bad touch ಗೆ ವಿರೋಧ, ಮಹಿಳೆಯನ್ನು ಮುಂಬೈ ಲೋಕಲ್‌ನಿಂದ ತಳ್ಳಿದ ವ್ಯಕ್ತಿ; ಕೈ ಕಳೆದುಕೊಂಡ ಸಂತ್ರಸ್ತೆ!

ಆರೋಪಿಯ ವಿರುದ್ಧ ಸೆಕ್ಷನ್ 109 (ಕೊಲೆ ಯತ್ನ) ನ್ನು ಸೇರಿಸದಿರುವ ಕಾರಣ, ಪೊಲೀಸರ ತನಿಖೆಯ ಪಾರದರ್ಶಕತೆ ಬಗ್ಗೆ ಯುವತಿಯ ಕುಟುಂಬವು ಸಂಶಯ ವ್ಯಕ್ತಪಡಿಸಿದೆ.
The victim who lost her arm after allegedly being pushed off a Mumbai local train
ಮುಂಬೈ ರೈಲಿನಿಂದ ತಳ್ಳಲ್ಪಟ್ಟ ಮಹಿಳೆ online desk
Updated on: 

ಮುಂಬೈ ಲೋಕಲ್ ರೈಲಿನಲ್ಲಿ ಸಹ ಪ್ರಯಾಣಿಕನೊಬ್ಬನ 'ಅಸಭ್ಯ ಸ್ಪರ್ಶ'ವನ್ನು (bad touch) ವಿರೋಧಿಸಿದ್ದಕ್ಕಾಗಿ, ಆ ವ್ಯಕ್ತಿ ತನ್ನನ್ನು ರೈಲಿನಿಂದ ಹೊರಗೆ ತಳ್ಳಿದನು ಎಂದು ಯುವತಿಯೊಬ್ಬಳು ಆರೋಪಿಸಿದ್ದು, ಘಟನೆಯಲ್ಲಿ ಆಕೆ ತನ್ನ ಎಡಗೈಯನ್ನು ಕಳೆದುಕೊಂಡಿದ್ದಾಳೆ.

ಆಕೆಯ ತಲೆಗೆ 16 ಹೊಲಿಗೆಗಳು ಬಿದ್ದಿವೆ. ಈ ಘಟನೆ ಸ್ಥಳೀಯ ರೈಲುಗಳಲ್ಲಿ ಮಹಿಳಾ ಸುರಕ್ಷತೆಯ ವಿಷಯವನ್ನು ಮುನ್ನೆಲೆಗೆ ತಂದಿದೆ.

ನೈಗಾಂವ್ ಪೂರ್ವದ ನಿವಾಸಿ, 53 ವರ್ಷದ ಜಿತೇಂದ್ರ ಹಿರ್ಮುಖೆ ಎಂಬ ವ್ಯಕ್ತಿಯನ್ನು ಘಟನೆ ಸಂಬಂಧ ಬಂಧಿಸಲಾಗಿದೆ. ಈ ಯುವತಿ ಬೋರಿವಲಿಯಿಂದ ವಿರಾರ್‌ಗೆ ತೆರಳುತ್ತಿದ್ದ ಲೋಕಲ್ ರೈಲನ್ನು ಹತ್ತಿದ್ದಳು. ನೈಗಾಂವ್ ನಿಲ್ದಾಣದ ಬಳಿ ಆಕೆಯನ್ನು ರೈಲಿನಿಂದ ಹೊರಗೆ ತಳ್ಳಲಾಗಿದೆ.

ಯುವತಿ ನೀಡಿರುವ ದೂರಿನ ಪ್ರಕಾರ, ಆರೋಪಿಯು ಪದೇ ಪದೇ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದ.

ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಟ್ಟಿಗೆದ್ದ ಯುವತಿ ತನ್ನ ಚಪ್ಪಲಿಯನ್ನು ಆತನತ್ತ ಎಸೆದಳು, ಇದರಿಂದಾಗಿ ಇಬ್ಬರ ನಡುವೆ ಜಗಳ ಉಂಟಾಯಿತು.

