ದೇಶಾದ್ಯಂತ ದೀಪಾವಳಿ ಸಂಭ್ರಮ: ದೀಪಾಲಂಕಾರದಿಂದ ಕಂಗೊಳಿಸಿದ ದೇವಾಲಯ, ಸ್ಮಾರಕಗಳು; ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿದ ಭಕ್ತರು

ದೀಪಾವಳಿಯು ಅಸತ್ಯ ವಿರುದ್ಧ ಸತ್ಯದ, ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಹಬ್ಬವಾಗಿದ್ದು, ಧರ್ಮದ ಸ್ಥಾಪನೆಯ ಸಂಕೇತವಾಗಿದೆ
Deepavali
ದೀಪಾಲಂಕಾರ
Updated on: 

ದೇಶಾದ್ಯಂತ ಇಂದು ಭಾನುವಾರ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಾಲಯಗಳು ಹಾಗೂ ಪ್ರಮುಖ ಸ್ಮಾರಕಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ದೇವರ ದರ್ಶನಕ್ಕಾಗಿ ಭಕ್ತರು ದೇವಾಲಯಗಳಿಗೆ ಮುಗಿಬಿದ್ದರೆ, ಕುಟುಂಬಸ್ಥರು ಒಟ್ಟಾಗಿ ಸೇರಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೆಳಕಿನ ಹಬ್ಬವು ಪ್ರಾರ್ಥನೆ, ಸಂಭ್ರಮದ ಜತೆಗೆ ಭರವಸೆ, ಸಾಮರಸ್ಯ ಮತ್ತು ಸಮೃದ್ಧಿಯ ಸಂದೇಶವನ್ನು ಸಾರುತ್ತದೆ.

ಪುರಿಯ ಶ್ರೀ ಜಗನ್ನಾಥ ದೇವಾಲಯದಿಂದ ದೆಹಲಿಯ ಆದ್ಯಾ ಕಾತ್ಯಾಯನಿ ಶಕ್ತಿಪೀಠ ದೇವಾಲಯ ಹಾಗೂ ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇವಾಲಯದವರೆಗೆ ದೇಶದ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಗರಗಳು ಹಾಗೂ ಪ್ರಮುಖ ಸ್ಮಾರಕಗಳು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ರಾಷ್ಟ್ರ ರಾಜಧಾನಿ ದೆಹಲಿಯ ಛತ್ತರ್‌ಪುರದಲ್ಲಿರುವ ಪ್ರಸಿದ್ಧ ಆದ್ಯಾ ಕಾತ್ಯಾಯನಿ ಶಕ್ತಿಪೀಠ ದೇವಾಲಯದಲ್ಲಿ ಮುಂಜಾನೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೀಪಾವಳಿಯು ಅಸತ್ಯದ ವಿರುದ್ಧ ಸತ್ಯದ, ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಹಬ್ಬವಾಗಿದ್ದು, ಧರ್ಮದ ಸ್ಥಾಪನೆಯ ಸಂಕೇತವಾಗಿದೆ ಎಂದು ದೇವಾಲಯದ ಮುಖ್ಯ ಅರ್ಚಕ ಹರಿಮೋಹನ್ ಝಾ ಹೇಳಿದರು.

Deepavali
ನರಕ ಚತುರ್ದಶಿ: ಎಣ್ಣೆ ಸ್ನಾನ; ಏನಿದರ ಮಹತ್ವ?

ದೇಶ-ವಿದೇಶಗಳಲ್ಲಿರುವ ಭಕ್ತರ ಶಾಂತಿ, ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಅವರು, ಗಣೇಶ ಹಾಗೂ ಮಹಾಲಕ್ಷ್ಮಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಹಾರೈಸಿದರು.

ದೆಹಲಿಯ ಅಕ್ಷರಧಾಮ ದೇವಾಲಯವು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದೆ. ಕೆಂಪುಕೋಟೆಯೂ ವಿದ್ಯುತ್ ದೀಪಗಳಿಂದ ಝಗಮಗಿಸಿತು. ದೆಹಲಿ-ಗುರುಗ್ರಾಮ ಗಡಿಯಲ್ಲಿಯೂ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಹಬ್ಬದ ಕಳೆ ಮತ್ತಷ್ಟು ಹೆಚ್ಚಿತ್ತು.

ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಾಲಯದಲ್ಲಿ ಮುಂಜಾನೆಯೇ ಸಾವಿರಾರು ಭಕ್ತರು ಸೇರಿ ಪವಿತ್ರ ಮಂಗಳಾರತಿಯ ದರ್ಶನ ಪಡೆದರು. ಅಯೋಧ್ಯೆಯಲ್ಲಿ ಸರಯೂ ನದಿ ಘಾಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಪವಿತ್ರ ಸ್ನಾನ ಮಾಡಿ, ಮಹಾ ಆರತಿಯ ಬಳಿಕ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Deepavali
ದೀಪಾವಳಿ: ಕತ್ತಲಿಗೂ ಬೆಳಕಿನ ಭಾಷೆ ಕಲಿಸುವ ಹಬ್ಬ

ತಮಿಳುನಾಡಿನ ಮಧುರೈನಲ್ಲಿ ಜನರು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಪಟಾಕಿ ಸಿಡಿಸಿ ಸಾಂಪ್ರದಾಯಿಕ ಉತ್ಸಾಹದಿಂದ ದೀಪಾವಳಿ ಆಚರಿಸಿದರು. ಪಶ್ಚಿಮ ಬಂಗಾಳದ ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇವಾಲಯವು ಕಾಳಿಪೂಜೆ ಹಾಗೂ ದೀಪಾವಳಿ ಸಂಭ್ರಮದ ಹಿನ್ನೆಲೆಯಲ್ಲಿ ಆಕರ್ಷಕ ಬೆಳಕಿನ ಅಲಂಕಾರದಿಂದ ಕಂಗೊಳಿಸಿತು. ಉತ್ತರ ಪ್ರದೇಶದ ಮಥುರಾದಾದ್ಯಂತವೂ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.

ದೇಶಾದ್ಯಂತದ ರಾಜಕೀಯ ನಾಯಕರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರಿಗೆ ಶುಭಾಶಯಗಳನ್ನು ಕೋರಿ, ಭರವಸೆ, ಸಾಮರಸ್ಯ ಮತ್ತು ಸಮೃದ್ಧಿಯ ಸಂದೇಶಗಳನ್ನು ಸಾರಿದರು.

ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿ, ಎಲ್ಲರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ದೀಪಾವಳಿ ಶುಭಾಶಯಗಳು! ದೇಶದಾದ್ಯಂತ ಇರುವ ನನ್ನ ಕುಟುಂಬದ ಸದಸ್ಯರಿಗೆ ಹೃತ್ಪೂರ್ವಕ ದೀಪಾವಳಿ ಶುಭಾಶಯಗಳು ಎಂದು ಬರೆದಿದ್ದಾರೆ.

ವಿಡಿಯೋ ಸಂದೇಶದಲ್ಲಿ ಮೋದಿ ಅವರು ದೀಪಾವಳಿಯನ್ನು ಕತ್ತಲೆಯ ವಿರುದ್ಧ ದೇಶದ ಸಂಕಲ್ಪದ ಸಂಕೇತ ಎಂದು ಬಣ್ಣಿಸಿದ್ದರು. ಜನರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದ್ದರು.

ಸೈನಿಕರೊಂದಿಗೆ ದೀಪಾವಳಿ ಆಚರಿಸುವ ತಮ್ಮ ಸಂಪ್ರದಾಯದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಪ್ರತಿ ವರ್ಷ ದೇಶದ ಸೈನಿಕರೊಂದಿಗೆ ಈ ಹಬ್ಬವನ್ನು ಆಚರಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ದೀಪಾವಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಶ್ರೀರಾಮ ಅಯೋಧ್ಯೆಗೆ ಮರಳಿದ ನೆನಪನ್ನು ಸಾರುವ ಹಬ್ಬವೇ ದೀಪಾವಳಿ ಎಂದು ಬಣ್ಣಿಸಿದರು. ಸೇವೆ, ಸಾಮರಸ್ಯ ಮತ್ತು ಸದ್ಭಾವನೆಯ ಹಾದಿಯಲ್ಲಿ ಮುನ್ನಡೆಯುವಂತೆ ಜನರಿಗೆ ಕರೆ ನೀಡಿದರು.

ಯಾವುದೇ ಅಂಗಳ ಕತ್ತಲಿನಲ್ಲಿ ಉಳಿಯಬಾರದು, ಯಾವುದೇ ಜೀವನ ಭರವಸೆಯಿಂದ ವಂಚಿತವಾಗಬಾರದು. ಎಲ್ಲರ ಕಲ್ಯಾಣಕ್ಕಾಗಿ ಬೆಳಕಿನ ಹಬ್ಬ ನೀಡುವ ಸಂಕಲ್ಪ ಇದಾಗಿದೆ ಎಂದು ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿದ ಅವರು, ಕೊನೆಯಲ್ಲಿ "ಜೈ ಜೈ ಶ್ರೀರಾಮ್" ಎಂದು ಬರೆದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ಪ್ರತಿಯೊಂದು ಮನೆ, ಅಂಗಳ ಹಾಗೂ ಜೀವನದಲ್ಲಿ ಪ್ರಗತಿ, ನಂಬಿಕೆ ಮತ್ತು ಸಮೃದ್ಧಿಯ ಹೊಸ ಬೆಳಕನ್ನು ತುಂಬುವಂತೆ ಜನರಿಗೆ ಕರೆ ನೀಡಿದರು.

