ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 483ಕ್ಕೆ ತಲುಪಿದ AQI, ವಿಷಾನಿಲದ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

ಇಡೀ ನಗರವು ದಟ್ಟವಾದ ವಿಷಕಾರಿ ಹೊಗೆಯಿಂದ (Smog) ಆವೃತವಾಗಿದ್ದು, ದೃಷ್ಟಿ ಗೋಚರತೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
Delhi air Pollution.
ದೆಹಲಿ ವಾಯು ಮಾಲಿನ್ಯ.
Updated on: 

ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಮತ್ತಷ್ಟು ಅಪಾಯಕಾರಿ ಹಂತಕ್ಕೆ ಕುಸಿದಿದೆ.

ಭಾನುವಾರ ಬೆಳಿಗ್ಗೆ 8:10 ರ ಸುಮಾರಿಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 483ಕ್ಕೆ ಕುಸಿಯುವ ಮೂಲಕ 'ತೀವ್ರ' (Severe) ವಿಭಾಗವನ್ನು ತಲುಪಿದೆ.

ಇಡೀ ನಗರವು ದಟ್ಟವಾದ ವಿಷಕಾರಿ ಹೊಗೆಯಿಂದ (Smog) ಆವೃತವಾಗಿದ್ದು, ದೃಷ್ಟಿ ಗೋಚರತೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ನಗರದ ಹಲವು ಪ್ರದೇಶಗಳಲ್ಲಿ ಎಕ್ಯೂಐ 400ರ ಗಡಿ ದಾಟಿದ್ದು, ಗಾಳಿಯ ಗುಣಮಟ್ಟ ತೀವ್ರ ಕಳಪೆ ಹಂತ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ದೀಪಾವಳಿಗೂ ಮುನ್ನವೇ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಶುಕ್ರವಾರ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯುಮಾಲಿನ್ಯ ನಿಯಂತ್ರಣದ ಹಂತ IIIರ ಕ್ರಮಗಳನ್ನು ಜಾರಿಗೆ ತರುವಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಆದೇಶಿಸಿತ್ತು. ಇದರ ಬೆನ್ನಲ್ಲೇ ದೆಹಲಿಯ ವಾಯು ಗುಣಮಟ್ಟ ಮತ್ತಷ್ಟು ಕುಸಿದಿದೆ.

ಎಎನ್‌ಐ ವರದಿ ಪ್ರಕಾರ, ಭಾನುವಾರ ಬೆಳಗ್ಗೆ ದೆಹಲಿಯ ಕನಿಷ್ಠ ಎಂಟು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಎಕ್ಯೂಐ ತೀವ್ರ ಕಳಪೆ ಮಟ್ಟದಲ್ಲಿತ್ತು. ಪಂಜಾಬಿ ಬಾಗ್‌ನಲ್ಲಿ 449, ಆರ್.ಕೆ. ಪುರಂನಲ್ಲಿ 448, ಬವಾನಾದಲ್ಲಿ 446 ಹಾಗೂ ಐಐಟಿ ದೆಹಲಿ ಮತ್ತು ರೋಹಿಣಿಯಲ್ಲಿ ತಲಾ 445 ದಾಖಲಾಗಿದೆ. ಪಟ್ಪರ್‌ಗಂಜ್‌ನಲ್ಲಿ 421, ಚಾಂದಿನಿ ಚೌಕ್‌ನಲ್ಲಿ 420 ಹಾಗೂ ಅಲಿಪುರದಲ್ಲಿ 413 ಎಕ್ಯೂಐ ದಾಖಲಾಗಿದೆ.

ನಗರದ ಇತರ ಕೆಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ವರ್ಗದಲ್ಲಿತ್ತು. ನರೇಲಾದಲ್ಲಿ 395, ಇಂಡಿಯಾ ಗೇಟ್ ಬಳಿ 398, ಆನಂದ್ ವಿಹಾರ್‌ನಲ್ಲಿ 328 ಹಾಗೂ ಅಕ್ಷರಧಾಮ ದೇವಸ್ಥಾನದ ಸುತ್ತಮುತ್ತ 336 ಎಕ್ಯೂಐ ದಾಖಲಾಗಿದೆ.

