಚೆನ್ನಾಗಿ ತಿಳಿದಿದೆ' ಎಂದು ಅವರು ಹೇಳಿದರು.
ಜೂನ್ 25, 1975 ರಂದು ತುರ್ತು ಪರಿಸ್ಥಿತಿಯ ಔಪಚಾರಿಕ ಘೋಷಣೆಯು ಭಾರತೀಯ ಸಾಂವಿಧಾನಿಕ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ನೀಡಿತು. ಕಾರ್ಯಾಂಗವು ಅತ್ಯುನ್ನತ ಅಧಿಕಾರಗಳನ್ನು ಪಡೆದುಕೊಂಡಿತು ಮತ್ತು ರಾಜ್ಯ ಅಧಿಕಾರವನ್ನು ಕೇಂದ್ರ ನಿಯಂತ್ರಣಕ್ಕೆ ತರಲಾಯಿತು.
ಈ ಘೋಷಣೆಯ ನಂತರ, ಸಾಂವಿಧಾನಿಕ ರಕ್ಷಣೆಗಳನ್ನು ವ್ಯವಸ್ಥಿತವಾಗಿ ಅಮಾನತುಗೊಳಿಸಲಾಯಿತು. ತುರ್ತುಸ್ಥಿತಿಯ ಅವಧಿಯಲ್ಲಿ, ಸಾಂಸ್ಥಿಕ ಕಾರ್ಯವಿಧಾನಗಳು ಮತ್ತು ಆಡಳಿತಾತ್ಮಕ ಆದೇಶಗಳ ಮೂಲಕ ಪತ್ರಿಕಾ ಮಾಧ್ಯಮ ಹಾಗೂ ಸಾರ್ವಜನಿಕ ಮಾಹಿತಿಯ ಮೇಲೆ ಕಠಿಣ ನಿಯಂತ್ರಣ ಹೇರಲಾಯಿತು.
ತುರ್ತುಸ್ಥಿತಿಯ ಸಂದರ್ಭದಲ್ಲಿ ಸಂಸತ್ತು ಸರಣಿ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಿತು; ಇವು ನ್ಯಾಯಾಂಗ ಪರಿಶೀಲನೆ ಮತ್ತು ಸಾಂಸ್ಥಿಕ ನಿಯಂತ್ರಣ ವ್ಯವಸ್ಥೆಗಳನ್ನು ದುರ್ಬಲಗೊಳಿಸಿದವು. ತುರ್ತುಸ್ಥಿತಿಯ ಅತ್ಯಂತ ವಿವಾದಾತ್ಮಕ ಅಂಶಗಳಲ್ಲಿ ಒಂದೆಂದರೆ, ಬಲವಂತದ ಸಂತಾನಶಕ್ತಿ ಹರಣ ಅಭಿಯಾನ. ಈ ತುರ್ತುಸ್ಥಿತಿಯು 1977ರ ಮಾರ್ಚ್ 21ರವರೆಗೆ ಮುಂದುವರಿಯಿತು.