

ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಡಾ. ರೋಹಿಣಿ ಆಚಾರ್ಯ ಅವರು, 'ಛತ್' ಹಬ್ಬದ ಅಂಗವಾಗಿ ಶನಿವಾರ ರಾತ್ರಿ ರಾಜಕೀಯ ಬದ್ಧವೈರಿ 'ನಿತೀಶ್ ಚಾಚಾ' (ನಿತೀಶ್ ಕುಮಾರ್) ಅವರ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
"ಅವರು ನನ್ನ ಚಿಕ್ಕಪ್ಪ(ಚಾಚಾ), ಹಾಗಾಗಿ 'ಖರ್ನಾ'ದ ಪ್ರಸಾದವನ್ನು ಸ್ವೀಕರಿಸಲು ನಾನು ಅವರ ಮನೆಗೆ ಹೋಗುತ್ತೇನೆ" ಎಂದು ಡಾ. ರೋಹಿಣಿ ಆಚಾರ್ಯ ಅವರು ಪಾಟ್ನಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಿತೀಶ್ ಕುಮಾರ್ ಅವರು ತಮ್ಮ 'ಚಿಕ್ಕಪ್ಪ' ಆಗಿರುವುದರಿಂದ, ತಮಗೆ ಯಾವುದೇ ಆಹ್ವಾನದ ಅಗತ್ಯವಿಲ್ಲ ಎಂದು ಅವರು ಹೇಳಿದರು.
ರೋಹಿಣಿ ಅವರ ತಂದೆ(ರಾಷ್ಟ್ರೀಯ ಜನತಾ ದಳದ ಸಂಸ್ಥಾಪಕರು) ಲಾಲು ಪ್ರಸಾದ್ ಯಾದವ್ ಮತ್ತು ಜನತಾ ದಳ-ಯುನೈಟೆಡ್‌ನ ಮುಖ್ಯಸ್ಥ ನಿತೀಶ್ ಕುಮಾರ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ವಿವಿಧ ಹಂತಗಳಲ್ಲಿ ಮಿತ್ರರಾಗಿಯೂ, ಎದುರಾಳಿಗಳಾಗಿಯೂ ಇದ್ದಾರೆ.
ಸಿಂಗಾಪುರದಲ್ಲಿ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿರುವ ಡಾ. ರೋಹಿಣಿ ಆಚಾರ್ಯ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಸಾರಣ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು.
ನಾಲ್ಕು ದಿನಗಳ ಕಾಲ ನಡೆಯುವ 'ಛತ್ ಪೂಜೆ'ಯ ಎರಡನೇ ದಿನವನ್ನು 'ಖರ್ನಾ' ಎಂದು ಕರೆಯಲಾಗುತ್ತದೆ. ಈ ದಿನ ವಿವಾಹಿತ ಮಹಿಳೆಯರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗಾಗಿ 'ಖೀರ್' (ಪಾಯಸ) ತಯಾರಿಸುತ್ತಾರೆ. ತದನಂತರ, ಅವರು 36 ಗಂಟೆಗಳ ಕಾಲ ಉಪವಾಸ ವ್ರತವನ್ನು ಆಚರಿಸುತ್ತಾರೆ. ಸೂರ್ಯನಿಗೆ ಪೂಜೆ ಸಲ್ಲಿಸಿದ ಬಳಿಕ ಈ ಉಪವಾಸವನ್ನು ಮುಕ್ತಾಯಗೊಳಿಸುತ್ತಾರೆ.