ದೆಹಲಿಯ ಹಲವು ಪ್ರದೇಶಗಳಲ್ಲಿ ಬೆಳಗ್ಗೆಯೇ ದಟ್ಟ ಹೊಗೆ ಮತ್ತು ಮಂಜಿನಂತಹ ವಾತಾವರಣ ಆವರಿಸಿತ್ತು. ಇದರಿಂದ ಗೋಚರತೆ ಕೂಡ ಕಡಿಮೆಯಾಗಿತ್ತು. ಶನಿವಾರ ಬೆಳಗ್ಗೆ 8 ಗಂಟೆಗೆ 364ರಷ್ಟಿದ್ದ ಒಟ್ಟಾರೆ ಎಕ್ಯೂಐ, ಭಾನುವಾರ 483ಕ್ಕೆ ಏರಿಕೆಯಾಗಿರುವುದು ವಾಯುಮಾಲಿನ್ಯದ ತೀವ್ರತೆಯನ್ನು ತೋರಿಸಿದೆ.

Delhi air Pollution.
ದೆಹಲಿ ವಾಯುಮಾಲಿನ್ಯ ತಡೆಗೆ ಸುಪ್ರೀಂ ಕೋರ್ಟ್ ಕಠಿಣ ಕ್ರಮ: BS-6 ವಾಹನಗಳಿಗೆ ಮಾತ್ರ ಪ್ರವೇಶ; ಪೆಟ್ರೋಲ್ ಖರೀದಿಗೆ PUC ಕಡ್ಡಾಯ!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರ್ಗೀಕರಣದ ಪ್ರಕಾರ, ಎಕ್ಯೂಐ 0ರಿಂದ 50ರವರೆಗೆ ಇದ್ದರೆ ಉತ್ತಮ, 51ರಿಂದ 100ರವರೆಗೆ ತೃಪ್ತಿಕರ, 101ರಿಂದ 200ರವರೆಗೆ ಮಧ್ಯಮ, 201ರಿಂದ 300ರವರೆಗೆ ಕಳಪೆ, 301ರಿಂದ 400ರವರೆಗೆ ಅತ್ಯಂತ ಕಳಪೆ ಹಾಗೂ 401ರಿಂದ 500ರವರೆಗೆ ತೀವ್ರ ಕಳಪೆ ಎಂದು ಪರಿಗಣಿಸಲಾಗುತ್ತದೆ.

ಈಗಾಗಲೇ ಮೂರನೇ ಹಂತದ ನಿರ್ಬಂಧಗಳು ಜಾರಿಯಲ್ಲಿದ್ದು, ಅಸ್ತಿತ್ವದಲ್ಲಿರುವ ನಿಯಮಗಳ ಜೊತೆಗೆ ಹೆಚ್ಚುವರಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನೂ ಜಾರಿಗೆ ತರಲಾಗುತ್ತಿದೆ. ದೆಹಲಿ ಮತ್ತು ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಗಡಿ ಜಿಲ್ಲೆಗಳಿಗೂ ಈ ತುರ್ತು ಕ್ರಿಯಾ ಯೋಜನೆ ಅನ್ವಯಿಸುತ್ತದೆ.

ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಾಲ್ಕು ಹಂತಗಳ ವಾಯುಮಾಲಿನ್ಯ ತುರ್ತು ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ.

ಭಾರತೀಯ ಹವಾಮಾನ ಇಲಾಖೆ ಮತ್ತು ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ ನೀಡುವ ಮಾಲಿನ್ಯ ಪ್ರಮಾಣದ ಮುನ್ಸೂಚನೆ ಹಾಗೂ ಎಕ್ಯೂಐ ಆಧರಿಸಿ ಈ ಹಂತಗಳನ್ನು ಜಾರಿಗೆ ತರಲಾಗುತ್ತದೆ. ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಮೊದಲೇ ನಿರ್ಬಂಧಗಳನ್ನು ವಿಧಿಸುವುದು ಇದರ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ ಎಕ್ಯೂಐ 201ರಿಂದ 300ರ ನಡುವೆ ಇದ್ದಾಗ ರಸ್ತೆ ಧೂಳು ನಿಯಂತ್ರಣ, ಮಾಲಿನ್ಯ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಬಹಿರಂಗವಾಗಿ ಕಸ ಸುಡುವುದಕ್ಕೆ ನಿಷೇಧ ಸೇರಿದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಎರಡನೇ ಹಂತದಲ್ಲಿ ಎಕ್ಯೂಐ 301ರಿಂದ 400ರ ನಡುವೆ ಇದ್ದಾಗ ಧೂಳು ನಿಯಂತ್ರಣ ಕ್ರಮಗಳನ್ನು ಹೆಚ್ಚಿಸುವುದು, ವಾಹನ ನಿಲುಗಡೆ ಶುಲ್ಕ ಏರಿಕೆ ಮತ್ತು ಕಚೇರಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ.

ಮೂರನೇ ಹಂತದಲ್ಲಿ ಎಕ್ಯೂಐ 401ರಿಂದ 450ರ ನಡುವೆ ಇದ್ದಾಗ ಕೆಲವು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಅಗತ್ಯವಲ್ಲದ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರ ಜೊತೆಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮತ್ತು ನೇರ ತರಗತಿಗಳ ಆಯ್ಕೆಯ ವ್ಯವಸ್ಥೆ ಮಾಡಲಾಗುತ್ತದೆ.

ನಾಲ್ಕನೇ ಹಂತದಲ್ಲಿ ಎಕ್ಯೂಐ 450ಕ್ಕಿಂತ ಹೆಚ್ಚಾದಾಗ ಭಾರೀ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಸೇರಿದಂತೆ ಸಂಚಾರ ಮತ್ತು ಕೈಗಾರಿಕಾ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚುವರಿ ತುರ್ತು ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ.

ಮೂರನೇ ಹಂತದ ನಿರ್ಬಂಧಗಳ ಅಡಿಯಲ್ಲಿ ಬಿಎಸ್-3 ಪೆಟ್ರೋಲ್ ಮತ್ತು ಬಿಎಸ್-4 ಡೀಸೆಲ್ ನಾಲ್ಕು ಚಕ್ರ ವಾಹನಗಳು ದೆಹಲಿ ಹಾಗೂ ಎನ್‌ಸಿಆರ್‌ನ ನಿಗದಿತ ಜಿಲ್ಲೆಗಳಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಹಳೆಯ ಲಘು ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳು ಹಾಗೂ ದೆಹಲಿಯಲ್ಲಿ ನೋಂದಣಿಯಾಗದ ಡೀಸೆಲ್ ವಾಣಿಜ್ಯ ವಾಹನಗಳು ರಾಜಧಾನಿ ಪ್ರವೇಶಿಸುವುದಕ್ಕೂ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಧೂಳು ಉಂಟುಮಾಡುವ ಅಗತ್ಯವಲ್ಲದ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಲ್ಲಿ ದೊಡ್ಡ ಪ್ರಮಾಣದ ಅಗೆಯುವಿಕೆ, ಮಣ್ಣಿನ ಕೆಲಸ, ಕಟ್ಟಡಗಳ ನೆಲಸಮ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು ಸೇರಿವೆ.

ಮುಂದುವರಿಸಲು ಅನುಮತಿ ಪಡೆದಿರುವ ಅಗತ್ಯ ಕಾಮಗಾರಿಗಳಲ್ಲಿ ಧೂಳು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಧೂಳು ಉಂಟುಮಾಡುವ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವ ಘಟಕಗಳ ಕಾರ್ಯಾಚರಣೆಗಳ ಮೇಲೆಯೂ ನಿರ್ಬಂಧ ವಿಧಿಸಲಾಗಿದೆ.

ದೀಪಾವಳಿ ಸಂದರ್ಭದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಆತಂಕವಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X