ಘಟನಾ ಸ್ಥಳದಲ್ಲಿದ್ದ ಇತರ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ, ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ, ತನ್ನ ಚಪ್ಪಲಿಯನ್ನು ಯುವತಿಯತ್ತ ಎಸೆದನು.

ರೈಲು ನೈಗಾಂವ್ ನಿಲ್ದಾಣಕ್ಕೆ ಬಂದಾಗಲೂ ಜಗಳ ಮುಂದುವರಿಯಿತು. ಈ ವೇಳೆ ಆರೋಪಿಯು ಯುವತಿಯನ್ನು ರೈಲಿನಿಂದ ಹೊರಗೆ ತಳ್ಳಿದನು, ಪರಿಣಾಮವಾಗಿ ಆಕೆ ಎರಡು ಬೋಗಿಗಳ ನಡುವಿನ ಅಂತರಕ್ಕೆ ಬಿದ್ದಳು.

ಆಕೆ ಮತ್ತೆ ಪ್ಲಾಟ್‌ಫಾರ್ಮ್‌ಗೆ ಹತ್ತಲು ಪ್ರಯತ್ನಿಸುತ್ತಿದ್ದಾಗ ರೈಲು ಚಲಿಸಲು ಪ್ರಾರಂಭಿಸಿತು, ಆಗ ಆಕೆಯ ಎಡಗೈ ರೈಲಿನ ಚಕ್ರಗಳ ಅಡಿಯಲ್ಲಿ ಸಿಲುಕಿಕೊಂಡಿತು. ಇದರಿಂದ ಆಕೆಗೆ ತೀವ್ರ ಗಾಯಗಳಾಗಿದ್ದು, ಮೊಣಕೈ ಬಳಿ ತುಂಡಾಗಿದ್ದು ಕೈಯನ್ನು ಕಳೆದುಕೊಂಡಿದ್ದಾಳೆ.

ಪೊಲೀಸ್ ಅಧಿಕಾರಿಯೊಬ್ಬರು ಮತ್ತು ಇತರ ಪ್ರಯಾಣಿಕರು ಆಕೆಯನ್ನು ಮತ್ತೆ ಪ್ಲಾಟ್‌ಫಾರ್ಮ್‌ಗೆ ಬರಲು ಸಹಾಯ ಮಾಡಿದರು. ಈ ಗೊಂದಲದ ಲಾಭ ಪಡೆದುಕೊಂಡ ಆರೋಪಿ ಸ್ಥಳದಿಂದ ಪರಾರಿಯಾದ. ಆದರೆ, ಕೆಲವೇ ಗಂಟೆಗಳ ನಂತರ ಆತನನ್ನು ಬಂಧಿಸಲಾಯಿತು.

The victim who lost her arm after allegedly being pushed off a Mumbai local train
'ನನ್ನ ಜೊತೆ SEX ಮಾಡ್ತೀರಾ?' ಮಹಿಳೆಗೆ ಬೈಕ್ ಟ್ಯಾಕ್ಸಿ ರೈಡರ್‌ ಅಸಭ್ಯ ಪ್ರಶ್ನೆ!

"ನಾನು ನೈಗಾಂವ್‌ಗೆ ಹೋಗುತ್ತಿದ್ದೆ. ಬೋರಿವಲಿಯಲ್ಲಿ ರೈಲು ಹತ್ತಿದ್ದೆ. ನೈಗಾಂವ್ ನಿಲ್ದಾಣ ಸಮೀಪಿಸುತ್ತಿದ್ದಂತೆ, ನನ್ನನ್ನು ಅಸಭ್ಯವಾಗಿ ಸ್ಪರ್ಶಿಸುತ್ತಿದ್ದ ವ್ಯಕ್ತಿಯೊಬ್ಬ ನನ್ನ ಮೇಲೆ ದೌರ್ಜನ್ಯವೆಸಗಲು ಪ್ರಾರಂಭಿಸಿದನು. ನಾನು ಅವನನ್ನು ಪ್ರಶ್ನಿಸಿದೆ. ರೈಲಿನಿಂದ ಇಳಿದ ಮೇಲೂ ಅವನು ನನ್ನನ್ನು ಅಸಭ್ಯವಾಗಿ ಸ್ಪರ್ಶಿಸುವುದನ್ನು ಮುಂದುವರಿಸಿದನು. ನಾನು ಅವನನ್ನು, 'ನಿಮ್ಮ ಮನೆಯಲ್ಲಿ ತಾಯಿ ಅಥವಾ ಸಹೋದರಿ ಇಲ್ಲವೇ?' ಎಂದು ಕೇಳಿದೆ. ಆದರೂ, ಅವನು ನನ್ನ ಮೇಲೆ ದೌರ್ಜನ್ಯವೆಸಗುವುದನ್ನು ನಿಲ್ಲಿಸಲಿಲ್ಲ," ಎಂದು ಆ ಯುವತಿ ಎನ್‌ಡಿಟಿವಿ (NDTV) ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ. "ನಾನು ಅವನನ್ನು ನಿಂದಿಸಿದೆ ಪ್ರತಿಯಾಗಿ ಆತನೂ ನನ್ನನ್ನು ನಿಂದಿಸಿದ.

ನಾನು ನನ್ನ ಚಪ್ಪಲಿಯಿಂದ ಹೊಡೆದು ಅವನನ್ನು ಓಡಿಸಲು ಪ್ರಯತ್ನಿಸಿದಾಗ, ಅವನು ತನ್ನ ಚಪ್ಪಲಿಯಿಂದಲೇ ನನಗೆ ಹೊಡೆದ. ನಂತರ, ಅವನು ನನ್ನನ್ನು ರೈಲಿನಿಂದ ಹೊರಗೆ ತಳ್ಳಿದ. ನನಗೆ ನ್ಯಾಯ ಬೇಕು. ನನ್ನ ಇಡೀ ಜೀವನವೇ ಹಾಳಾಗಿದೆ. ಮನೆಯ ಜವಾಬ್ದಾರಿ ಸೇರಿದಂತೆ ಎಲ್ಲವನ್ನೂ ನಾನೇ ನೋಡಿಕೊಳ್ಳುತ್ತಿದ್ದೆ. ಈಗ ಒಂದೇ ಕೈಯಿಂದ ನಾನೇನು ಮಾಡಲು ಸಾಧ್ಯ? ನನ್ನ ತಲೆಗೆ 16 ಹೊಲಿಗೆಗಳನ್ನು ಹಾಕಲಾಗಿದೆ. ನನಗೆ ನ್ಯಾಯ ಸಿಗಬೇಕು. ದಯವಿಟ್ಟು ನಾನು ಬೇಗ ಗುಣಮುಖಳಾಗಲೆಂದು ಪ್ರಾರ್ಥಿಸಿ. ಅಲ್ಲದೆ, ಅವನಿಗೆ ಶಿಕ್ಷೆಯಾಗಲೇಬೇಕು," ಎಂದು ಅವರು ಹೇಳಿದರು.

ಆರೋಪಿಯ ವಿರುದ್ಧ ಸೆಕ್ಷನ್ 109 (ಕೊಲೆ ಯತ್ನ) ನ್ನು ಸೇರಿಸದಿರುವ ಕಾರಣ, ಪೊಲೀಸರ ತನಿಖೆಯ ಪಾರದರ್ಶಕತೆ ಬಗ್ಗೆ ಯುವತಿಯ ಕುಟುಂಬವು ಸಂಶಯ ವ್ಯಕ್ತಪಡಿಸಿದೆ.

ಕುಟುಂಬ ಎಂಎನ್‌ಎಸ್ (MNS) ಪಕ್ಷದ ಸಹಾಯ ಕೋರಿದ ನಂತರ, ಪಕ್ಷದ ಪದಾಧಿಕಾರಿಗಳು ಜಿಆರ್‌ಪಿ (ಸರ್ಕಾರಿ ರೈಲ್ವೆ ಪೊಲೀಸ್) ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಭೇಟಿಯಾದರು. ಸಂಬಂಧಿತ ಸೆಕ್ಷನ್‌ಗಳನ್ನು ಶೀಘ್ರದಲ್ಲೇ ಸೇರಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X