

ಡೆಹ್ರಾಡೂನ್: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಉತ್ತರಾಖಂಡದ ಸಚಿವೆ ರೇಖಾ ಆರ್ಯ ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಅವರ ಪತಿ ಗಿರಿಧಾರಿ ಲಾಲ್ ಸಾಹು(ಅಲಿಯಾಸ್ ಪಪ್ಪು ಗಿರಿಧಾರಿ) ಅವರನ್ನು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಎಎನ್ಐ(ANI) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಡೆಹ್ರಾಡೂನ್ ಎಸ್ಎಸ್ಪಿ ಪ್ರಮೇಂದ್ರ ದೋಭಾಲ್, ಗಿರಿಧಾರಿ ಲಾಲ್ ಅವರನ್ನು ನಕಲಿ ದಾಖಲೆ ಸೃಷ್ಟಿ(forgery) ಹಾಗೂ ಎಸ್ಸಿ/ಎಸ್ಟಿ (SC/ST) ಕಾಯ್ದೆಯಡಿ ಗಂಭೀರ ಅಪರಾಧಗಳ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ಬಳಿ ಸತ್ಯೇಂದ್ರ ಠಾಕೂರ್ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ ಎಸ್ಎಸ್ಪಿ, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
"ಸಚಿವೆ ರೇಖಾ ಆರ್ಯ ಅವರು ನೀಡಿದ ದೂರಿನ ಮೇರೆಗೆ, ಅಕ್ಟೋಬರ್ 15 ರಂದು ಗಿರಿಧಾರಿ ಲಾಲ್ ಸಾಹು ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ನಕಲಿ ದಾಖಲೆ ಸೃಷ್ಟಿ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಗಂಭೀರ ಅಪರಾಧಗಳು ಸೇರಿವೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಒಂಬತ್ತು ಸದಸ್ಯರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ, ಗಿರಿಧಾರಿ ಲಾಲ್ ಸಾಹು ಮತ್ತು ಸತ್ಯೇಂದ್ರ ಠಾಕೂರ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ.
ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಬೇರೆ ಯಾರಾದರೂ ವ್ಯಕ್ತಿಗಳ ಹೆಸರುಗಳು ಕೇಳಿಬಂದರೆ, ಅವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು... ಗಿರಿಧಾರಿ ಲಾಲ್ ಸಾಹು ಅವರನ್ನು ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬಳಿ ಬಂಧಿಸಿ ಇಲ್ಲಿಗೆ ಕರೆತರಲಾಗಿದೆ, ಹಾಗೂ ಸತ್ಯೇಂದ್ರ ಠಾಕೂರ್ ಅವರನ್ನು ಉಧಮ್ ಸಿಂಗ್ ನಗರ ಜಿಲ್ಲೆಯ ಕಿಚ್ಚಾ ಬಳಿ ಬಂಧಿಸಲಾಗಿದೆ" ಎಂದು ದೋಭಾಲ್ ಹೇಳಿದರು.
ಸಚಿವೆ ಪತಿ ಗಿರಿಧಾರಿ ಲಾಲ್ ಸಾಹು, ಕಳೆದ ಕೆಲವು ಸಮಯದಿಂದ ತಲೆಮರೆಸಿಕೊಂಡಿದ್ದರು. ಅವರನ್ನು ನಿನ್ನೆ ಸಂಜೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿರುವ ಖಾಸಗಿ ವಿಶ್ವವಿದ್ಯಾಲಯವೊಂದರ ಆವರಣದ ಹೊರಗೆ ಬಂಧಿಸಲಾಯಿತು.
ಪತಿ ವಿರುದ್ಧ ರೇಖಾ ಗಂಭೀರ ಆರೋಪ
ಪೊಲೀಸರಿಗೆ ರೇಖಾ ಅವರು ನೀಡಿದ ದೂರಿನಲ್ಲಿ, ಕಳೆದ ಕೆಲವು ತಿಂಗಳುಗಳಿಂದ ತಮ್ಮ ಪತಿಯ ವರ್ತನೆಯಲ್ಲಿ ಬದಲಾವಣೆಯಾಗಿದೆ. ತಮ್ಮ ಪತಿಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧಗಳಿರುವ ವಿಷಯ ತಿಳಿದುಬಂದಿದೆ. ಈ ಸಂಬಂಧಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಪತಿ ಆರಂಭದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಮೌಖಿಕವಾಗಿ ಹಾಗೂ ಲಿಖಿತವಾಗಿ ಕ್ಷಮೆಯಾಚಿಸಿದ್ದರು. ಆದರೆ, ಕ್ಷಮೆ ಕೋರಿದ ನಂತರವೂ ಅದೇ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧಗಳನ್ನು ವಿರೋಧಿಸಿದಾಗ, ಗಿರಿಧಾರಿ ಲಾಲ್ ಸಾಹು ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಲು, ನಿಂದಿಸಲು ಮತ್ತು ಕೊಲೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಅಲ್ಲದೆ, ತಮ್ಮ ಅಧಿಕೃತ ನಿವಾಸದಲ್ಲಿ ಸಿಬ್ಬಂದಿಯ ಸಮ್ಮುಖದಲ್ಲೇ, ಜಾತಿ ಆಧಾರಿತ ಅವಹೇಳನಕಾರಿ ಮಾತುಗಳನ್ನು ಬಳಸಿ ನಿಂದಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸಂಬಂಧಪಟ್ಟ ಕಂಪನಿಗಳಲ್ಲಿ ನಿರ್ದೇಶಕ ಹುದ್ದೆಯಿಂದ ನನ್ನನ್ನು ತೆಗೆದುಹಾಕಲಾಗಿದೆ ಎಂದು ತೋರಿಸಲು, ಗಿರಿಧಾರಿ ಲಾಲ್ ಸಾಹು ನಕಲಿ ಸಹಿಗಳನ್ನು ಮತ್ತು ನಕಲಿ ದಾಖಲೆಗಳನ್ನು ಬಳಸಿದ್ದಾನೆ. ಆ ಜಾಗಕ್ಕೆ ಆರೋಪಿ ಸತೇಂದ್ರ ಠಾಕೂರ್ನನ್ನು ನಿರ್ದೇಶಕರನ್ನಾಗಿ ನೇಮಿಸಲು ಮುಂದಾಗಿದ್ದ ಎಂಬ ವಿಷಯ ತಿಳಿದುಬಂದಿದೆ. ಆದರೆ ಅಂತಹ ಯಾವುದೇ ದಾಖಲೆಗಳಿಗೆ ನಾನು ಸಹಿ ಹಾಕಿಲ್ಲ. ಯಾವುದೇ ರಾಜೀನಾಮೆಯನ್ನೂ ಸಲ್ಲಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನೂ ನಕಲಿ ದಾಖಲೆ ಸೃಷ್ಟಿಸಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ.