

ನವದೆಹಲಿ: 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಬಹುಮತ ಗಳಿಸಿದ ನಂತರ, ತಾವು ಪ್ರಧಾನ ಮಂತ್ರಿ ಹುದ್ದೆಯನ್ನು ನಿರಾಕರಿಸಿದ ಹಿಂದಿನ ತೀವ್ರ ವೈಯಕ್ತಿಕ ಮತ್ತು ರಾಜಕೀಯ ತೊಳಲಾಟಗಳನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕದಲ್ಲಿ ಅವರು ಈ ರೋಚಕ ಕ್ಷಣಗಳನ್ನು ದಾಖಲಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು 2004ರಲ್ಲಿ ಪ್ರಧಾನಿಯಾಗುವ ಪ್ರಸ್ತಾಪವನ್ನು ಆರಂಭದಲ್ಲಿ ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಆದರೆ ಮೈತ್ರಿಕೂಟದ ನಾಯಕರು ಹುದ್ದೆ ಸ್ವೀಕರಿಸುವಂತೆ ಒತ್ತಡ ಹೇರಿದಾಗ ಕೊನೆಗೆ ಹಿಂಜರಿಕೆಯಿಂದ ‘ಸರಿ’ (ಠೀಕ್ ಹೈ) ಎಂದಿದ್ದರು. ಆದರೂ ಅಂತಿಮವಾಗಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದ್ದರು.
ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸೋನಿಯಾ ಗಾಂಧಿ ಪ್ರಧಾನಿಯಾಗುವುದನ್ನು ವಿರೋಧಿಸಿದ್ದರು.
ತಮ್ಮ ಅಜ್ಜಿ ಇಂದಿರಾ ಗಾಂಧಿ ಹತ್ಯೆ ಹಾಗೂ ತಂದೆ ರಾಜೀವ್ ಗಾಂಧಿ ಅವರ ಕ್ರೂರ ಹತ್ಯೆಯ ಆಘಾತವನ್ನು ಅನುಭವಿಸಿದ್ದ ಅವರು, ಪ್ರಧಾನಿ ಹುದ್ದೆ ವಹಿಸಿಕೊಂಡರೆ ತಾಯಿಗೆ ಅಪಾಯ ಹೆಚ್ಚಾಗಬಹುದು ಎಂಬ ಆತಂಕ ಹೊಂದಿದ್ದರು.
ಆದರೆ, ಈ ನಿರ್ಧಾರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥನ ‘ಬೆಲಾಂಗಿಂಗ್: ಎ ಜರ್ನಿ ಆಫ್ ಲವ್’ನಲ್ಲಿ ಬರೆದುಕೊಂಡಿದ್ದಾರೆ.
ಮಂಗಳವಾರ ಬಿಡುಗಡೆಯಾದ ಈ ಪುಸ್ತಕದಲ್ಲಿ, 2004ರಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಲು ಕಾರಣವಾದ ತಮ್ಮೊಳಗಿನ ಸಂಘರ್ಷದ ಕುರಿತು ಇದೇ ಮೊದಲ ಬಾರಿಗೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಪ್ರಧಾನಿ ಹುದ್ದೆ ಸ್ವೀಕರಿಸಬಾರದು ಎಂಬ ಒಂದು ದೃಢ ನಿರ್ಧಾರ ಮತ್ತು ತಮ್ಮ ನಿರಾಕರಣೆಯಿಂದ ಪಕ್ಷದ ಕಾರ್ಯಕರ್ತರಿಗೆ ನೋವು ಹಾಗೂ ನಿರಾಶೆಯಾಗಬಹುದು ಎಂಬ ಜವಾಬ್ದಾರಿಯ ಭಾವನೆ, ಈ ಎರಡು ವಿಚಾರಗಳ ನಡುವೆ ತಾವು ಹೇಗೆ ತೊಳಲಾಡಿದ್ದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಚುನಾವಣೆಗೆ ಕೆಲವು ತಿಂಗಳುಗಳ ಮೊದಲು, ನಾನು ಪ್ರಧಾನಿಯಾಗುವ ಸಾಧ್ಯತೆಯ ಕುರಿತು ಮಕ್ಕಳೊಂದಿಗೆ ಚರ್ಚಿಸಿದ್ದೆ. ನಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದರೆ ನೀವು ಪ್ರಧಾನಿ ಹುದ್ದೆ ಸ್ವೀಕರಿಸುತ್ತೀರಾ ಎಂದು ಅವರಲ್ಲಿ ಒಬ್ಬರು ನೇರವಾಗಿ ಕೇಳಿದರು.
'ಖಂಡಿತ ಇಲ್ಲ!' ಎಂದು ಬಹುತೇಕ ಆಕ್ರೋಶದಿಂದಲೇ ಉತ್ತರಿಸಿದ್ದೆ. ನಿಜವೇ?' ಎಂದು ಅವರು ಮತ್ತೆ ಕೇಳಿದರು. 'ನನ್ನ ನಿರ್ಧಾರ ಸ್ಪಷ್ಟವಾಗಿದೆ' ಎಂದು ದೃಢವಾಗಿ ಹೇಳಿದ್ದೆ" ಎಂದು 2004ರ ಚುನಾವಣೆಗೆ ಮುನ್ನ ನಡೆದ ಮಾತುಕತೆಯನ್ನು ಸ್ಮರಿಸಿದ್ದಾರೆ.
ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ತಮ್ಮ ತಾಯಿ ಪ್ರಧಾನಿಯಾಗುವುದು ಬೇಡ ಎಂಬ ಅಭಿಪ್ರಾಯ ಹೊಂದಿದ್ದರು. ಅವರು ತಮ್ಮ ಅಜ್ಜಿಯ ಹತ್ಯೆ ಮತ್ತು ತಂದೆಯ ಕ್ರೂರ ಹತ್ಯೆಯ ಆಘಾತವನ್ನು ಅನುಭವಿಸಿದ್ದರು. ಅವರ ದೃಷ್ಟಿಯಲ್ಲಿ ಪ್ರಧಾನಿ ಹುದ್ದೆ ಎಂದರೆ ಹೆಚ್ಚಿನ ಅಪಾಯಕ್ಕೆ ಆಹ್ವಾನ ನೀಡಿದಂತೆ. ನಾನು ಆ ಹುದ್ದೆ ಸ್ವೀಕರಿಸುವುದಿಲ್ಲ ಎಂದು ಹೇಳಿದಾಗ ಅವರಿಬ್ಬರೂ ನಿರಾಳರಾದರು.
ಮೊದಲ ಬಾರಿಗೆ ಈ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಬಹಿರಂಗವಾಗಿ ಹೇಳಿದ್ದರಿಂದ ನನಗೂ ಮನಸ್ಸು ಹಗುರವಾಯಿತು. ಅಲ್ಲಿಗೆ ಆ ಚರ್ಚೆ ಮುಕ್ತಾಯವಾಗಿತ್ತು. ಆ ಬಳಿಕ ನಾನು ಈ ವಿಚಾರವನ್ನು ಬೇರೆಯವರೊಂದಿಗೆ ಪ್ರಸ್ತಾಪಿಸಿರಲಿಲ್ಲ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.
2004ರ ಚುನಾವಣೆಯುದ್ದಕ್ಕೂ ಸಾರ್ವಜನಿಕವಾಗಿ ತಮ್ಮ ಪ್ರಧಾನಿ ಹುದ್ದೆಯ ಸಾಧ್ಯತೆಯ ಕುರಿತು ಪ್ರಶ್ನಿಸಿದಾಗಲೆಲ್ಲ ಸೋನಿಯಾ ಗಾಂಧಿ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡಿದ್ದರು.
ಹಲವು ವರ್ಷಗಳ ಹಿಂದೆ ನಾನು ಈ ಹಂತಕ್ಕೆ ತಂದು ನಿಲ್ಲಿಸಿದ ಪ್ರಯಾಣದ ಮೊದಲ ಹೆಜ್ಜೆ ಇಟ್ಟಾಗ, ನನ್ನ ಪತಿ ಮತ್ತು ಅತ್ತೆ ನನ್ನಿಂದ ಏನನ್ನು ನಿರೀಕ್ಷಿಸುತ್ತಿದ್ದರು ಎಂಬುದು ಹೃದಯಕ್ಕೆ ತಿಳಿದಿತ್ತು. ಅವರು ಜೀವನದುದ್ದಕ್ಕೂ ಹೋರಾಡಿದ ಆಶಯಗಳಿಗಾಗಿ ನನ್ನೊಳಗೆ ಕರ್ತವ್ಯದ ಕರೆಯೊಂದು ಮೂಡಿತ್ತು. ಆದರೆ, ಈಗ ನಾನು ಗೊಂದಲದಲ್ಲಿದ್ದೆ. ನನ್ನೊಳಗಿನ ತೊಳಲಾಟಕ್ಕೆ ಉತ್ತರ ಕಂಡುಕೊಳ್ಳಬೇಕಿತ್ತು.
ನನ್ನ ಭಾವನೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದವು. ಒಂದು ಕ್ಷಣ ನಿರ್ಧಾರ ಸ್ಪಷ್ಟವಾಗಿರುತ್ತಿತ್ತು, ಮರುಕ್ಷಣವೇ ಗೊಂದಲಕ್ಕೆ ಸಿಲುಕುತ್ತಿದ್ದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮನ್ನು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಮನವೊಲಿಸಲು ನಡೆದ ಬಿರುಸಿನ ಮಾತುಕತೆಗಳು ಮತ್ತು ಪ್ರಯತ್ನಗಳನ್ನು ನೆನಪಿಸಿಕೊಂಡಿರುವ ಅವರು, ಆ ಕ್ಷಣಗಳು ನಿಧಾನಗತಿಯಲ್ಲಿ ಸಾಗುವ ಚಲನಚಿತ್ರದ ದೃಶ್ಯಗಳಂತೆ ಕಣ್ಣಮುಂದೆ ಹಾದುಹೋಗುತ್ತಿದ್ದವು ಎಂದು ವಿವರಿಸಿದ್ದಾರೆ.
ತಮ್ಮ ಜನಪಥ್ ನಿವಾಸದ ಕೊನೆಯ ಭಾಗದಲ್ಲಿರುವ ರಾಜೀವ್ ಗಾಂಧಿ ಅವರ ಸಭಾಂಗಣದಲ್ಲಿ ಮೈತ್ರಿಕೂಟದ ಕೆಲವು ನಾಯಕರೊಂದಿಗೆ ನಡೆದ ಸಭೆಯನ್ನೂ ಸೋನಿಯಾ ನೆನಪಿಸಿಕೊಂಡಿದ್ದಾರೆ.
ನಾಯಕರೆಲ್ಲರೂ ಸರದಿಯಂತೆ ಮಾತನಾಡುತ್ತಾ, ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಮನವಿ ಮಾಡುತ್ತಿದ್ದರು. ಆದರೆ ತಾವು ಮೌನವಾಗಿ ಆಲಿಸುತ್ತಿದ್ದುದಾಗಿ ತಿಳಿಸಿದ್ದಾರೆ.
ಚರ್ಚೆ ಮುಗಿದ ಬಳಿಕ ಎಲ್ಲರೂ ನನ್ನ ಉತ್ತರಕ್ಕಾಗಿ ಕಾಯುತ್ತಿದ್ದರು. ಸಾಧ್ಯವಾದಷ್ಟು ಧೈರ್ಯ ಒಟ್ಟುಗೂಡಿಸಿ ನನ್ನ ನಿರ್ಧಾರ ಹೇಳಲು ಮುಂದಾದೆ. ತಕ್ಷಣವೇ ಅಲ್ಲಿದ್ದ ನಾಯಕರಲ್ಲಿ ಗದ್ದಲ ಉಂಟಾಯಿತು. ಅವರೆಲ್ಲರೂ ಎದ್ದು ನನ್ನತ್ತ ಬಂದರು. ನಾನೂ ಎದ್ದು ನಿಂತೆ. ಅವರು ನನ್ನನ್ನು ಸುತ್ತುವರಿದರು.
'ನಾವು ಇದನ್ನು ಒಪ್ಪುವುದಿಲ್ಲ' ಎಂದು ಒಬ್ಬರು ಹೇಳಿದರು. 'ಮೇಡಂ, ನೀವು ಈ ನಿರ್ಧಾರ ತೆಗೆದುಕೊಳ್ಳುವಂತಿಲ್ಲ' ಎಂದು ಮತ್ತೊಬ್ಬರು ಹೇಳಿದರು. ಅವರ ಧ್ವನಿ ಬಲವಾಗಿತ್ತು, ಬಹುತೇಕ ಆಕ್ರಮಣಕಾರಿಯಾಗಿತ್ತು. 'ನಿಮ್ಮ ಇಲ್ಲ ಎಂಬ ಉತ್ತರವನ್ನು ನಾವು ಒಪ್ಪಿಕೊಳ್ಳುವುದಿಲ್ಲ' ಎಂದರು.
ಇದರಿಂದ ನಾನು ವಿಚಲಿತಳಾದೆ. ನಂತರ ಅವರ ಒತ್ತಡಕ್ಕೆ ಮಣಿದು'ಠೀಕ್ ಹೈ' (ಸರಿ) ಎಂದು ಬಹುತೇಕ ಕೇಳಿಸದಷ್ಟು ಮೆಲ್ಲಗೆ ಹೇಳಿದೆ. ನಾನು ಮಾತು ಮುಗಿಸುವ ಮೊದಲೇ ಅಲ್ಲಿದ್ದ ನಾಯಕರು ನನ್ನ ಒಪ್ಪಿಗೆಯನ್ನು ಸ್ವಾಗತಿಸಿ ಒಬ್ಬೊಬ್ಬರಾಗಿ ಅಭಿನಂದಿಸಲು ಆರಂಭಿಸಿದರು.
ಆ ಸಂದರ್ಭದಲ್ಲಿ ಪ್ರಿಯಾಂಕಾ ಸಭಾಂಗಣದ ಹೊರಗೆ ನಿಂತಿದ್ದರು. ತಾಯಿ ಪ್ರಧಾನಿ ಹುದ್ದೆ ಒಪ್ಪಿಕೊಂಡಿದ್ದಾರೆ ಎಂಬ ಮಾತು ಕೇಳುತ್ತಿದ್ದಂತೆ ಕಣ್ಣೀರು ಸುರಿಸುತ್ತಾ ಮನೆಯೊಳಗೆ ಓಡಿಹೋಗಿ ರಾಹುಲ್ ಅವರನ್ನು ಹುಡುಕಿದರು.
ತಮ್ಮ ತಾಯಿ ನಾಯಕರ ಮನವಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಪ್ರಿಯಾಂಕಾ ಹೇಳುತ್ತಿದ್ದಂತೆ ರಾಹುಲ್ ಆಘಾತಗೊಂಡರು.
"ಅಮ್ಮ ಏನು ಮಾಡಿದ್ದಾರೆ! ಅವರು ಎಲ್ಲಿದ್ದಾರೆ?" ಎಂದು ಪ್ರಶ್ನಿಸಿ, ಇಬ್ಬರೂ ಆತಂಕದಿಂದ ನಾನಿದ್ದಲ್ಲಿಗೆ ಧಾವಿಸಿದರು. ತಂದೆಯ ನಿಧನದ ಬಳಿಕ ತಾಯಿಯನ್ನು ರಕ್ಷಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಭಾವಿಸಿದ್ದ ಆ ಇಬ್ಬರು ಮಕ್ಕಳಿಗೆ ನನ್ನ ನಿರ್ಧಾರ ಆಘಾತ ತಂದಿತ್ತು ಎಂದು ಸೋನಿಯಾ ವಿವರಿಸಿದ್ದಾರೆ.
"'ನೀವು ಒಪ್ಪಿಕೊಂಡಿದ್ದೀರಾ?' ಎಂದು ರಾಹುಲ್ ಗಟ್ಟಿಯಾಗಿ ಪ್ರಶ್ನಿಸಿದರು. 'ಅವರು ನನ್ನ ಮಾತು ಕೇಳಲಿಲ್ಲ. ನನಗೆ ಈ ಹುದ್ದೆ ಬೇಡ ಎಂಬುದು ನಿನಗೆ ಗೊತ್ತಿದೆ. ಅವರು ಒತ್ತಡ ಹೇರುತ್ತಿದ್ದರು' ಎಂದು ನಾನು ಉತ್ತರಿಸಿದೆ. 'ಒತ್ತಡವೇ? ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆಯೇ? ಹಾಗಾದರೆ ನಮ್ಮ ಬಗ್ಗೆ ಏನು?' ಎಂದು ಪ್ರಶ್ನಿಸಿದ ರಾಹುಲ್ ಕೋಪದಿಂದ ಅಲ್ಲಿಂದ ಹೊರಟುಹೋದರು.
'ನೋಡಿ ಅಮ್ಮ, ನೀವು ಈ ವಿಚಾರದಲ್ಲಿ ಯಾವಾಗಲೂ ಸ್ಪಷ್ಟವಾಗಿದ್ದೀರಿ. ಯಾರ ಒತ್ತಾಯಕ್ಕೂ ಮಣಿಯಬೇಡಿ. ನೀವು ನಿರ್ಧರಿಸಿದಂತೆ ಮಾಡಿ. ಅದನ್ನು ನಿಭಾಯಿಸಲು ನಾವಿಬ್ಬರೂ ನಿಮ್ಮೊಂದಿಗಿದ್ದೇವೆ' ಎಂದು ಪ್ರಿಯಾಂಕಾ ಹೇಳಿದರು" ಎಂದು ಸೋನಿಯಾ ನೆನಪಿಸಿಕೊಂಡಿದ್ದಾರೆ.
ನಂತರ ಅವರು ತಮ್ಮ ಮಲಗುವ ಕೋಣೆಗೆ ತೆರಳಿ, ಎಂದಿನಂತೆ ಪತಿ ರಾಜೀವ್ ಗಾಂಧಿ ಮಲಗುತ್ತಿದ್ದ ಮಂಚದ ಭಾಗದಲ್ಲಿ ಮೌನವಾಗಿ ಮಲಗಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
"ನನ್ನೊಳಗಿನ ಒಂದು ಧ್ವನಿ, 'ಸೋನಿಯಾ, ಇದೆಂತಹ ಅಸಂಬದ್ಧ ಪ್ರಸ್ತಾಪ! ನೀನು ಇಟಲಿಯಲ್ಲಿ ಹುಟ್ಟಿ ಬೆಳೆದವಳು. ಜಗತ್ತಿನ ಇನ್ನೊಂದು ತುದಿಯಲ್ಲಿರುವ ಒಂದು ಶತಕೋಟಿಗೂ ಹೆಚ್ಚು ಜನರಿರುವ ದೇಶವನ್ನು ಮುನ್ನಡೆಸಲು ನಿನ್ನನ್ನು ಆಯ್ಕೆ ಮಾಡಲಾಗುತ್ತಿದೆ' ಎಂದು ಹೇಳುತ್ತಿತ್ತು.
ಮತ್ತೊಂದು ಧ್ವನಿ, 'ಇದು ನಿನ್ನ ದೇಶ. ನಿನ್ನ ಪ್ರೌಢ ಜೀವನವನ್ನೆಲ್ಲ ನೀನು ಈ ದೇಶಕ್ಕೆ ಅರ್ಪಿಸಿದ್ದೀಯ. ನೀನು ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡಾಗ ಈ ದೇಶ ನಿನ್ನನ್ನು ತನ್ನವಳಂತೆ ಅಪ್ಪಿಕೊಂಡಿತು. ಇಲ್ಲಿನ ಜನರು ನಿನ್ನ ನೋವಿನ ದಿನಗಳಲ್ಲಿ ಸಾಂತ್ವನ ನೀಡಿ, ನಿನ್ನನ್ನು ಕಾಪಾಡಿದ್ದಾರೆ. ನಿನ್ನ ಮೇಲೆ ಮತ್ತು ನಿನ್ನ ಪಕ್ಷದ ಮೇಲೆ ನಂಬಿಕೆ ಇಟ್ಟಿರುವ ಜನರ ಜವಾಬ್ದಾರಿಯನ್ನು ನೀನು ಹೇಗೆ ಕೈಬಿಡುತ್ತೀಯ?' ಎಂದು ಪ್ರಶ್ನಿಸುತ್ತಿತ್ತು.
ಈ ಭಾವನಾತ್ಮಕ ಸಂಘರ್ಷದ ನಡುವೆ ರಾಜೀವ್ ಗಾಂಧಿ ಅವರ ಸಾಂತ್ವನದ ಸಾನ್ನಿಧ್ಯಕ್ಕಾಗಿ ಹಂಬಲಿಸಿದ್ದಾಗಿ ಸೋನಿಯಾ ತಿಳಿಸಿದ್ದಾರೆ.
"ದಣಿವಿನಿಂದ ನಿದ್ರೆಗೆ ಜಾರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಕೊನೆಯ ಅನುಮಾನಗಳೂ ಇದ್ದಕ್ಕಿದ್ದಂತೆ ದೂರವಾದವು. 'ಸೋನಿಯಾ, ನಿನಗೆ ನೀನು ನಿಷ್ಠಳಾಗಿರು. ನಿನಗೆ ಮೊದಲಿನಿಂದಲೂ ಏನು ಮಾಡಬೇಕೆಂಬುದು ಗೊತ್ತಿದೆ. ನಿನ್ನ ನಿರ್ಧಾರಕ್ಕೆ ಬದ್ಧಳಾಗಿರು' ಎಂಬ ಧ್ವನಿ ನನ್ನೊಳಗೆ ಕೇಳಿಸಿತು. ಕೆಲವು ಗಂಟೆಗಳ ಬಳಿಕ ಎಚ್ಚರಗೊಂಡ ನಾನು ನೇರವಾಗಿ ನನ್ನ ಮಗನ ಕೊಠಡಿಗೆ ತೆರಳಿ ಬಾಗಿಲು ತಟ್ಟಿದೆ.