ಕತ್ತಲೆ ಎಷ್ಟೇ ಗಾಢವಾಗಿದ್ದರೂ, ಒಂದೇ ಒಂದು ದೀಪ ಅದನ್ನು ದೂರ ಮಾಡುವ ಶಕ್ತಿ ಹೊಂದಿದೆ. ಶ್ರೀರಾಮ ಅಯೋಧ್ಯೆಗೆ ಮರಳಿದ ಸಂದರ್ಭದಲ್ಲಿ ಸ್ವಾಗತಿಸಲು ಬೆಳಗಿಸಿದ ದೀಪಗಳು ಈ ಸತ್ಯವನ್ನು ಇಂದಿಗೂ ಜೀವಂತವಾಗಿರಿಸಿವೆ ಎಂದು ಹೇಳಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಕತ್ತಲೆಯಿಂದ ಬೆಳಕಿನೆಡೆಗೆ ಹಾಗೂ ನಿರಾಶೆಯಿಂದ ಭರವಸೆಯೆಡೆಗೆ ಸಾಗಲು ದೀಪಾವಳಿ ಸ್ಫೂರ್ತಿ ನೀಡಬೇಕು. ಜತೆಗೆ ಸಾಮಾಜಿಕ ಸಾಮರಸ್ಯ ಮತ್ತು ಸದ್ಭಾವನೆ ಮತ್ತಷ್ಟು ಬಲಗೊಳ್ಳಬೇಕು ಎಂದು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ತಾರತಮ್ಯ ಮತ್ತು ವಂಚನೆಯ ಕತ್ತಲೆಯನ್ನು ಹೋಗಲಾಡಿಸಿ ಪ್ರೀತಿ, ಸಹೋದರತ್ವ ಹಾಗೂ ಸಾಮರಸ್ಯದ ಬೆಳಕು ಹರಡುವಂತೆ ಕರೆ ನೀಡಿದರು. ಸ್ಥಳೀಯ ಕುಶಲಕರ್ಮಿಗಳು, ಕುಂಬಾರರು ಮತ್ತು ಸಣ್ಣ ವ್ಯಾಪಾರಿಗಳಿಂದ ವಸ್ತುಗಳನ್ನು ಖರೀದಿಸುವಂತೆ ಜನರನ್ನು ಒತ್ತಾಯಿಸಿದರು. ಇದರಿಂದ ಹಬ್ಬದ ಸಂಭ್ರಮ ಅವರ ಮನೆಗಳಲ್ಲಿಯೂ ಸಂತಸ ತರಲಿದೆ ಎಂದರು.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಕೂಡ ಜನರಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದರು. ಗುಜರಾತ್ ಮುಖ್ಯಮಂತ್ರಿ ಕಚೇರಿ ಜನರ ಜೀವನದಲ್ಲಿ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಸಾಮಾಜಿಕ ಸಾಮರಸ್ಯ ನೆಲೆಸಲಿ ಎಂದು ಹಾರೈಸಿತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರತಿಯೊಂದು ಕುಟುಂಬದಲ್ಲೂ ಸಂತೋಷ, ಸಕಾರಾತ್ಮಕತೆ ಮತ್ತು ಕ್ಷೇಮ ನೆಲೆಸಲಿ ಎಂದು ಪ್ರಾರ್ಥಿಸಿದರು.

ಐದು ದಿನಗಳ ದೀಪಾವಳಿ ಸಂಭ್ರಮ ಮೊನ್ನೆ ನವೆಂಬರ್ 6ರಂದು ಧನ್ತೇರಸ್‌ನೊಂದಿಗೆ ಆರಂಭವಾಗಿದ್ದು, ನಿನ್ನೆ ನರಕ ಚತುರ್ದಶಿ ಆರಂಭವಾಗಿದೆ. ಭಾನುವಾರ ಮುಖ್ಯ ದೀಪಾವಳಿ ಹಾಗೂ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತಿದೆ. ನಾಳೆ ಗೋವರ್ಧನ ಪೂಜೆ ಮತ್ತು ನವೆಂಬರ್ 10ರಂದು ಬಲಿಪಾಡ್ಯಮಿ ಇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X