'ನಾನು ನಿರ್ಧಾರ ಮಾಡಿದ್ದೇನೆ. ನನ್ನ ನಿಲುವಿಗೆ ಬದ್ಧಳಾಗಿರುತ್ತೇನೆ' ಎಂದು ರಾಹುಲ್ಗೆ ತಿಳಿಸಿದೆ. ಅವರು ನನ್ನ ಬಳಿ ಬಂದು ಅಪ್ಪಿಕೊಂಡು, 'ಇದು ಸರಿಯಾದ ನಿರ್ಧಾರ' ಎಂದರು" ಎಂದು ಸೋನಿಯಾ ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ.
ಬಳಿಕ ಸಂಸತ್ತಿನಲ್ಲಿ ಪ್ರಧಾನಿ ಹುದ್ದೆ ನಿರಾಕರಿಸಿ, ಡಾ. ಮನಮೋಹನ್ ಸಿಂಗ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ ನಾಟಕೀಯ ಕ್ಷಣಗಳನ್ನೂ ಅವರು ಸ್ಮರಿಸಿದ್ದಾರೆ.
ತಾವು ಪ್ರಧಾನಿ ಹುದ್ದೆ ಸ್ವೀಕರಿಸುವಂತೆ ಸಂಸತ್ತಿನಲ್ಲಿ ಒಬ್ಬರಾದ ಮೇಲೊಬ್ಬರು ಮನವಿ ಮಾಡಿದ್ದರು. ಆದರೆ ತಮ್ಮ 'ಒಳಧ್ವನಿ'ಯ ಮಾತನ್ನು ಆಲಿಸಿ ಈ ಹುದ್ದೆಯನ್ನು ವಿನಮ್ರವಾಗಿ ನಿರಾಕರಿಸುವುದಾಗಿ ಘೋಷಿಸಿದಾಗ ಸಂಸತ್ತಿನಲ್ಲಿ ಗದ್ದಲ ಉಂಟಾಗಿತ್ತು ಎಂದು ಹೇಳಿದ್ದಾರೆ.
ಸ್ವಲ್ಪ ಸಮಯದ ಬಳಿಕ ಮತ್ತೆ ಸಂಸತ್ತಿಗೆ ಮರಳಿದ ಸೋನಿಯಾ, ತಮ್ಮ ಉತ್ತರಾಧಿಕಾರಿಯನ್ನು ಸೂಚಿಸಲು ಅವಕಾಶ ನೀಡುವಂತೆ ಸಂಸದರನ್ನು ಕೋರಿದರು. ಎಲ್ಲರೂ ಒಪ್ಪಿಗೆ ಸೂಚಿಸಿದ ಬಳಿಕ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಘೋಷಿಸಿದರು.
"ನಾನು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕತ್ವದಿಂದ ಹಿಂದೆ ಸರಿದು, ಡಾ. ಸಿಂಗ್ ಅವರನ್ನು ಅದರ ನಾಯಕರನ್ನಾಗಿ ನಾಮನಿರ್ದೇಶನ ಮಾಡಿದೆ. ಮತ್ತೊಮ್ಮೆ ಸಂಸತ್ತಿನಲ್ಲಿ ಚಪ್ಪಾಳೆಗಳ ಮೊರೆತ ಮೊಳಗಿತು. ಎಲ್ಲರೂ ಎದ್ದು ನಿಂತರು. ಕೆಲವರು ಘೋಷಣೆಗಳನ್ನು ಕೂಗಿದರು, ಮತ್ತೆ ಕೆಲವರ ಕಣ್ಣಲ್ಲಿ ನೀರು ತುಂಬಿತ್ತು. ನನ್ನ ಮಕ್ಕಳೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿರುವುದನ್ನು ಗಮನಿಸಿದೆ. ನಂತರ ವೇದಿಕೆಯ ಮೇಲಿದ್ದ ನನ್ನ ದಾಖಲೆಗಳನ್ನು ತೆಗೆದುಕೊಂಡು ಹೊರನಡೆದೆ. ಕೊನೆಗೂ ಆ ಸಂಕಷ್ಟದ ಕ್ಷಣಗಳು ಮುಗಿದಿದ್ದವು" ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ.